ಕೊಪ್ಪಳ: ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡು ಸ್ಥಾಪಿಸಲು ಉದ್ದೇಶಿಸಿರುವ ಬಿಎಸ್‌ಪಿಎಲ್ ಕಂಪನಿ ಈಗಾಗಲೇ ಸ್ವಾಧೀನ ಮಾಡಿಕೊಂಡಿರುವ ಭೂಮಿಗೆ ಕಾಂಪೌಂಡ್ ಹಾಕಿಕೊಂಡಿದ್ದು, ಈ ವೇಳೆಯಲ್ಲಿ ಹಳ್ಳದ ದಾರಿ ಬಂದ್ ಮಾಡಿದ್ದರಿಂದ ಮಳೆಯ ನೀರು ರೈತರ ಭೂಮಿಗೆ ನುಗ್ಗಿ ಅಪಾರ ಹಾನಿಯಾಗಿದೆ.
ಕಾರ್ಖಾನೆಯವರು ಕಾಂಪೌಂಡ್ ನಿರ್ಮಾಣ ಮಾಡುವ ವೇಳೆಯಲ್ಲಿ ನೀರು ಹೋಗುವುದಕ್ಕೆ ಇದ್ದ ಮಾರ್ಗ ಬಂದ್ ಮಾಡಿದ್ದಾರೆ. ಹೀಗಾಗಿ ಮಳೆಯ ನೀರು ಮುಂದೆ ಸಾಗಲು ದಾರಿಯಿಲ್ಲದಂತೆ ಆಗಿದ್ದರಿಂದ ನಮ್ಮ ಹೊಲಗಳಿಗೆ ನುಗ್ಗಿದೆ ಎಂದು ರೈತರು ಆರೋಪಿಸಿದ್ದಾರೆ.
ಬಿಎಸ್‌ಪಿಎಲ್ ಕಾರ್ಖಾನೆಯ ಕಾಂಪೌಂಡ್‌ನಿಂದಾಗಿಯೇ ನಮ್ಮ ಭೂಮಿಗೆ ಸಮಸ್ಯೆಯಾಗಿದೆ. ಅಷ್ಟೇ ಅಲ್ಲ ಹೊಲಗಳಿಗೆ ಹೋಗುವ ದಾರಿ ಸಹ ಬಂದ್ ಮಾಡಿದ್ದಾರೆ. ಕೆಲವೊಂದು ದಾರಿಯಲ್ಲಿ ಮಣ್ಣು ಸುರಿದಿದ್ದಾರೆ. ಇದರಿಂದ ನಮ್ಮ ಹೊಲಗಳಿಗೆ ಹೋಗುವುದಕ್ಕೂ ಕಷ್ಟವಾಗುತ್ತದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.ಈರಣ್ಣ ಗವಿಸಿದ್ದಪ್ಪ ಸೇರಿದಂತೆ ಹಲವರ ಹೊಲಗಳಿಗೆ ನೀರು ನುಗ್ಗಿದ್ದು, ಬೆಳೆ ಹಾನಿಯಾಗಿದ್ದು, ಪರಿಹಾರ ನೀಡುವಂತೆ ರೈತರು ಆಗ್ರಹಿಸಿದ್ದಾರೆ.
ಮನೆಗೆ ನುಗ್ಗಿದ ನೀರು: ತಾಲೂಕಿನ ಲಾಚನಕೇರಿ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಸುರಿದ ಮಳೆಯಿಂದ ನೀರು ಮನೆಗಳಿಗೆ ನುಗ್ಗಿದೆ. ಫಕೀರಪ್ಪ ಎನ್ನುವವರ ಮನೆಗೆ ನೀರು ನುಗ್ಗಿದ್ದು, ಮಕ್ಕಳು ಸೇರಿದಂತೆ ಮನೆಯವರು ಆತಂಕದಲ್ಲಿದ್ದಾರೆ. ಗ್ರಾಮದಲ್ಲಿಯೂ ನೀರು ಹೋಗುವುದಕ್ಕೆ ಸರಿಯಾದ ರೀತಿಯ ದಾರಿ ಇಲ್ಲದಂತಾಗಿರುವುದರಿಂದ ಸಮಸ್ಯೆಯಾಗಿದೆ ಎನ್ನುತ್ತಾರೆ ಗ್ರಾಮದ ಫಕೀರಪ್ಪ.