ಕನ್ನಡಪ್ರಭ ವಾರ್ತೆ ಮಂಗಳೂರು
ಕರಾವಳಿಯಲ್ಲಿ ಹಿಂದುಗಳ ಹಬ್ಬದ ಆಚರಣೆ ಹಾಗೂ ಮೆರವಣಿಗೆ ನಡೆಸಲು ನಿಯದಂತೆ ರಿಯಾಯ್ತಿ ಮತ್ತು ಅನುಮತಿ ನೀಡುವಂತೆ ದ.ಕ. ಜಿಲ್ಲಾಡಳಿತಕ್ಕೆ ವಿಶ್ವಹಿಂದು ಪರಿಷತ್ ಮನವಿ ಸಲ್ಲಿಸಿದೆ.ಈ ಕುರಿತು ಮಂಗಳೂರಿನ ವಿಹಿಂಪ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಹಿಂಪ ಪ್ರಾಂತ ಸಹಕ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಹಿಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಶಾಂತಿ ಕದಡಿದ ಉದಾಹರಣೆ ಇಲ್ಲ. ಉತ್ಸವಗಳ ಮೆರವಣಿಗೆ ವೇಳೆ ಡಿಜೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ಆದರೆ ರಾತ್ರಿ 10.30ರೊಳಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು ಹಾಗೂ ಧ್ವನಿವರ್ಧಕ ಬಳಕೆಗೆ ಕಡಿವಾಣ ಹಾಕುವುದನ್ನು ಒಪ್ಪಲು ಸಾಧ್ಯವಿಲ್ಲ. ಪೊಲೀಸ್ ಇಲಾಖೆ ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತಿರುವ ಈ ನಿಯಮವನ್ನು ಸಡಿಲಿಸುವ ಬಗ್ಗೆ ಮಧ್ಯಪ್ರವೇಶಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾಗಿ ಹೇಳಿದರು.
ಶಬ್ದ ಮಾಲಿನ್ಯ ನಿಯಂತ್ರಣ ನಿಯಮಾವಳಿ 2000ದ ನಿಯಮ 5(3)ರಲ್ಲಿ ಪ್ರದತ್ತವಾದ ಅಧಿಕಾರ ಉಪಯೋಗಿಸಿ ಜಿಲ್ಲೆಯಲ್ಲಿ ಆ. 27ರಿಂದ 31 ಹಾಗೂ ಸೆಪ್ಟೆಂಬರ್ 2 ರಂದು ಗಣೇಶೋತ್ಸವ ಹಾಗೂ ಮೆರವಣಿಗೆಗೆ ಹಾಗೂ ಅಕ್ಟೋಬರ್ 1 ರಿಂದ 3 ರವರೆಗೆ ದಸರಾ ನಿಮಿತ್ತ ರಿಯಾಯ್ತಿ ನೀಡಿ ಅನುಕೂಲ ಮಾಡಿಕೊಡಬೇಕು. ಅಂದರೆ ವಾರ್ಷಿಕ 15 ದಿನ ರಾತ್ರಿ 12 ಗಂಟೆ ವರೆಗೂ ಉತ್ಸವಗಳಿಗೆ ಅನುಮತಿ ನೀಡಲು ಅವಕಾಶ ಇದೆ. ಇದೇ ರೀತಿಯ ಅನುಮತಿಯನ್ನು ಮೊನ್ನೆ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳಿಗೆ ತಡ ರಾತ್ರಿ ವರೆಗೂ ನೀಡಲಾಗಿದೆ. ಅದನ್ನೇ ಹಿಂದು ಹಬ್ಬಗಳಿಗೆ ಅನ್ವಯಿಸಬೇಕು. ಇಲ್ಲದಿದ್ದರೆ ಧ್ವನಿವರ್ಧಕವೇ ಮೊದಲಾದ ಉಪಕರಣಗಳನ್ನು ಹೊಂದಿರುವವರಿಗೂ ಜೀವನದ ಆದಾಯಕ್ಕೆ ಹೊಡೆತ ಉಂಟಾಗುತ್ತದೆ ಎಂದು ಶರಣ್ ಪಂಪ್‌ವೆಲ್ ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ವಿರುದ್ಧದ ಷಡ್ಯಂತರ ನಿಲ್ಲಬೇಕು. ಪ್ರಸಕ್ತ ಎಸ್‌ಐಟಿ ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಹೊರಗೆ ಬರಬೇಕು ಎಂದರು.
ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಮುಖಂಡರಾದ ಗೋಪಾಲ್ ಕುತ್ತಾರ್, ಪ್ರದೀಪ್ ಸರಿಪಲ್ಲ, ಮನೋಹರ ಸುವರ್ಣ, ಪೊಳಲಿ ಗಿರಿಪ್ರಕಾಶ್ ತಂತ್ರಿ ಇದ್ದರು.