ಶಿರಸಿ: ಜಿಲ್ಲೆಯಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್‌ಗಳ ಕಾರ್ಯ ವ್ಯಾಪ್ತಿಯೂ ಜಾಸ್ತಿಗೊಳ್ಳುವ ಜೊತೆಗೆ ಕರೆಗಳ ಅನಿರೀಕ್ಷಿತ ಕಡಿತ, ಇಂಟರ್‌ನೆಟ್ ವೇಗದಲ್ಲಿ ಉಂಟಾಗುವ ಸಮಸ್ಯೆಯನ್ನು ಆಧುನಿಕ ಯಂತ್ರೋಪಕರಣಗಳನ್ನು ಅಳವಡಿಸಿ, ಶೀಘ್ರವಾಗಿ ಬಗೆಹರಿಸಲಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಸೋಮವಾರ ನಗರದ ಆಡಳಿತ ಸೌಧದಲ್ಲಿ ಬಿಎಸ್‌ಎನ್‌ಎಲ್ ಉನ್ನತ ಅಧಿಕಾರಿಗಳ ಸಭೆ ನಡೆಸಿ, ಮಾಧ್ಯಮದವರಿಗೆ ಮಾಹಿತಿ ನೀಡಿದರು.ಮೊಬೈಲ್ ಟವರ್, ಕೇಬಲ್ ಸಂಪರ್ಕದಲ್ಲಿ ಹೊಸ ಯಂತ್ರೋಪಕರಣಗಳು ಚೆನ್ನೈನ ಮತ್ತು ಹೊರರಾಜ್ಯಗಳ ಇಂಟರ್‌ನೆಟ್ ಸರ್ವರ್ ಗೆ ವೇಗವಾಗಿ ಸಂಪರ್ಕ ಒದಗಿಸಲಿದೆ. ಇದರಿಂದ ಜಿಲ್ಲೆಯ ಅಂತರ್ಜಾಲ ವ್ಯವಸ್ಥೆ ಆಧುನಿಕತೆ ಪಡೆದುಕೊಳ್ಳಲಿದೆ. ಜಿಲ್ಲೆಯ ೨೪೫ ಹಳೆಯ ೨ಜಿ ಮೊಬೈಲ್ ಟವರ್‌ಗಳಲ್ಲಿ ಈಗಾಗಲೇ ೧೪೫ ಟವರ್ ಗಳನ್ನು ೪ಜಿ ತಂತ್ರಜ್ಞಾನಕ್ಕೆ ಬದಲಾಯಿಸಲಾಗಿದೆ. ಈ ಟವರ್ ಗಳಲ್ಲಿ ಹೊಸ ಬ್ಯಾಟರಿ ಅಳವಡಿಕೆ ಮಾಡಲಾಗಿದೆ. ಇನ್ನು ೧೦೦ ಟವರ್‌ಗಳ ಉನ್ನತೀಕರಣ ಹಾಗೂ ಬ್ಯಾಟರಿ ಅಳವಡಿಕೆ ಕಾರ್ಯ ಕೂಡ ಶೀಘ್ರವಾಗಿ ನಡೆಸಲಾಗುತ್ತದೆ ಎಂದರು.
೪ಜಿ ಸ್ಯಾಚುರೇಶನ್ ಯೋಜನೆ ಅಡಿಯಲ್ಲಿ ಜಿಲ್ಲೆಗೆ ೨೪೪ ಮೊಬೈಲ್ ಗೋಪುರಗಳು ಮಂಜೂರಾಗಿದ್ದವು. ಇವುಗಳ ನಿರ್ಮಾಣ ಕಾರ್ಯ ಈಗ ಭರದಿಂದ ನಡೆಯುತ್ತಿದೆ. ಈಗಾಗಲೇ ೬೭ ಮೊಬೈಲ್ ಗೋಪುರಗಳು ಕಾರ್ಯಾರಂಭ ಮಾಡಿದ್ದು, ಸ್ಥಳೀಯರ ಬಳಕೆಗೆ ಲಭ್ಯವಾಗಿವೆ. ಉದ್ಘಾಟನೆಗೆ ಕಾಯದೇ ಸಿದ್ಧಗೊಂಡ ಮೊಬೈಲ್ ಗೋಪುರಗಳನ್ನು ಆರಂಭಿಸುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.ಯೋಜನೆಯಡಿ ಕೈಗೆತ್ತಿಕೊಳ್ಳಲಾದ ೧೬೦ ಹಳ್ಳಿಗಳಲ್ಲಿ ಟವರ್ ನಿರ್ಮಿಸಲು ಅರಣ್ಯ ಇಲಾಖೆಯಿಂದ ಜಾಗ ಮಂಜೂರಾತಿಗೆ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಸಹ ಇದು ಕೇಂದ್ರ ಸರ್ಕಾರದ ಯೋಜನೆ ಎಂಬ ನಿರ್ಲಕ್ಷ್ಯಭಾವದಿಂದ ಇರುವುದು ಸಮಸ್ಯೆ ಆಗಿದೆ. ಅಧಿಕಾರಿಗಳು ಮೊಬೈಲ್ ಟವರ್ ನಿರ್ಮಾಣಕ್ಕೆ ಗುರುತಿಸಲಾದ ಅರಣ್ಯ ಜಾಗವನ್ನು ಮಂಜೂರು ಮಾಡಲು ಯತ್ನಿಸಬೇಕು. ಗುತ್ತಿಗೆದಾರರಾದ ಬೊಂಡಾಡಾ ಎಂಜಿನಿಯರಿಂಗ್ ಕಂಪೆನಿ, ಉಪಗುತ್ತಿಗೆದಾರರಿಗೂ ಈ ಕುರಿತಂತೆ ಸೂಚನೆ ನೀಡಲಾಗಿದ್ದು, ಜೂನ್ ಅಂತ್ಯದೊಳಗೆ ಜಾಗ ಮಂಜೂರಿಗೆ ಯತ್ನಿಸಬೇಕು. ಮುಂಬರುವ ಅಕ್ಟೋಬರ್ ಅಂತ್ಯದ ಒಳಗಾಗಿ ಸ್ಯಾಚುರೇಶನ್ ಪ್ರಾಜೆಕ್ಟ್‌ನ ಜಿಲ್ಲೆಯ ಎಲ್ಲ ೨೪೪ ಮೊಬೈಲ್ ಗೋಪುರಗಳು ಕಾರ್ಯಾರಂಭ ಮಾಡಲಿವೆ ಎಂದರು.
ಸಭೆಯಲ್ಲಿ ರಾಜ್ಯ ಬಿಎಸ್‌ಎನ್‌ಎಲ್ ಪ್ರಧಾನ ಮುಖ್ಯ ವ್ಯವಸ್ಥಾಪಕಿ ಎನ್. ಸುಜಾತಾ, ಅಧಿಕಾರಿಗಳಾದ ನವೀನಕುಮಾರ ಗುಪ್ತಾ, ರಾಕೇಶಕುಮಾರ ಚಂದ್ರಕರ್, ಸುಜಿತ್ ಕುಮಾರ, ಭಗವಾನ್ ಸ್ವರೂಪ್ ಮತ್ತಿತರರು ಇದ್ದರು.ಎಫ್‌ಟಿಟಿಎಚ್ ಸಮಸ್ಯೆಯ ಪರಿಹಾರಕ್ಕೆ ಸೂಚನೆ:
ಗ್ರಾಮೀಣ ಭಾಗಗಳಿಗೆ ಇಂಟರ್‌ನೆಟ್ ಮತ್ತು ದೂರವಾಣಿ ಸೌಲಭ್ಯವನ್ನು ಎಫ್‌ಟಿಟಿಎಚ್ ಮೂಲಕ ನೀಡಲಾಗಿದೆ. ಇತ್ತೀಚೆಗೆ ಇಂಟರ್‌ನೆಟ್ ವೇಗ ಕಡಿಮೆಯಾಗಿದೆ ಎಂದು ಸಾರ್ವಜನಿಕರಿಂದ ದೂರು ಬಂದಿದೆ. ಲ್ಯಾಂಡ್‌ಲೈನ್ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಹೊಸ ತಂತ್ರಜ್ಞಾನ ಅಳವಡಿಸಿ, ಇಂಟರ್‌ನೆಟ್ ವೇಗ ಜಾಸ್ತಿಯಾಗಬೇಕು. ಲ್ಯಾಂಡ್‌ಲೈನ್ ವ್ಯವಸ್ಥೆಯೂ ಸರಿಯಾಗಬೇಕು. ಇತರ ಸಮಸ್ಯೆಗಳನ್ನು ಬಗೆಹರಿಸಲು ಅಧಿಕಾರಿಗಳಿಗೆ ಸಂಸದರು ಸೂಚಿಸಿದರು.ಎತ್ತರದ ಜಾಗ, ಹೆಚ್ಚು ಜನರಿಗೆ ತಲುಪುವ ಜಾಗವನ್ನು ಬಿಎಸ್‌ಎನ್‌ಎಲ್ ಅಧಿಕಾರಿಗಳೇ ಸಮೀಕ್ಷೆ ನಡೆಸಬೇಕು. ಈ ಹೆಚ್ಚುವರಿ ಟವರ್ ನಿರ್ಮಾಣದಿಂದ ಜಿಲ್ಲೆಯಲ್ಲಿ ಬಹುತೇಕ ಎಲ್ಲ ಹಳ್ಳಿಗಳೂ ಮೊಬೈಲ್ ಸಂಪರ್ಕ ವ್ಯಾಪ್ತಿಗೆ ಬಂದಂತಾಗಲಿವೆ ಎನ್ನುತ್ತಾರೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ.