ಇಲ್ಲಗಳ ನಡುವೆ ನಡೆಯುತ್ತಿದೆ ತಾಲೂಕು ಆಡಳಿತ: ಎಚ್.ಹಾಲಪ್ಪ ಆರೋಪ

KannadaprabhaNewsNetwork |  
Published : May 03, 2026, 01:30 AM IST
ಹಾಲಪ್ಪ ಮಾತನಾಡಿದರು | Kannada Prabha

ಸಾರಾಂಶ

ಕಾರನ್ನು ರಾಂಗ್ ಪಾರ್ಕಿಂಗ್ ಮಾಡಿದ್ದೀರಿ ಎಂದು ದಂಡ ವಿಧಿಸಬೇಕಾದ ಸಬ್ ಇನ್ಸ್ಪೆಕ್ಟರ್ ಕಾರಿನಲ್ಲಿದ್ದವರು ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಹಾಕಿ ರಶೀದಿಯನ್ನು ವಾಟ್ಸ್ಯಾಪ್‌ಗೆ ಕಳಿಸಿದ ಘಟನೆ ದೇಶದಲ್ಲಿಯೆ ಮೊದಲ ಬಾರಿಗೆ ನಮ್ಮ ಸಾಗರದಲ್ಲಿ ನಡೆದಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ದೂರಿದರು.

ಕನ್ನಡಪ್ರಭ ವಾರ್ತೆ ಸಾಗರ

ಕಾರನ್ನು ರಾಂಗ್ ಪಾರ್ಕಿಂಗ್ ಮಾಡಿದ್ದೀರಿ ಎಂದು ದಂಡ ವಿಧಿಸಬೇಕಾದ ಸಬ್ ಇನ್ಸ್ಪೆಕ್ಟರ್ ಕಾರಿನಲ್ಲಿದ್ದವರು ಹೆಲ್ಮೆಟ್ ಧರಿಸಿಲ್ಲವೆಂದು ದಂಡ ಹಾಕಿ ರಶೀದಿಯನ್ನು ವಾಟ್ಸ್ಯಾಪ್‌ಗೆ ಕಳಿಸಿದ ಘಟನೆ ದೇಶದಲ್ಲಿಯೆ ಮೊದಲ ಬಾರಿಗೆ ನಮ್ಮ ಸಾಗರದಲ್ಲಿ ನಡೆದಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಚ್.ಹಾಲಪ್ಪ ದೂರಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರಿನಲ್ಲಿದ್ದವರಿಗೆ ಹೆಲ್ಮೇಟ್ ಧರಿಸಿ ಎಂದು ದಂಡ ಹಾಕಿ ಈಗ ಕಣ್ತಪ್ಪಿನಿಂದ ಆಗಿದೆ ಎಂದು ಪೇಟೆಠಾಣೆ ಪೊಲೀಸರು ಸಬೂಬು ಹೇಳುತ್ತಿದ್ದಾರೆ ಎಂದರು.

ಶುಕ್ರವಾರ ಯಡಿಯೂರಪ್ಪ ಅವರ ಅಭಿಮಾನೋತ್ಸವ ಹಿನ್ನೆಲೆಯಲ್ಲಿ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ವಾಹನಗಳಿಗೆ ಸ್ಟಿಕ್ಕರ್ ಹಚ್ಚುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವಿಷಯವನ್ನು ನಮ್ಮ ಮುಖಂಡರು ಪೊಲೀಸರಿಗೆ ತಿಳಿಸಿ ಒಪ್ಪಿಗೆ ಪಡೆದಿದ್ದರು. ಸ್ಟಿಕ್ಕರ್ ಹಚ್ಚುತ್ತಿರುವ ಸಂದರ್ಭದಲ್ಲಿ ಈಚೆಗೆ ಕುಂಸಿ ಠಾಣೆಯಿಂದ ವರ್ಗಾವಣೆಯಾಗಿ ಬಂದ ಸಬ್ ಇನ್ಸ್ಪೆಕ್ಟರ್ ಒಬ್ಬರು ಯಡಿಯೂರಪ್ಪ ಅವರ ಅಭಿಮಾನೋತ್ಸವಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ವಾಹನಗಳ ಫೋಟೋ ಹೊಡೆದು ನೋ ಪಾರ್ಕಿಂಗ್‌ನಲ್ಲಿ ನಿಲ್ಲಿಸಿದ್ದೀರಿ ಎಂದು ರೋಷಾವೇಶದ ಮಾತನ್ನು ಆಡಿದ್ದಾರೆ. ಸಬ್ ಇನ್ಸ್ಪೆಕ್ಟರ್ ವರ್ತನೆ ನೋಡಿದರೆ ಪೂರ್ವಗ್ರಹಪೀಡಿತರಾಗಿ ಅಭಿಮಾನೋತ್ಸವ ಸ್ಟಿಕ್ಕರ್ ಹಚ್ಚುವ ಕಾರ್ಯಕ್ರಮಕ್ಕೆ ಅಡ್ಡಿಪಡಿಸುವ ರೀತಿಯಲ್ಲಿ ಇತ್ತು. ನಮ್ಮ ಕಾರ್ಯಕ್ರಮದಿಂದ ಸಂಚಾರಿ ವ್ಯವಸ್ಥೆಗೆ ತೊಂದರೆ ಆಗಿಲ್ಲ. ಸಾರ್ವಜನಿಕರು ದೂರಲಿಲ್ಲ. ಆದರೂ ಎಲ್ಲಾ ಕಾರುಗಳ ಫೋಟೋ ಹೊಡೆದು ದಂಡ ಕಟ್ಟಿ ಎಂದು ರಶೀದಿ ಕಳಿಸಿದ್ದಾರೆ. ಜಿಲ್ಲಾ ರಕ್ಷಣಾಧಿಕಾರಿಗಳು, ಪೊಲೀಸ್ ಉಪಾಧೀಕ್ಷಕರು ಇದರ ಬಗ್ಗೆ ಗಮನ ಹರಿಸಬೇಕು. ಕಾನೂನು ಪಾಲನೆ ಮಾಡಿ ನಮ್ಮ ಬೆಂಬಲವಿದೆ. ಆದರೆ ಅನಗತ್ಯ ಜನರಿಗೆ ಕಿರುಕುಳ ಕೊಡಬೇಡಿ ಎಂದು ಹೇಳಿದರು.

ಸಾಗರದಲ್ಲಿ ಆಡಳಿತ ವ್ಯವಸ್ಥೆ ಕುಸಿದು ಹೋಗಿದೆ. ತಹಸೀಲ್ದಾರ್, ಕಾರ್ಯನಿರ್ವಾಹಣಾಧಿಕಾರಿ, ಸಾಗರ ನಗರ, ಗ್ರಾಮಾಂತರ, ಕಾರ್ಗಲ್, ಆನಂದಪುರಂ ಠಾಣೆಗಳಲ್ಲಿ ಸಬ್ ಇನ್ಸ್ಪೆಕ್ಟರ್‌ಗಳು ಇಲ್ಲ. ಕುಡಿಯುವ ನೀರು ಸರಬರಾಜು ಇಲಾಖೆಯಲ್ಲಿ ಎಇಇ ಇಲ್ಲ. ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಇಲ್ಲಗಳ ನಡುವೆಯೇ ತಾಲೂಕು ಆಡಳಿತ ನಡೆಯುತ್ತಿದೆ. ಎಲ್ಲಾ ತಾಲೂಕುಗಳಲ್ಲಿ ಹೀಗೆ ಇದೆಯೋ, ಸಾಗರ ತಾಲೂಕಿನಲ್ಲಿ ಮಾತ್ರ ಪರಸ್ಥಿತಿ ಹೀಗಾ ಎಂದು ಚುನಾಯಿತ ಪ್ರತಿನಿಧಿಗಳು ತಿಳಿಸಬೇಕು. ಅತಿಯಾಗಿ ಆಡಳಿತದಲ್ಲಿ ಹಸ್ತಕ್ಷೇಪ, ಭ್ರಷ್ಟಾಚಾರ, ಅವರು ಕೇಳಿದಷ್ಟು ದುಡ್ಡು ಕೊಡಲು ಆಗುವುದಿಲ್ಲವೆಂದು ಅಧಿಕಾರಿಗಳು ಸಾಗರಕ್ಕೆ ವರ್ಗವಾಗಿ ಬರಲು ಹಿಂದೇಟು ಹಾಕುತ್ತಿದ್ದಾರೆ. ಕಾನೂನು ವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ. ಹುಲಿದೇವರ ಬನದ ಗುರುರಾಜ, ಪಟ್ಟಣದ ಐಸ್ ಕ್ರೀಂ ವ್ಯಾಪಾರಿ, ಆರ್.ಬಿ.ಡಿ. ಮಧು ಎಂಬುವವರ ಮೇಲೆ ಹಲ್ಲೆ ನಡೆದಿದೆ. ಅವರು ಪೊಲೀಸರಿಗೆ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ. ಜನರಿಗೆ ಪೊಲೀಸರ ಮೇಲೆ ನಂಬಿಕೆ ಇಲ್ಲವಾಗಿದೆ. ತಕ್ಷಣ ಜಿಲ್ಲಾ ರಕ್ಷಣಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಲಿ ಎಂದರು.

ಮೇ ೭ರಂದು ನಡೆಯಲಿರುವ ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟಕ್ಕೆ ನಮ್ಮ ಪಕ್ಷದ ಸಂಪೂರ್ಣ ಬೆಂಬಲವಿದೆ. ಈತನಕ ಹೋರಾಟದ ನೇತೃತ್ವ ವಹಿಸಿದವರು ಭಾಗವಹಿಸಲು ನಮಗೆ ಅಧಿಕೃತವಾಗಿ ತಿಳಿಸಿಲ್ಲ. ಆದರೂ ಪರಿಸರ ಮತ್ತು ಸ್ಥಾನಿಕ ಜನರ ವಿರೋಧಿಯಾಗಿರುವ ಈ ಯೋಜನೆ ವಿರೋಧಿ ಹೋರಾಟದಲ್ಲಿ ನಾವೆಲ್ಲಾ ಪಾಲ್ಗೊಳ್ಳುತ್ತೇವೆ ಎಂದ ಅವರು, ಹೈಕೋರ್ಟ್‌ನ ಸಂಚಾರಿ ಪೀಠವನ್ನು ಶಿವಮೊಗ್ಗದಲ್ಲಿ ಸ್ಥಾಪಿಸುವುದು ಸೂಕ್ತ. ಈಗಾಗಲೆ ಮಂಗಳೂರಿನಲ್ಲಿ ಸಂಚಾರಿ ಪೀಠ ಸ್ಥಾಪಿಸುವ ಪ್ರಸ್ತಾಪವಿದ್ದು, ಸಂಬಂಧಪಟ್ಟವರು ಇದರ ಬಗ್ಗೆ ಗಮನ ಹರಿಸಬೇಕು ಎಂದು ಹೇಳಿದರು.

ಡಾ.ರಾಜನಂದಿನಿ ಕಾಗೋಡು, ಮಲ್ಲಿಕಾರ್ಜುನ ಹಕ್ರೆ, ದೇವೇಂದ್ರಪ್ಪ, ಗಣೇಶಪ್ರಸಾದ್, ಜಿ.ಕೆ.ಭೈರಪ್ಪ, ರವಿ ಬಸ್ರಾಣಿ, ಸಂತೋಷ್ ರಾಯಲ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟ ಚೇತನ್‌ ಹೇಳಿಕೆಯಿಂದ ರಾಜ್‌ ಅಭಿಮಾನಿಗಳಿಗೆ ಅವಮಾನ
ಧರ್ಮದ ನೆಲೆಗಟ್ಟಿನಲ್ಲಿ ಭಾರತ ಇದೆ: ವಿರೂಪಾಕ್ಷಪ್ಪ