ಬಳ್ಳಾರಿ: ಹೆಣ್ಣು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅತ್ಯಂತ ಮಾರಕವಾಗಿರುವ ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಜಿಲ್ಲಾದ್ಯಂತ 14 ವರ್ಷದ ಹೆಣ್ಣು ಮಕ್ಕಳಿಗೆ ಉಚಿತವಾಗಿ ಎಚ್.ಪಿ.ವಿ. (ಹ್ಯೂಮನ್ ಪ್ಯಾಪಿಲೋಮ್ ವೈರಸ್) ಲಸಿಕೆ ನೀಡಿಕೆಗೆ ಜಿಲ್ಲೆಯಲ್ಲಿ ಭಾರೀ ಹಿನ್ನಡೆಯಾಗಿದೆ.
ಈ ಅಭಿಯಾನ ಮಾರ್ಚ್ 11ರಿಂದ ಪ್ರಾರಂಭವಾಗಿದ್ದು, ಒಟ್ಟು 90 ದಿನಗಳ ಕಾಲ ನಡೆಯಲಿದೆ. 14 ವರ್ಷದ ಎಲ್ಲಾ ಹೆಣ್ಣು ಮಕ್ಕಳು ಈ ಲಸಿಕೆಯನ್ನು ಪಡೆಯಲು ಅರ್ಹರಾಗಿದ್ದಾರೆ. ಈ ವರೆಗೆ ಜಿಲ್ಲಾ ಆರೋಗ್ಯ ಇಲಾಖೆ ಪ್ರಗತಿ ಸಮಾಧಾನಕರವಾಗಿಲ್ಲ ಎಂಬುದು ಅಂಕಿ ಸಂಖ್ಯೆಗಳೇ ಬಹಿರಂಗಪಡಿಸುತ್ತವೆ.
ವೈಯಕ್ತಿಕ ಶುಚಿತ್ವದ ಕೊರತೆ ಹಾಗೂ ಅಸುರಕ್ಷಿತ ಲೈಂಗಿಕ ಸಂಪರ್ಕದಿಂದ ಹರಡುವ ಎಚ್.ಪಿ.ವಿ. ಸೋಂಕು ಕಾಲಕ್ರಮೇಣ ಕ್ಯಾನ್ಸರ್ ಆಗಿ ಮಾರ್ಪಡುತ್ತದೆ. ಇದನ್ನು ತಡೆಯಲು 14 ವರ್ಷದ ಹರೆಯದಲ್ಲೇ ಲಸಿಕೆ ನೀಡುವುದು ಅತ್ಯಂತ ಪರಿಣಾಮಕಾರಿ ಕ್ರಮವಾಗಿದೆ. ಈ ಲಸಿಕೆಯನ್ನು ಪಡೆಯುವುದರಿಂದ ಗರ್ಭಕಂಠದ ಕ್ಯಾನ್ಸರ್ ಅನ್ನು ಶೇ.99 ರಷ್ಟು ತಡೆಯಬಹುದಾಗಿದೆ. ಪೋಷಕರು ನಾನಾ ವದಂತಿಗಳಿಗೆ ಕಿವಿಗೊಟ್ಟು ಹೆಣ್ಣುಮಕ್ಕಳಿಗೆ ಲಸಿಕೆ ಕೊಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದ್ದು, ಇದು ಜಿಲ್ಲೆಯ ಪ್ರಗತಿಯ ಗುರಿಗೆ ಹಿನ್ನಡೆಯಾಗಿದೆ.ತಾಲೂಕುವಾರು ವಿವರ
ಸಾಮಾಜಿಕ ಜಾಲತಾಣಗಳಲ್ಲಿ ಲಸಿಕೆಯ ಬಗ್ಗೆ ಹರಡುತ್ತಿರುವ ತಪ್ಪು ಮಾಹಿತಿಯಿಂದಾಗಿ ಮಹತ್ವದ ಯೋಜನೆಯಿಂದ ಮಹಿಳೆಯರು ದೂರು ಉಳಿಯುತ್ತಿರುವುದು ಕಂಡು ಬಂದಿದ್ದು, ಇದು ಗುರಿಮುಟ್ಟುವ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವದಂತಿಗಳಿಂದಾಗಿ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಇದುವರೆಗೆ ಲಸಿಕೆ ಪಡೆದವರಲ್ಲಿ ಯಾರಲ್ಲೂ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಹೀಗಾಗಿ ಯಾವುದೇ ಆತಂಕವಿಲ್ಲದೆ ಲಸಿಕೆ ಪಡೆದು ಆರೋಗ್ಯ ರಕ್ಷಣೆ ಮಾಡಿಕೊಳ್ಳುವಂತಾಗಬೇಕು ಎಂದು ಬಳ್ಳಾರಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಹನುಮಂತಪ್ಪ ತಿಳಿಸಿದ್ದಾರೆ.