ರಾಜ್ಯದಲ್ಲಿ ಕಾಂಗ್ರೆಸ್ ಎಂಬ ರಣಬಿಸಿಲು ಕಳೆದು ಬಿಜೆಪಿಯ ಮುಂಗಾರು ತಂಪಿನ ಕಾಲ ಶುರುವಾಗಲು ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಮುನ್ನುಡಿಯಾಗಿದೆ. ಚಿತ್ರದುರ್ಗದಲ್ಲಿ ಮೇ 9ಕ್ಕೆ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡೋಣ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
- ರಣಬಿಸಿಲಿನ ಕಾಂಗ್ರೆಸ್ ಮುಗಿದು ಬಿಜೆಪಿ ತಂಪಿನ ಕಾಲ ಶುರುವಾಗಲಿ: ಬಿ.ವೈ.ರಾಘವೇಂದ್ರ - - -
ಕನ್ನಡಪ್ರಭ ವಾರ್ತೆ ದಾವಣಗೆರೆ
ರಾಜ್ಯದಲ್ಲಿ ಕಾಂಗ್ರೆಸ್ ಎಂಬ ರಣಬಿಸಿಲು ಕಳೆದು ಬಿಜೆಪಿಯ ಮುಂಗಾರು ತಂಪಿನ ಕಾಲ ಶುರುವಾಗಲು ಬಿ.ಎಸ್. ಯಡಿಯೂರಪ್ಪನವರ ಅಭಿಮಾನೋತ್ಸವ ಮುನ್ನುಡಿಯಾಗಿದೆ. ಚಿತ್ರದುರ್ಗದಲ್ಲಿ ಮೇ 9ಕ್ಕೆ ನಡೆಯುವ ಐತಿಹಾಸಿಕ ಕಾರ್ಯಕ್ರಮದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಸೇರುವ ಮೂಲಕ ಬಿಜೆಪಿ ಶಕ್ತಿ ಪ್ರದರ್ಶನ ಮಾಡೋಣ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ 5 ದಶಕಗಳ ಸಾರ್ಥಕ ಜನಸೇವೆ ಅಂಗವಾಗಿ ಮೇ 9ರಂದು ಚಿತ್ರದುರ್ಗದಲ್ಲಿ ಹಮ್ಮಿಕೊಳ್ಳಲಾಗುವ ಬಿ.ಎಸ್.ವೈ. ಅಭಿಮಾನೋತ್ಸವ ಪೂರ್ವಭಾವಿ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸುವ ಭರದಲ್ಲಿ ಕಾಂಗ್ರೆಸ್ ಮತ್ತದರ ಮಿತ್ರ ಪಕ್ಷಗಳು ದೇಶವನ್ನೇ ವಿರೋಧಿಸುತ್ತಿವೆ. ವಿರೋಧಕ್ಕಾಗಿ ವಿರೋಧ ಎಂಬಂತೆ ವಿಪಕ್ಷಗಳ ವರ್ತನೆ ಇದೆ. ಮಹಿಳಾ ಮೀಸಲಾತಿ ಮಸೂದೆ ಸೋಲಿಸಿ, ಸಂಭ್ರಮಾಚರಿಸಿದ ಕಾಂಗ್ರೆಸ್ ಪಕ್ಷ ಹಿಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ಗೆ ಕಣ್ಣೀರು ಹಾಕಿಸಿತ್ತು. ರಾಜ್ಯದಲ್ಲಿ ಹಲವಾರು ಜ್ವಲಂತ ಸಮಸ್ಯೆ ಇದ್ದರೂ ಕಾಂಗ್ರೆಸ್ಸಿಗರು ಸಿಎಂ ಕುರ್ಚಿ ಕಾದಾಟದಲ್ಲಿ ಮಗ್ನರಾಗಿದ್ದಾರೆ ಎಂದು ಅವರು ಟೀಕಿಸಿದರು.
ಯಡಿಯೂರಪ್ಪನವರ ಅಭಿಮಾನೋತ್ಸವವನ್ನು ಯಾವುದೇ ಗುಂಪುಗಾರಿಕೆಗೆ ಆಯೋಜಿಸಿಲ್ಲ. ಒಬ್ಬ ವ್ಯಕ್ತಿ ಬರೀ ವ್ಯಕ್ತಿಯಾಗದೇ, ನಮ್ಮೆಲ್ಲರಿಗೂ ಪ್ರೇರಣೆಯಾಗಿದ್ದಾರೆ. ಮಂಡ್ಯ ಜನ್ಮಭೂಮಿಯಾದರೆ, ಶಿವಮೊಗ್ಗ ಜಿಲ್ಲೆ ಯಡಿಯೂರಪ್ಪನವರ ಕರ್ಮಭೂಮಿ. ಜನಸಂಘ ಕಾಲದಿಂದಲೂ ಅನೇಕ ಹೋರಾಟದ ಮೂಲಕ ಹಿರಿಯರೊಂದಿಗೆ ಸೇರಿ, ಬಿಜೆಪಿಯನ್ನು ಸಂಘಟಿಸಿದ್ದಾರೆ. ಇಂತಹ ಹಿರಿಯರಿಂದ ಪ್ರೇರಣೆ ಪಡೆಯಲು ಕಾರ್ಯಕ್ರಮ ಆಯೋಜಿಸಿದೆ. ಈ ಮೂಲಕ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡೋಣ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಬಿಎಸ್‌ವೈ ಆಡಳಿತವು ಸುವರ್ಣಯುಗವಾಗಿತ್ತು. ರಾಜ್ಯದ ಪ್ರತಿ ಕುಟುಂಬವೂ ಒಂದಿಲ್ಲೊಂದು ರೀತಿ ಯಡಿಯೂರಪ್ಪನವರ ಯೋಜನೆಗಳ ಸೌಲಭ್ಯ ಪಡೆದಿವೆ. ಇಂತಹ ಧೀಮಂತ ನಾಯಕರ ಹೋರಾಟದ ಜೀವನ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲೆಂದು ಚಿತ್ರದುರ್ಗದಲ್ಲಿ ಅಭಿಮಾನೋತ್ಸವ ನಡೆಸಲಾಗುತ್ತಿದೆ. ಹಲವಾರು ರಾಜಕೀಯ ಧುರೀಣರು, ಗಣ್ಯ ವ್ಯಕ್ತಿಗಳು, ಮಠಾಧೀಶರು ಭಾಗಿಯಾಗಲಿದ್ದಾರೆ. ಅಂದು ಬೆಳಗ್ಗೆ 10.30ಕ್ಕೆ ಕಾರ್ಯಕ್ರಮ ಆರಂಭವಾಗಿ, ಮಧ್ಯಾಹ್ನ 12 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಮುಕ್ತಾಯವಾಗಲಿದೆ. ಲಕ್ಷ ಲಕ್ಷ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸೋಣ ಎಂದು ಮುಖಂಡರು, ಕಾರ್ಯಕರ್ತರಿಗೆ ಬಿ.ವೈ.ರಾಘವೇಂದ್ರ ತಿಳಿಸಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ನಾಲ್ಕು ಸಲ ಸಿಎಂ ಆಗಿದ್ದ ಬಿ.ಎಸ್.ಯಡಿಯೂರಪ್ಪನವರು ರೈತಪರ ಕಾರ್ಯಕ್ರಮ ನೀಡಿದರು. ರೈತರು, ಮಹಿಳೆಯರಿಗಾಗಿ ಅನೇಕ ಯೋಜನೆ ತಂದರು. ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆಂಬ ಮಾತು ಇತ್ತು. ಈಗ ಕಾಂಗ್ರೆಸ್ ಪಕ್ಷ, ರಾಜ್ಯ ಸರ್ಕಾರವೇ ನಡುಗುವಂತೆ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮವನ್ನು ನಾವು, ನೀವೆಲ್ಲರೂ ಸೇರಿ, ಯಶಸ್ವಿಗೊಳಿಸೋಣ. ಕೋಟೆ ನಾಡು ಚಿತ್ರದುರ್ಗದಿಂದಲೇ 2028ರ ವಿಧಾನಸಭೆ ಚುನಾವಣೆಯ ರಣಕಹಳೆ ಮೊಳಗಲಿ ಎಂದರು.
ಪಕ್ಷದ ಮಹಿಳಾ ಮೋರ್ಚಾದ ನಾಯಕಿ ಗಾಯತ್ರಿ ಸಿದ್ದೇಶ್ವರ ಮಾತನಾಡಿ, ಯಡಿಯೂರಪ್ಪನವರಿಗೆ ಗೌರವ ತರಲು ಈಗ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಬೇಕಿದೆ. ಬಿಜೆಪಿಯ ಉಜ್ವಲ ಭವಿಷ್ಯಕ್ಕೆ ಸಾಕ್ಷಿ ಆಗುವಂತೆ ಯಡಿಯೂರಪ್ಪನವರ ಅಭಿಮಾನೋತ್ಸವ ಕಾರ್ಯಕ್ರಮ ಮಾಡೋಣ. ಬಿಜೆಪಿ ಒಂದು ಕುಟುಂಬದಂತಿದ್ದು, ನಮ್ಮ ಕುಟುಂಬದ ಮುಖ್ಯಸ್ಥರ ಕಾರ್ಯಕ್ರಮವನ್ನು ನಾವೆಲ್ಲಾ ಕುಟುಂಬ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಐತಿಹಾಸಿಕ ಕಾರ್ಯಕ್ರಮವಾಗಿ ಮಾಡೋಣ ಎಂದು ಮನವಿ ಮಾಡಿದರು.
ಮಾಜಿ ಸಚಿವರಾದ ಎಸ್.ಎ. ರವೀಂದ್ರನಾಥ, ಎಂ.ಪಿ. ರೇಣುಕಾಚಾರ್ಯ, ವಿಪ ಮಾಜಿ ಮುಖ್ಯ ಸಚೇತಕ ಡಾ. ಎ.ಎಚ್. ಶಿವಯೋಗಿ ಸ್ವಾಮಿ, ಮಾಜಿ ಶಾಸಕರಾದ ಎಸ್.ವಿ. ರಾಮಚಂದ್ರ, ಎಚ್.ಪಿ. ರಾಜೇಶ, ಎಂ.ಬಸವರಾಜ ನಾಯ್ಕ, ದೂಡಾ ಮಾಜಿ ಅಧ್ಯಕ್ಷರಾದ ದೇವರಮನೆ ಶಿವಕುಮಾರ, ರಾಜನಹಳ್ಳಿ ಶಿವಕುಮಾರ, ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಕೆ.ಎಂ. ಸುರೇಶ, ಪಕ್ಷದ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ಮುಖಂಡರಾದ ಜಿ.ಎಸ್.ಅನಿತ್ ಕುಮಾರ್, ಲೋಕಿಕೆರೆ ನಾಗರಾಜ, ಮಾಡಾಳ ಮಲ್ಲಿಕಾರ್ಜುನ, ದಕ್ಷಿಣ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ, ಬಿ.ಜಿ.ಅಜಯಕುಮಾರ, ಪಿ.ಸಿ. ಶ್ರೀನಿವಾಸ ಭಟ್, ಎಸ್.ಎಂ.ವೀರೇಶ ಹನಗವಾಡಿ, ಬಿ.ಎಸ್.ಜಗದೀಶ, ಚಂದ್ರಶೇಖರ ಪೂಜಾರ, ಮುರುಗೇಶ್ ಆರಾಧ್ಯ, ಎಸ್.ಟಿ. ವೀರೇಶ, ದೊಗ್ಗಳ್ಳಿ ವೀರೇಶ, ಮಾಯಕೊಂಡ ಜಿ.ಎಸ್.ಶ್ಯಾಮ್, ಆಲೂರು ನಿಂಗರಾಜ, ಬಿ.ಎಂ.ಸತೀಶ ಕೊಳೇನಹಳ್ಳಿ, ಅನಿಲಕುಮಾರ್ ನಾಯ್ಕ, ಐರಣಿ ಅಣ್ಣೇಶ್, ಧನಂಜಯ ಕಡ್ಲೆಬಾಳು, ಆಲೂರು ನಿಂಗರಾಜ್, ಎಚ್.ಸಿ.ಜಯಮ್ಮ, ಮೇಘರಾಜ ಇತರರು ಇದ್ದರು.
- - -
-2ಕೆಡಿವಿಜಿ2: ದಾವಣಗೆರೆಯಲ್ಲಿ ಶನಿವಾರ ಚಿತ್ರದುರ್ಗದಲ್ಲಿ ಮೇ 9ಕ್ಕೆ ನಡೆಯುವ ಬಿಎಸ್‌ವೈ ಅಭಿಮಾನೋತ್ಸವದ ಪೂರ್ವಭಾವಿ ಸಭೆಯನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ, ಎಸ್.ಎ.ರವೀಂದ್ರನಾಥ, ಬಿ.ಸಿ.ಪಾಟೀಲ, ಎಂ.ಪಿ.ರೇಣುಕಾಚಾರ್ಯ ಉದ್ಘಾಟಿಸಿದರು.- - --2ಕೆಡಿವಿಜಿ3, 4: ದಾವಣಗೆರೆಯಲ್ಲಿ ಶನಿವಾರ ಚಿತ್ರದುರ್ಗದಲ್ಲಿ ಮೇ 9ಕ್ಕೆ ನಡೆಯುವ ಬಿಎಸ್‌ವೈ ಅಭಿಮಾನೋತ್ಸವದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕ್ರಮದ ಲಾಂಛನದ ಸ್ಟಿಕರನ್ನು ಬಿಡುಗಡೆಗೊಳಿಸಲಾಯಿತು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ, ಎಸ್.ಎ. ರವೀಂದ್ರನಾಥ, ಬಿ.ಸಿ.ಪಾಟೀಲ, ಎಂ.ಪಿ.ರೇಣುಕಾಚಾರ್ಯ, ಡಾ.ಶಿವಯೋಗಿ ಸ್ವಾಮಿ, ಎಸ್.ವಿ.ರಾಮಚಂದ್ರ ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.