ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಹನುಮ ಜಯಂತಿ ವೇಳೆ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳ ಗುಂಪೊಂದು ಹನುಮ ಜಯಂತಿ ವೇಳೆ ಆಟೋ ಚಾಲಕನನ್ನು ಅಟ್ಟಾಡಿಸಿಕೊಂಡು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ಆರೋಪಿಗಳನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಲಕ್ಕಸಂದ್ರದ ಲಾಲ್‌ಜಿ ನಗರ ನಿವಾಸಿ ಶರತ್ ಚಂದ್ರ ಅಲಿಯಾಸ್ ಪುಳಿಯೊಗರೆ(29), ಬಿಟಿಎಂ ಲೇಔಟ್ 2ನೇ ಹಂತದ ದಿಲೀಪ್ ಅಲಿಯಾಸ್ ಲಕ್ಕಸಂದ್ರ ದಿಲೀಪ್(27), ಜಯನಗರ 1ನೇ ಬ್ಲಾಕ್ ಬೈರಸಂದ್ರ ನಿವಾಸಿ ರವಿಕುಮಾರ್(28), ಜೆ.ಪಿ.ನಗರ 6ನೇ ಹಂತದ ಆರ್.ಅಭಿಷೇಕ್(26), ಕೋರಮಂಗಲ 6ನೇ ಬ್ಲಾಕ್‌ನ ಸುಬೇಂದು ಅಲಿಯಾಸ್ ಕಣ್ಣ(22), ಕೊಲೆಗೆ ಸಹಕರಿಸಿದ ಲಕ್ಕಸಂದ್ರದ ಆಂಟೋನಿ ಅಲಿಯಾಸ್ ಟೋನಿ(28), ಆಡುಗೋಡಿಯ ಹರೀಶ್(23), ವಿಲ್ಸನ್ ಗಾರ್ಡನ್ ಬಾಲಸುಬ್ರಹ್ಮಣ್ಯಂ (31), ಕೋರಮಂಗಲ 6ನೇ ಬ್ಲಾಕ್‌ನ ಸತೀಶ್(25), ಎಸ್‌ಡಿಎಸ್ ಟೀಬಿ ಹಾಸ್ಪಿಟಲ್ ಕ್ವಾರ್ಟ್ರಸ್‌ನ ದಿಲೀಪ್ ಕುಮಾರ್ ಅಲಿಯಾಸ್ ನಿಮ್ಹಾನ್ಸ್ ದಿಲೀಪ್(30) ಬಂಧಿತರು.
ಬಂಧಿತ ಆರೋಪಿಗಳು ಡಿ.24ರಂದು ಸಂಜೆ 6.30ರ ಸುಮಾರಿಗೆ ಲಕ್ಕಸಂದ್ರದ 14ನೇ ಕ್ರಾಸ್ ಬಳಿ ಆಟೋ ಚಾಲಕ ಜಯಪ್ರಕಾಶ್ ಅಲಿಯಾಸ್ ಅಪ್ಪಿ(33) ಎಂಬಾತನನ್ನು ಅಟ್ಟಾಡಿಸಿಕೊಂಡು ವಿಜಯ ಸಾಗರ ಹೋಟೆಲ್‌ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಆಡುಗೋಡಿ ಠಾಣೆ ಇನ್‌ಸ್ಪೆಕ್ಟರ್ ಸಿ.ರವಿಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ 10 ಮಂದಿ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ಒಂದು ಕಾರು, ಮೂರು ದ್ವಿಚಕ್ರ ವಾಹನ ಹಾಗೂ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಕಾರ್ತಿಕ್ ಮತ್ತು ವಿಘ್ನೇಶ್ ತಲೆಮರೆಸಿಕೊಂಡಿದ್ದು, ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯುವಕರ ಕಿಚಾಯಿಸಿ ಕಾಟ ಕೊಡ್ತಿದ್ದ ಚಾಲಕ: ಕೊಲೆಯಾದ ಆಟೋ ಚಾಲಕ ಜಯಪ್ರಕಾಶ್ 2007ರಲ್ಲಿ ಪಿ.ಸಿ.ರಮೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿದ್ದ. 2009ರಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಲಕ್ಕಸಂದ್ರ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಗರ ಗುಂಪು ಕಟ್ಟಿಕೊಂಡು ಗುರಾಯಿಸಿಕೊಂಡು ಓಡಾಡುತ್ತಿದ್ದ. ರಸ್ತೆಯಲ್ಲಿ ಓಡಾಡುವ ಯುವಕರನ್ನು ಕಿಚಾಯಿಸಿ ಕಾಟ ಕೊಡುತ್ತಿದ್ದ. ಡಿ.23ರಂದು ಲಕ್ಕಸಂದ್ರದಲ್ಲಿ ಆರೋಪಿಗಳಾದ ಶರತ್ ಮತ್ತು ಆಂಟೋನಿಗೆ ಕ್ಷುಲ್ಲಕ ವಿಚಾರಕ್ಕೆ ಆವಾಜ್ ಹಾಕಿದ್ದ. ಹೀಗಾಗಿ ಶರತ್ ಮತ್ತು ಆಂಟೋನಿ ಕೋಪಗೊಂಡಿದ್ದರು. ಸುಖಾಸುಮ್ಮನೆ ಕಾಟ ನೀಡುವ ಜಯಪ್ರಕಾಶ್ ಕೊಲೆಗೆ ನಿರ್ಧರಿಸಿದ್ದರು. ಇದಕ್ಕೆ ಇತರೆ ಆರೋಪಿಗಳು ಸಾಥ್ ನೀಡಿದ್ದರು.ಬಾಕ್ಸ್...
ಅಟ್ಟಾಡಿಸಿ ಬರ್ಬರ ಹತ್ಯೆ: ಹನುಮ ಜಯಂತಿ ಪ್ರಯುಕ್ತ ಡಿ.24ರಂದು ಲಕ್ಕಸಂದ್ರ ಬಸ್ ನಿಲ್ದಾಣದ ಸಮೀಪದ ಆಂಜನೇಯ ದೇವಸ್ಥಾನದಲ್ಲಿ ಆಯೋಜಿಸಿದ್ದ ಅನ್ನದಾನ ಕಾರ್ಯಕ್ರಮದಲ್ಲಿ ಜಯಪ್ರಕಾಶ್ ಭಾಗಿಯಾಗಿದ್ದ. ಈ ವೇಳೆ ಸಂಜೆ 6.30ರ ಸುಮಾರಿಗೆ ಆರೋಪಿಗಳಾದ ಶರತ್, ಆಂಟೋನಿ, ದಿಲೀಪ್, ರವಿಕುಮಾರ್ ಸೇರಿದಂತೆ ಆರು ಮಂದಿ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ದೇವಸ್ಥಾನದ ಬಳಿ ಹಾಜರಾಗಿ ಜಯಪ್ರಕಾಶ್‌ನನ್ನು ಅಟ್ಟಾಡಿಸಿಕೊಂಡು ಹಲ್ಲೆ ಮಾಡಿದ್ದರು. ತಪ್ಪಿಸಿಕೊಂಡು ಓಡಲು ಆರಂಭಿಸಿದ ಜಯಪ್ರಕಾಶ್, ಸಮೀಪದ ವಿಜಯ ಸಾಗರ ಹೋಟೆಲ್‌ಗೆ ನುಗ್ಗಿದ್ದ. ಬೆನ್ನಟ್ಟಿ ಅಲ್ಲಿಗೂ ಬಂದ ಆರೋಪಿಗಳು ಹೋಟೆಲ್‌ನ ಒಳಗೆ ಬರ್ಬರವಾಗಿ ಕೊಚ್ಚಿ ಕೊಲೆಗೈದು ಪರಾರಿಯಾಗಿದ್ದರು.