ಬಿಎಸ್‌ವೈ ಕುಟುಂಬ ಸಾರ್ವಜನಿಕವಾಗಿ ಕ್ಷಮೆ ಯಾಚಿಸಲಿ

KannadaprabhaNewsNetwork |  
Published : Oct 11, 2025, 01:00 AM IST
ಪತ್ರಿಕಾಗೋಷ್ಠಿಯಲ್ಲಿ ಕೆ.ಡಿ.ಪಿ ಸದಸ್ಯ ರಾಘವೇಂದ್ರ ನಾಯ್ಕ ಮಾತನಾಡಿದರು. | Kannada Prabha

ಸಾರಾಂಶ

ಸುದೀರ್ಘ ಕಾಲದಿಂದ ಕ್ಷೇತ್ರದ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕುಟುಂಬಸ್ಥರು ಅಧಿಕಾರ ಗಳಿಸಲು ಕಾರಣಕರ್ತರಾದ ತಾಲೂಕಿನ ಜನತೆಗೆ ಟೋಲ್‌ಗೇಟ್ ನಿರ್ಮಿಸಿಕೊಟ್ಟ ಯಡಿಯೂರಪ್ಪನವರ ಕುಟುಂಬ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ ಆಗ್ರಹಿಸಿದರು.

ಶಿಕಾರಿಪುರ: ಸುದೀರ್ಘ ಕಾಲದಿಂದ ಕ್ಷೇತ್ರದ ಶಾಸಕರಾಗಿ, ಮುಖ್ಯಮಂತ್ರಿಯಾಗಿ ಕುಟುಂಬಸ್ಥರು ಅಧಿಕಾರ ಗಳಿಸಲು ಕಾರಣಕರ್ತರಾದ ತಾಲೂಕಿನ ಜನತೆಗೆ ಟೋಲ್‌ಗೇಟ್ ನಿರ್ಮಿಸಿಕೊಟ್ಟ ಯಡಿಯೂರಪ್ಪನವರ ಕುಟುಂಬ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು ಎಂದು ಕೆಡಿಪಿ ಸದಸ್ಯ ರಾಘವೇಂದ್ರ ನಾಯ್ಕ ಆಗ್ರಹಿಸಿದರು.

ಶುಕ್ರವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದ ಹೊರವಲಯ ಕುಟ್ರಳ್ಳಿ ಸಮೀಪ ನಿರ್ಮಾಣವಾಗಿರುವ ಟೋಲ್‌ಗೇಟ್ ರೈತರು, ಕೂಲಿಕಾರ್ಮಿಕರ ಸಹಿತ ಸಂಚರಿಸುವ ಪ್ರತಿಯೊಬ್ಬರಿಗೂ ಆರ್ಥಿಕವಾಗಿ ಹೊರೆಯಾಗಿದ್ದು, ಇದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಗುರುವಾರ ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಬಂದ್ ಯಶಸ್ವಿಯಾಗಿದ್ದು, ತಾಲೂಕಿನ ಜನತೆ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.ಟೋಲ್‌ಗೇಟ್ ತೆರವುಗೊಳಿಸಲು ಕಳೆದ ವರ್ಷದಿಂದ ನಿರಂತರವಾಗಿ ಹೋರಾಟ ಸಮಿತಿ ಕೈಗೊಂಡ ಪ್ರಯತ್ನ ಅತ್ಯಂತ ಶ್ಲಾಘನೀಯ ಎಂದ ಅವರು, 2022ರಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಅಂದಿನ ಬಿಜೆಪಿ ಸರ್ಕಾರ ನಾಂದಿ ಹಾಡಿದೆ. ಆದರೆ ಸಮಿತಿಯಲ್ಲಿರುವ ಬಹುತೇಕ ಬಿಜೆಪಿ ಸಕ್ರೀಯ ಕಾರ್ಯಕರ್ತರು ಪ್ರತಿಭಟನಾ ಸಭೆಯಲ್ಲಿ ಕೇವಲ ಸರ್ಕಾರ ಹಾಗೂ ಉಸ್ತುವಾರಿ ಸಚಿವರ ವಿರುದ್ಧ ವಾಗ್ದಾಳಿ ನಡೆಸಿ, ಸಂಸದ, ಶಾಸಕರನ್ನು ಮರೆತಿದ್ದು ವಿಷಾಧನೀಯ ಎಂದರು.

ಕೇವಲ 30 ಕಿ.ಮೀ ಅಂತರದಲ್ಲಿ ಟೋಲ್‌ಗೇಟ್ ನಿರ್ಮಾಣಕ್ಕೆ ಯಡಿಯೂರಪ್ಪ ಕುಟುಂಬ ನೇರ ಕಾರಣವಾಗಿದ್ದು ಸುದೀರ್ಘ ಕಾಲದಿಂದ ತಾಲೂಕಿನ ಶಾಸಕರಾಗಿ, ಮುಖ್ಯಮಂತ್ರಿಯಾಗಿ, ಸಂಸದ ಶಾಸಕರಾಗಲು ಬೆಂಬಲಿಸಿದ ಜನತೆಗೆ ಟೋಲ್‌ಗೇಟ್ ನಿರ್ಮಾಣದ ಮೂಲಕ ಋಣ ತೀರಿಸುವ ಪ್ರಯತ್ನ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಾಮಾಜಿಕ ಜಾಲತಾಣದ ಮೂಲಕ ಹೋರಾಟ ಬೆಂಬಲಿಸುವ ಜತೆಗೆ ಟೋಲ್‌ಗೇಟ್ ತೆರವುಗೊಳಿಸದಿದ್ದಲ್ಲಿ ಜನ ನುಗ್ಗಿ ಕಿತ್ತೊಗೆಯುವ ಪ್ರಚೋದನಕಾರಿ ಹೇಳಿಕೆ ನೀಡುವ ಸಂಸದರು ಮುಗ್ದರನ್ನು ಪ್ರಚೋದಿಸಿ ಜೈಲಿಗೆ ಕಳುಹಿಸದೆ ಅಗತ್ಯ ಸಾಮಗ್ರಿಗಳ ಜತೆ ನೇತೃತ್ವ ವಹಿಸಿಕೊಂಡು ತೆರವುಗೊಳಿಸಬೇಕು. ಮಗು ಚಿವುಟಿ ತೊಟ್ಟಿಲು ತೂಗುವ ಇಬ್ಬಗೆಯ ನೀತಿ ಬಿಟ್ಟು ನೇರ ರಾಜಕಾರಣ ಮಾಡುವಂತೆ ಸಲಹೆ ನೀಡಿದರು.

ಇದುವರೆಗೂ ಇಬ್ಬಗೆ ನೀತಿಯ ರಾಜಕಾರಣದಿಂದಾಗಿ ಸತತ ಅಧಿಕಾರ ಅನುಭವಿಸಿದ್ದು ಭವಿಷ್ಯದಲ್ಲಿ ಇಂತಹ ರಾಜಕಾರಣಕ್ಕೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದ ಅವರು, ಹೋರಾಟಕ್ಕೆ ಬೆಂಬಲ ಸೂಚಿಸಿ ಬಂದ್ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೆ ಪರೋಕ್ಷವಾಗಿ ಹೋರಾಟ ಹತ್ತಿಕ್ಕುವ ಪ್ರಯತ್ನ ಅತ್ಯಂತ ಖಂಡನೀಯ ಎಂದರು.

ಭವಿಷ್ಯದ ಚುನಾವಣೆಯಲ್ಲಿ ಅಹಿಂದಾ ವರ್ಗದ ಚಕ್ರವ್ಯೂಹ ಬೇಧಿಸಲು ಸಿದ್ಧರಾಗುವಂತೆ ಸವಾಲು ಹಾಕಿದ ಅವರು ಟೋಲ್ ಗೇಟ್ ತೆರವಿಗೆ ನಡೆದ ಬಂದ್ ಯಡಿಯೂರಪ್ಪನವರ ಕುಟುಂಬಕ್ಕೆ ತಗುಲಿದ ಕಪ್ಪು ಚುಕ್ಕೆಯಾಗಿದೆ ಎಂದರು.

ಯುವ ಕಾಂಗ್ರೆಸ್ ಉಪಾಧ್ಯಕ್ಷ ಚರಣ್ ಬನ್ನೂರು, ಶಿರಾಳಕೊಪ್ಪ ಪುರಸಭಾ ಸದಸ್ಯ ಪಿ.ಜಾಫರ್ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ತಾ.ಆದಿಜಾಂಬವ ಸಮಾಜದ ಅಧ್ಯಕ್ಷ ನಿಂಗಪ್ಪ, ಡಿಎಸ್‌ಎಸ್ ಸಂಚಾಲಕ ಜಗದೀಶ್ ಚುರ್ಚುಗುಂಡಿ, ಯುವ ಕಾಂಗ್ರೆಸ್ ಅಧ್ಯಕ್ಷ ಮಂಜು ನಾಯ್ಕ, ಪ್ರ.ಕಾ ಅನಿಲ್ ಸಾಲೂರು, ವಿದ್ಯಾರ್ಥಿ ಘಟಕ ಅಧ್ಯಕ್ಷ ಸಮೀರ್, ಅನ್ವರ್ ಬಾಷಾ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ : ಸಿಎಂ ಸಿದ್ದರಾಮಯ್ಯ
ಸಿಎಂ ರೇಸಲ್ಲಿ ಡಿಕೆ ಒಬ್ಬರೇ ಇಲ್ಲ : ರಾಜಣ್ಣ