ಸಾಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಶಾಖೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಮಾಲತೇಶಪ್ಪ ಬಣ ೧೨ ಸ್ಥಾನವನ್ನು ಪಡೆಯುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಮಾಲತೇಶಪ್ಪ ನೇತೃತ್ವದ ಸದ್ಗುರು ಶಿಕ್ಷಕರ ಬಳಗ ಮತ್ತು ದೇವೇಂದ್ರಪ್ಪ ನೇತೃತ್ವದ ಸ್ವಾಭಿಮಾನಿ ಶಿಕ್ಷಕ ಬಳಗದ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಸ್ವಾಭಿಮಾನಿ ಶಿಕ್ಷಕ ಬಳಗದ ಒಬ್ಬರೂ ಗೆಲುವನ್ನು ದಾಖಲಿಸಿಲ್ಲ.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಾಲತೇಶಪ್ಪ, ಶಿಕ್ಷಕರು ಇರಿಸಿದ ಪ್ರೀತಿಗೆ ನಾನು ಮತ್ತು ನಮ್ಮ ತಂಡ ಕೃತಜ್ಞತೆ ಸಲ್ಲಿಸುತ್ತೇವೆ. ನಾನು ೧೮ ತಿಂಗಳ ಕಾಲ ಅಧ್ಯಕ್ಷನಾಗಿ ಸಲ್ಲಿಸಿದ ಸೇವೆಯನ್ನು ಗುರುತಿಸಿ ಮತ್ತೆ ಅವರ ಸೇವೆ ಮಾಡಲು ನಮ್ಮ ತಂಡಕ್ಕೆ ಅವಕಾಶ ನೀಡಿದ್ದಾರೆ. ನಮ್ಮ ತಂಡದಲ್ಲಿ ಬಹುತೇಕ ಹೊಸಬರನ್ನು ಸ್ಪರ್ಧೆಗೆ ಇಳಿಸಲಾಗಿತ್ತು. ಶಿಕ್ಷಕ ಮತದಾರರು ಇದನ್ನು ಗಮನಿಸಿದ್ದಾರೆ. ಮುಂದಿನ ದಿನಗಳಲ್ಲಿ ಗುರುಭವನ ನಿರ್ಮಾಣ, ಸದ್ಗುರು ಶಿಕ್ಷಕರ ಕಾರ್ನರ್ ಮೂಲಕ ಶಿಕ್ಷಕರಿಗೆ ಗುಣಮಟ್ಟದ ಸೇವೆ ಕಲ್ಪಿಸಲಾಗುತ್ತದೆ ಎಂದು ಹೇಳಿದರು.
ಭೂಕೇಶ್ವರಪ್ಪ, ರಾಜಶೇಖರ ಶೆಟ್ಟಿ, ಪ್ರಭು ಇ.ಎನ್., ಎಂ.ಪಿ.ಸತ್ಯಾನಾರಾಯಣ, ಮೂರ್ತಿ ಎಂ.ವೈ. ಇನ್ನಿತರರು ಹಾಜರಿದ್ದರು.