ಪಂಪ್‌ಸೆಟ್‌ಗಳಿಗೆ ೨ ರಿಂದ ೩ ಗಂಟೆಗಳ ಕಾಲ ಮಾತ್ರ ವಿದ್ಯುತ್ । ಬೆಸ್ಕಾಂ ಕಚೇರಿಯ ಎದುರು ಮೇ ೭ರಂದು ಅನಿರ್ಧಿಷ್ಟಾವಧಿ ಮುಷ್ಕರ
ಬೆಸ್ಕಾಂ ಇಲಾಖೆಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳ ಬಳಕೆಗೆ ನೀಡಲಾಗುತ್ತಿರುವ ೭ ಗಂಟೆಯ ವಿದ್ಯುತ್ ಸರಬರಾಜಿನಲ್ಲಿ ಕೇವಲ ೨ ರಿಂದ ೩ ಗಂಟೆಗಳ ಕಾಲ ಮಾತ್ರ ವಿದ್ಯುತ್ ನೀಡಲಾಗುತ್ತಿರುವುದರಿಂದ ಬೇಸಿಗೆಯ ಪ್ರಮುಖ ನೀರಾವರಿ ಹಾಗೂ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಗಳಿಗೆ ತೀವ್ರ ತೊಂದರೆಯಾಗುತ್ತಿದ್ದು, ಕೂಡಲೇ ಇದನ್ನು ಸರಿಪಡಿಸದಿದ್ದರೆ ಬೆಸ್ಕಾಂ ಇಲಾಖೆಯ ವಿರುದ್ಧ ತೀವ್ರ ಹೋರಾಟ ಕೈಗೊಳ್ಳುವುದಾಗಿ ರೈತರು ಹಾಗೂ ರೈತ ಸಂಘ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪ್ರಾಂತ ರೈತ ಸಂಘದ ಚನ್ನಬಸವಣ್ಣ ವಿದ್ಯುತ್ ಬಳಕೆದಾರರ ಸಂಘದ ನೇತೃತ್ವದಲ್ಲಿ ವಿವಿಧ ಪ್ರಗತಿಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಸೇರಿ, ರೈತರ ಹಾಗೂ ಕೃಷಿ ಜಮೀನುಗಳ ಉಳಿವಿಗಾಗಿ ಬೆಸ್ಕಾಂ ಕಚೇರಿಯ ಎದರು ಮೇ ೭ರಂದು ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.ಸರ್ಕಾರ ಕೃಷಿ ಬಳಕೆಗೆ ಬೆಳಿಗ್ಗೆ ೩ ಗಂಟೆ ಮತ್ತು ರಾತ್ರಿ ೪ ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಆದೇಶಿಸಿದ್ದರೂ, ಬೆಸ್ಕಾಂ ಇಲಾಖೆ ರೈತರಿಗೆ ಕೇವಲ ೨ರಿಂದ ೩ ಗಂಟೆಗಳ ಕಾಲ ವಿದ್ಯುತ್ ನೀಡುತ್ತಿದೆ. ಇದರಿಂದ ಬೆಳೆ ಬೆಳೆಸುವುದು ಬಹಳ ಕಷ್ಟವಾಗುತ್ತಿದೆ. ಆದ್ದರಿಂದ ದಿನಕ್ಕೆ ೭ ಗಂಟೆಗಳ ಕಾಲ ನಿರಂತರ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದರು.ವಿದ್ಯುತ್ ಪರಿವರ್ತಕಗಳು (ಟ್ರಾನ್ಸ್‌ಫಾರ್ಮರ್‌ಗಳು) ಕೆಟ್ಟು ಹೋದಾಗ ರೈತರೇ ಬದಲಿಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಆದರೆ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದ ಸಂದರ್ಭಗಳಲ್ಲಿ ೭೨ ಗಂಟೆಗಳೊಳಗೆ ಬೆಸ್ಕಾಂ ಇಲಾಖೆಯವರು ಬದಲಾಯಿಸಬೇಕೆಂಬ ನಿಯಮವಿದ್ದರೂ, ಅದು ಸಮರ್ಪಕವಾಗಿ ಜಾರಿಗೆ ಬರುತ್ತಿಲ್ಲ ಎಂದು ಆರೋಪಿಸಿದರು.ರೈತ ಸಂಘದ ತಾ ಅಧ್ಯಕ್ಷ ಬಸ್ತಿಹಳ್ಳಿ ರಾಜಣ್ಣ ಮಾತನಾಡಿ, ಬೆಸ್ಕಾಂ ಇಲಾಖೆಯವರು ರೈತರ ಜೊತೆ ಚೆಲ್ಲಾಟ ಆಡುತ್ತಿದ್ದು, ಅಧಿಕಾರಿಗಳು ರೈತರಿಗೆ ಸ್ವಂದಿಸಬೇಕು ಹಾಗೂ ಪ್ರತಿ ತಿಂಗಳು ನಡೆಯಬೇಕಾದ ಗ್ರಾಹಕರ ಸಂವಾದ ಕೇಂದ್ರಗಳು ಕ್ರಿಯಾಶೀಲವಾಗಿಲ್ಲ. ಈ ಸಭೆಗಳು ಶಾಸಕರ ಅಧ್ಯಕ್ಷತೆಯಲ್ಲಿ ನಡೆಯಬೇಕು ಹಾಗೂ ಅಧಿಕಾರಿಗಳು ರೈತರು ಮತ್ತು ಗ್ರಾಹಕರೊಂದಿಗೆ ನೇರವಾಗಿ ಚರ್ಚೆ ನಡೆಸಬೇಕು ಎಂದರು ಪ್ರಿಪೇಡ್ ಮೀಟರ್‌ಗಳು ರೈತರಿಗೆ ಮಾರಕವಾಗಿದ್ದು, ಇವುಗಳನ್ನು ಜಾರಿಗೆ ತರಬಾರದು ಎಂದು ರೈತರು ಆಗ್ರಹಿಸಿದ್ದಾರೆ. ಹಿಂದಿನಂತೆ ಬೆಸ್ಕಾಂ ಇಲಾಖೆ ಮೊದಲಿನಂತೆ ವಿದ್ಯುತ್ ಮೀಟರ್‌ಗಳನ್ನು ಅಳವಡಿಸಬೇಕು. ಪ್ರಿಪೇಡ್ ಮೀಟರ್‌ಗಳನ್ನು ಅಳವಡಿಸಲು ಮುಂದಾದರೆ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ತಿಳಿಸಿದರು.ಸುದ್ದಿಗೋಷ್ಟಿಯಲ್ಲಿ ಸೌಹಾರ್ದ ಸಂಘದ ಅಲ್ಲಾಬಕಾಷ್, ರೈತ ಸಂಘದ ತಾ ಉಪಾಧ್ಯಕ್ಷ ರೇಣುಕಮೂರ್ತಿ, ಶಿವಪ್ರಕಾಶ್, ಬಗುರ್‌ಹುಕಂ ಹೋರಾಟ ಸಮಿತಿಯ ಮಲ್ಲಿಕಾರ್ಜುನ್, ಸುಂದರೇಶ್, ಶ್ರೀನಿವಾಸ್, ನಾಗರಾಜು, ರವಿಕುಮಾರ್, ಕುಮಾರ್, ಕೊಂದಡರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಪೊಟೊ ೨-ಟಿಪಿಟಿ೨ರಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಪ್ರಾಂತ ರೈತಸಂಘದ ಜಿಲ್ಲಾಧ್ಯಕ್ಷ ಚನ್ನಬಸವಣ್ಣ ಇತರರು ಮಾತನಾಡಿದರು.