ಹಾವೇರಿ: ಬುದ್ಧನ ಸಾಮಾಜಿಕ ಪರಿವರ್ತನೆಯ ಹಣತೆ ಬಸವನಿಂದ 12ನೇ ಶತಮಾನದಲ್ಲಿ ಕಾಣಿಸಿಕೊಂಡು, 20ನೇ ಶತಮಾನದ ಅಂಬೇಡ್ಕರ್ ಅವರ ಚಿಂತನೆಗಳವರೆಗೆ ವ್ಯಾಪಕವಾಗಿ ವಿಸ್ತರಿಸಿವೆ. ಇವರು ಮಾನವತಾವಾದಿಗಳು, ಪ್ರಜಾಪ್ರಭುತ್ವ ವಾದಿಗಳಾಗಿದ್ದರು ಎಂದು ಸಾಹಿತಿ ಹನುಮಂತಗೌಡ ಗೊಲ್ಲರ ಹೇಳಿದರು.ಸ್ಥಳೀಯ ವಿನಾಯಕ ನಗರದ ಉದ್ಯಾನವನದಲ್ಲಿ ನಾಗರಿಕ ವೇದಿಕೆ ಹಾಗೂ ಮಹಿಳಾ ಘಟಕ ಏರ್ಪಡಿಸಿದ್ದ ಬುದ್ಧ, ಬಸವ, ಅಂಬೇಡ್ಕರ್ ಅವರ ಚಿಂತನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯುದ್ಯೋನ್ಮಾದ ದೇಶಗಳಿಗೆ, ಜಾಗತಿಕ ತಲ್ಲಣಗಳಿಗೆ ಬುದ್ಧ, ಬಸವ, ಅಂಬೇಡ್ಕರ್ ಮಾರ್ಗಗಳು ಪರಿಹಾರ ಸೂಚಿಸಬಲ್ಲವು. ಪ್ರಜಾಪ್ರಭುತ್ವದ ಕೊಂಬೆಗಳು ಕವಲೋಡೆದದ್ದೆ ಬುದ್ಧನಿಂದ, ವಿಜ್ಞಾನದ ವಿರುದ್ಧವಾದದನ್ನು ಏನನ್ನು ಹೇಳಿಲ್ಲ, ಏಕಕಾಲಕ್ಕೆ ವೈದ್ಯನು ಹೌದು, ಸಾಮಾಜಿಕ ಹೋರಾಟಗಾರರು ಹೌದು. ಧರ್ಮದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ, ಮಾನವೀಯತೆ ಮುಂತಾದ ಜೀವ ದ್ರವ್ಯಗಳಿಂದ ನಮ್ಮ ಸಂವಿಧಾನ ರೂಪ ತಳಿದಿದೆ ಎಂಬುದನ್ನು ಮರೆಯಬಾರದು ಎಂದರು.ಬಸವಣ್ಣ, ಅಂಬೇಡ್ಕರ್ ಚಿಂತನೆಗಳು ಮುಖ್ಯವಾಗಿ ಮಾನವನ ಕಲ್ಯಾಣವನ್ನು ಬಯಸುತ್ತವೆ. ಅವರ ಹೋರಾಟ ಮಾನವೀಯ ನೆಲೆಯಲ್ಲಿ ಸಮಾನತೆ ನಿರ್ಮಿಸುವುದಾಗಿತ್ತು. ಭಾರತೀಯ ವರ್ಣಾಶ್ರಮ ಪದ್ಧತಿಯ ಸಮಾಜದಲ್ಲಿ ಇವರೀರ್ವರು ಹುಟ್ಟಿ ಆ ಸಮಾಜದ ಮೂಢ ನಂಬಿಕೆ, ಅಂಧಶ್ರದ್ಧೆ, ಅಸಮಾನತೆಯಿಂದ ರೋಷಿಹೋಗಿ ಹೊರಬರಲು ಅವರು ಮಾಡಿದ ಹೋರಾಟಗಳು, ವಿಚಾರಧಾರೆಗಳು, ಚಿಂತನೆಗಳು ಒಂದಕ್ಕೊಂದು ಪೂರಕವಾಗಿವೆ. ಈ ಸಮಾಜಮುಖಿ ಚಿಂತಕರು, ಸಾಮಾಜಿಕ ಹೋರಾಟಗಾರರು, ಬಹುಜನರ ಹಿತಾಸಕ್ತಿಯನ್ನು ಹಾಳು ಮಾಡಿದ ಅಂದಿನ ವೇಧ, ಶಾಸ್ತ್ರ, ಧರ್ಮ ಗ್ರಂಥಗಳನ್ನು ಧಿಕ್ಕರಿಸುತ್ತಾರೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಉಪದೇಶಗಳು ಇಂದಿಗೂ ಅನುಕರಣೀಯವಾಗಿವೆ. ಸತ್ಯ, ಅಹಿಂಸೆ, ದಯೆ, ಶಾಂತಿ, ಸಮಾನತೆ ಇದು ಎಲ್ಲರಿಗೂ ಬೇಕು, ಆ ಕಾರಣದಿಂದ ಈ ಮೂವರು ಮತ್ತೆ ಮತ್ತೆ ನಮಗೆ ಬೇಕಾಗುತ್ತಾರೆ ಎಂದು ಹನುಮಂತಗೌಡ ತಿಳಿಸಿದರು.ಮಹಿಳಾ ವೇದಿಕೆಯ ಶಾಂತಕ್ಕ ಉಳ್ಳಾಗಡ್ಡಿ ಉದ್ಘಾಟಿಸಿದರು. ವೇದಿಕೆ ಉಪಾಧ್ಯಕ್ಷೆ ಭಾರತಿ ಶೆಟ್ಟರ್ ಮಾತನಾಡಿ, ಈ ದಾರ್ಶನಿಕರ ತತ್ವ. ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು. ನಾಗರಿಕ ವೇದಿಕೆಯ ಎಸ್.ಬಿ. ಗಂಜಿಗಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೋಶಾಧ್ಯಕ್ಷ ಬಸವರಾಜ್ ಬೆಲ್ಲದ, ಪ್ರಾಚಾರ್ಯ ಶಶಿಧರ್ ಕಾರಗಿ, ಮಲ್ಲಿಕಾರ್ಜುನ ಅಗಡಿ, ಪ್ರವೀಣ, ಅಕ್ಕಮ್ಮ ಎಲಿಗಾರ್, ಕವನ ಚನವೀರಪ್ಪನವರ, ಸುಜಾತ ತೆಪ್ಪದ್, ಮೇಘನಾ ಮತ್ತಿತರರು ಉಪಸ್ಥಿತರಿದ್ದರು. ಧನುಷ್, ಧೃತಿ, ಭುವನ್, ಕೃತಿಕಾ ಬಾಲ ಪ್ರತಿಭೆಗಳು ವಚನಗಳನ್ನು ಹಾಡಿದರು. ಸಾವಿತ್ರಿಬಾಯಿ ಹೆಜೀಬ್, ಸರೋಜಾ ದೇವಿಹೊಸೂರ್, ಭಾರತಿ ಪ್ರಾರ್ಥಿಸಿದರು. ಸುಧಾ ಮರಳಿಹಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಹಿಂಚಿಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ್ ಬಡಿಗೇರ್ ಸ್ವರಚಿತ ಕವನ ವಾಚಿಸಿ, ನಿರೂಪಿಸಿದರು. ಮಹಿಳಾ ವೇದಿಕೆಯ ಕಾರ್ಯದರ್ಶಿ, ಸುಮಂಗಲ ಕಾರಗಿ ವಂದಿಸಿದರು.