ಅರ್ಮ್‌ಸ್ಟ್ರಾಂಗ್ ಹತ್ಯೆ ಪ್ರಕರಣ ಸಿಬಿಐಗೆ ವಹಿಸಲು ಬಿಎಸ್‌ಪಿ ಒತ್ತಾಯ

KannadaprabhaNewsNetwork | Published : Jul 17, 2024 12:54 AM

ಸಾರಾಂಶ

ಬಿಎಸ್‌ಪಿ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅರ್ಮ್‌ಸ್ಟ್ರಾಂಗ್‌ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿ ಜಿಲ್ಲಾ ಬಿಎಸ್‌ಪಿ ಮುಖಂಡರು ಎಡಿಸಿ ನಾರಾಯಣರಡ್ಡಿ ಕನಕರಡ್ಡಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.

ಕಾಣದ ಕೈಗಳ ಕೈವಾಡದ ಶಂಕೆ । ಅಪರ ಜಿಲ್ಲಾಧಿಕಾರಿಗಳಿಗೆ ಬಿಎಸ್‌ಪಿ ಮುಖಂಡರಿಂದ ಮನವಿ ಸಲ್ಲಿಕೆ ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಬಹುಜನ ಸಮಾಜ ಪಾರ್ಟಿಯ ತಮಿಳುನಾಡು ರಾಜ್ಯಾಧ್ಯಕ್ಷ ಕೆ.ಅರ್ಮ್‌ಸ್ಟ್ರಾಂಗ್‌ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಜಿಲ್ಲಾ ಬಿಎಸ್‌ಪಿ ಮುಖಂಡರು ಅಪರ ಜಿಲ್ಲಾಧಿಕಾರಿ ನಾರಾಯಣರಡ್ಡಿ ಕನಕರಡ್ಡಿ ಮುಖಾಂತರ ರಾಷ್ಟ್ರಪತಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ, ಚೆನ್ನೈನ ಪೆರಂಬೂರಿನ ಜನನಿಬಿಡ ವಸತಿ ಪ್ರದೇಶದಲ್ಲಿ ಬಿಎಸ್‌ಪಿ ರಾಜ್ಯಾಧ್ಯಕ್ಷ ಕೆ.ಅರ್ಮ್‌ಸ್ಟ್ರಾಂಗ್‌ ಅವರನ್ನು ಭೀಕರವಾಗಿ ಹತ್ಯೆಗೈದಿರುವುದು ಇಡೀ ತಮಿಳುನಾಡಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.

ಸಂವಿಧಾನದ ಆಶಯದಂತೆ ಸಮಾಜದಲ್ಲಿ ಜಾತಿ ದೌರ್ಜನ್ಯ, ಅಸಮಾನತೆ, ಅಸ್ಪೃಶ್ಯತೆಗೆ ಅನ್ಯಾಯಕ್ಕೆ ನಲುಗಿದ್ದ ತಳ ಸಮುದಾಯಗಳಲ್ಲಿ ಆತ್ಮವಿಶ್ವಾಸ ತುಂಬಿ ಶೋಷಿತರಾದ ಎಸ್‌ಸಿ, ಎಸ್‌ಟಿ, ಓಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯಗಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದವರ ಹತ್ಯೆ ಮಾಡಿರುವವರ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂದು ಹೇಳಿದರು.

ಹತ್ಯೆಗೊಳಗಾದ ಕೆಲವೇ ಗಂಟೆಗಳಲ್ಲಿ ತಾವೇ ಹತ್ಯೆಗೆ ಕಾರಣರೆಂದು ಒಪ್ಪಿಕೊಂಡು ಎಂಟು ಮಂದಿ ಪೊಲೀಸರಿಗೆ ಶರಣಾಗಿರುವುದಾಗಿ ವರದಿಯಾಗಿದ್ದು ಇದನ್ನು ಗಮನಿಸಿದರೆ ಹಲವು ಅನುಮಾನ ಮೂಡಿಸುತ್ತದೆ. ಹೀಗಾಗಿ ತನಿಖೆಯನ್ನು ನಿಷ್ಪಕ್ಷಪಾತವಾಗಿ ಸಿಬಿಐಗೆ ವಹಿಸಬೇಕು ಆಗ್ರಹಿಸಿದರು.

ಕೆ.ಅರ್ಮ್‌ಸ್ಟ್ರಾಂಗ್‌ ಅವರು ಸಾಮಾನ್ಯ ವ್ಯಕ್ತಿಯಾಗಿರಲಿಲ್ಲ. ಚೆನ್ನೈ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಲ್ಲದೇ ಲಕ್ಷಾಂತರ ಅಭಿಮಾನಿ ಬಳಗ ಹೊಂದಿದ್ದ ಜನನಾಯಕರು. ಅಲ್ಲದೇ ದಕ್ಷಿಣ ಭಾರತದಲ್ಲಿ ವಿಶೇಷವಾಗಿ ತಮಿಳುನಾಡು ರಾಜ್ಯದ ಎಸ್‌ಸಿ, ಎಸ್‌ಟಿ ಹಾಗೂ ಓಬಿಸಿಗಳ ಹಿತ ಕಾಯುವ ಯೋಧರ ರೀತಿಯಲ್ಲಿ ವ್ಯಕ್ತಿತ್ವ ಬೆಳೆಸಿಕೊಂಡಿದ್ದರು ಎಂದರು.

ಕೊನೆಯ ಅಂತಿಮ ಕ್ಷಣದಲ್ಲೂ ಕೆ.ಅರ್ಮ್‌ಸ್ಟ್ರಾಂಗ್‌ ಶವಸಂಸ್ಕಾರಕ್ಕೆ ಸೂಕ್ತ ಸ್ಥಳದ ವ್ಯವಸ್ಥೆ ಕಲ್ಪಿಸಲಿಲ್ಲ. ಅವರದೇ ಸ್ವಂತ ಜಾಗದ ಪಕ್ಷದ ಕಚೇರಿ ಮುಂಭಾಗದಲ್ಲಿ ಹೂಳಲು ಬಿಡಲಿಲ್ಲ. ಹತ್ಯೆಯಾಗಿ ಒಂದು ವಾರ ಕಳೆದರೂ ತಮಿಳುನಾಡು ಸರ್ಕಾರ ನಿರೀಕ್ಷಿತ ಮಟ್ಟದಲ್ಲಿ ಸಂಚುಕೋರರನ್ನು ಹಿಡಿಯಲು ವಿಫಲವಾಗಿದೆ ಎಂದು ಆರೋಪಿಸಿದರು.

ಈ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ಸಂತ್ರಸ್ತರ ಕುಟುಂಬಕ್ಕೆ ನಾಡಿನ ಲಕ್ಷಾಂತರ ಅಭಿಮಾನಿಗಳಿಗೆ ನ್ಯಾಯ ಒದಗಿಸುವ ಜೊತೆಗೆ ತಮಿಳುನಾಡು ಸರ್ಕಾರಕ್ಕೆ ಸಮರ್ಪಕ ನಿರ್ದೇಶನ ನೀಡಬೇಕು ಎಂದು ರಾಷ್ಟ್ರಪತಿಗಳನ್ನು ಜಿಲ್ಲೆಯ ಪದಾಧಿಕಾರಿಗಳು ಮನವಿ ಮೂಲಕ ಒತ್ತಾಯಿಸಿದರು.

ಈ ವೇಳೆ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಲೋಕಸಭಾ ಕ್ಷೇತ್ರದ ಸಂಯೋಜಕರಾದ ಕೆ.ಆರ್.ಗಂಗಾಧರ್, ಪಿ.ಪರಮೇಶ್ವರ್, ಜಿಲ್ಲಾ ಉಪಾಧ್ಯಕ್ಷೆ ಕೆ.ಎಸ್.ಮಂಜುಳಾ, ಅಸೆಂಬ್ಲಿ ಅಧ್ಯಕ್ಷ ಎಚ್.ಕುಮಾರ್, ಉಪಾಧ್ಯಕ್ಷ ಹೊನ್ನಪ್ಪ, ಪ್ರಧಾನ ಕಾರ್ಯದರ್ಶಿ ಆರ್.ವಸಂತ್ ಹಾಜರಿದ್ದರು.

Share this article