ಕುಟುಂಬ ರಾಜಕಾರಣ ಅಂತ್ಯಕ್ಕೆ ಪಣ: ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ । ಮೆರವಣಿಗೆ ಮೂಲಕ ಸಲ್ಲಿಕೆ
ಕನ್ನಡಪ್ರಭ ವಾರ್ತೆ ಹಾಸನಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಮ್ಮ ನೇತೃತ್ವದಲ್ಲಿ ತೆರೆದ ವಾಹನದಲ್ಲಿ ಪಕ್ಷದ ಅಭ್ಯರ್ಥಿ ಗಂಗಾಧರ್ ಬಹುಜನ್ ಮಂಗಳವಾರ ನಗರದ ಮಹಾರಾಜ ಪಾರ್ಕ್ ಬಳಿಯಿಂದ ಮೆರವಣಿಗೆ ಮೂಲಕ ಹೊರಟು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಸಿ.ಸತ್ಯಭಾಮ ಅವರಿಗೆ ನಾಮಪತ್ರ ಸಲ್ಲಿಸಿದರು.
ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮಾತನಾಡಿ, ರಾಜ್ಯದಲ್ಲಿ ೨೨ ಕಡೆ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದು, ಕೆಲ ಬಲಾಢ್ಯರು ಆಡಳಿತ ಮಾಡಿಕೊಂಡು ಬರಲಾಗುತ್ತಿದ್ದಾರೆ. ಇದನ್ನ ಬದಲಾವಣೆ ಮಾಡಬೇಕಾಗಿದೆ. ಗಂಗಾದರ್ ಅವರು ಹೋರಾಟಗಾರರಾಗಿದ್ದು, ಕುಟುಂಬದ ರಾಜಕಾರಣಕ್ಕೆ ಅಂತ್ಯ ಹಾಡಿ ಮತದಾರರು ಒಂದು ಬದಲಾವಣೆ ತಂದು ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದರು.ಬಿಎಸ್‌ಪಿ ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಮಾತನಾಡಿ, ಸ್ವಾತಂತ್ರ ಬಂದಾಗಿನಿಂದಲೂ ಹಾಸನ ಕ್ಷೇತ್ರದಲ್ಲಿ ಒಂದು ರೀತಿಯ ಜೆಡ್ಡು ಹಿಡಿದ ರಾಜಕಾರಣ, ಪಾಳೇಗಾರಿಕೆ, ಕುಟುಂಬ ರಾಜಕಾರಣದಲ್ಲಿ ಒಂದು ಕುಟುಂಬದಲ್ಲಿ ಆಳ್ವಿಕೆ ಮಾಡಿದ್ದು ಪ್ರಜಾಪ್ರಭುತ್ವ ವಿಫಲವಾಗಿರುವುದು ತೋರುತ್ತದೆ. ಸಾಮಾನ್ಯ ಪ್ರಜೆ ಆಯ್ಕೆ ಆಗಬೇಕು. ಆಸೆ ಆಮಿಷಗಳಿಗೆ ಒಳಗಾಗದೆ ಸಮಾಜ ಉಳಿಸುವ ವ್ಯಕ್ತಿಯನ್ನು ಆಯ್ಕೆ ಮಾಡಬೇಕು. ಅಭ್ಯರ್ಥಿಯ ಹಿನ್ನೆಲೆಯನ್ನು ನೋಡಿ ಸೂಕ್ತ ಅಭ್ಯರ್ಥಿಯನ್ನು ಆರಿಸುವಂತೆ ಮನವಿ ಮಾಡಿದರು.
ಹಾಸನ ನಗರದ ಮೇಲ್ಸೇತುವೆ ನಿರ್ಮಿಸಲು ೧೦ ವರ್ಷಗಳೇ ಕಳೆದಿವೆ. ಜಿಲ್ಲೆಯಿಂದ ದೊಡ್ಡ ದೊಡ್ಡ ಪದವಿ ಬಂದರೂ ಸಹ ಇಲ್ಲಿ ಯಾವ ಅಭಿವೃದ್ಧಿ ಆಗಿರುವುದಿಲ್ಲ. ಇವರು ಜನರ ಅಭಿವೃದ್ಧಿ ಮಾಡದೇ ತಮ್ಮ ಕುಟುಂಬದ ಅಭಿವೃದ್ಧಿ ಮಾಡಿಕೊಂಡಿದ್ದಾರೆ. ಬಡ, ತಳ ಸಮುದಾಯವು ಎಚ್ಚೆತ್ತುಕೊಂಡು ಆನೆ ಗುರುತಿಗೆ ಮತ ಹಾಕುವ ಮೂಲಕ ತಮ್ಮನ್ನು ಆಯ್ಕೆ ಮಾಡಿ ಇಲ್ಲಿಂದ ಆನೆಯನ್ನು ಪಾರ್ಲಿಮೆಂಟಿಗೆ ಕಳುಹಿಸಿಕೊಡಬೇಕು ಎಂದು ಮನವಿ ಮಾಡಿದರು.ಬಿಎಸ್‌ಪಿ ರಾಜ್ಯ ಸಂಯೋಜಕ ಕೃಷ್ಣಮೂರ್ತಿ ಮಾತನಾಡಿ, ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಗಂಗಾದರ್ ಬಹುಜನ್ ನಾಮಪತ್ರ ಸಲ್ಲಿಸಿದ್ದಾರೆ. ವಂಶ ಪಾರಂಪರ್ಯದ ಕುಟುಂಬವನ್ನು ಮುಕ್ತಿಗೊಳಸಲು ಮತದಾರರು ಬಹುಜನ ಪಕ್ಷದ ಅಭ್ಯರ್ಥಿಗೆ ಮತ ಕೊಡುವಂತೆ ಕೋರಿದರು.
ಜಾಕೀರ್ ಹುಸೇನ್ ಮಾತನಾಡಿ, ಕಳೆದ ೨೫ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿರುವ ಗಂಗಾದರ್ ಅವರು ನೋಟಿನ ವಿರುದ್ಧ ಓಟು ಎಂಬಂತೆ ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಬಹುಜನ ಸಮಾಜ ಪಕ್ಷದ ಶಿವಮ್ಮ ಇತರರು ಉಪಸ್ಥಿತರಿದ್ದರು.
ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದ ಬಿಎಸ್ಪಿ ಅಭ್ಯರ್ಥಿ ಗಂಗಾಧರ್ ಬಹುಜನ್.