ಬಿಸಿಲೂರಿನಲ್ಲಿ ನಿತ್ಯ ವಿದ್ಯುತ್ ಕಣ್ಣಮುಚ್ಚಾಲೆ; ಜನ ಹೈರಾಣ!

KannadaprabhaNewsNetwork |  
Published : May 12, 2026, 02:15 AM IST
( ಈ ಸುದ್ದಿಗೆ ಪೂರಕ ಫೋಟೋ ಕಳಿಸಿರುವೆ )  | Kannada Prabha

ಸಾರಾಂಶ

ಬಳ್ಳಾರಿ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ವಿದ್ಯುತ್ ಕಣ್ಣು ಮುಚ್ಚಾಲೆ ನಿರಂತರವಾಗಿ ಮುಂದುವರಿದಿದ್ದು, ಗಣಿ ಜಿಲ್ಲೆಯ ಜನಜೀವನ ಸೇರಿದಂತೆ ಜೀನ್ಸ್‌ ಮತ್ತಿತರ ಉದ್ಯಮಗಳ ಮೇಲೆ ಭಾರೀ ಪೆಟ್ಟು ಬಿದ್ದಿದೆ.

ಮಂಜುನಾಥ ಕೆ.ಎಂ.

ಬಳ್ಳಾರಿ: ಬಳ್ಳಾರಿ ಮಹಾನಗರ ಸೇರಿದಂತೆ ಜಿಲ್ಲಾದ್ಯಂತ ವಿದ್ಯುತ್ ಕಣ್ಣು ಮುಚ್ಚಾಲೆ ನಿರಂತರವಾಗಿ ಮುಂದುವರಿದಿದ್ದು, ಗಣಿ ಜಿಲ್ಲೆಯ ಜನಜೀವನ ಸೇರಿದಂತೆ ಜೀನ್ಸ್‌ ಮತ್ತಿತರ ಉದ್ಯಮಗಳ ಮೇಲೆ ಭಾರೀ ಪೆಟ್ಟು ಬಿದ್ದಿದೆ.

ದಿನದ ಹೊತ್ತಿನಲ್ಲಿ ಅನೇಕ ಬಾರಿ ವಿದ್ಯುತ್ ಕಡಿತವಾಗುತ್ತಿದ್ದು, ರಾತ್ರಿ ವೇಳೆಯಲ್ಲಿಯೂ ವಿದ್ಯುತ್ ಸ್ಥಗಿತಗೊಳ್ಳುತ್ತಿರುವುದು ನುಂಗದ ತುತ್ತಾಗಿ ಪರಿಣಮಿಸಿದೆ.

ಬೇಸಿಗೆಯ ತೀವ್ರ ಬಿಸಿಲಿನ ನಡುವೆ ವಿದ್ಯುತ್ ಸಮಸ್ಯೆ ಮತ್ತಷ್ಟು ಕಾಡುತ್ತಿದ್ದು, ನಾಗರಿಕರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಹಾಗೂ ಸಣ್ಣ ಉದ್ಯಮಿಗಳು ಸಂಕಟದ ಬೇಗುದಿ ಅನುಭವಿಸುವಂತಾಗಿದೆ.

ನಿತ್ಯ 4 ಬಾರಿ ವ್ಯತ್ಯಯ

ನಗರದ ವಿವಿಧ ಬಡಾವಣೆಗಳಲ್ಲಿ ದಿನಕ್ಕೆ ಮೂರ್ನಾಲ್ಕು ಬಾರಿ ವಿದ್ಯುತ್ ಕಡಿತ ಸಾಮಾನ್ಯ. ಕೆಲವೆಡೆ ಅರ್ಧ ಗಂಟೆ, ಇನ್ನೂ ಕೆಲವೆಡೆ ಎರಡು ಗಂಟೆಗಳ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗುತ್ತಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದ ಕಾರಣ ಮಕ್ಕಳು, ವೃದ್ಧರು ಮತ್ತು ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಿಸಿಗಾಳಿಗೆ ಪರಿತಪಿಸುತ್ತಿರುವ ನಡುವೆ ಫ್ಯಾನ್, ಕೂಲರ್ ಹಾಗೂ ಕುಡಿಯುವ ನೀರಿನ ಮೋಟಾರ್‌ಗಳು ಕಾರ್ಯನಿರ್ವಹಿಸದಿರುವುದರಿಂದ ಜನ ಕಂಗಾಲಾಗಿದ್ದಾರೆ.

ಶ್ರೀಮಂತರು ಯುಪಿಎಸ್, ಜನರೇಟರ್ ಮತ್ತಿತರ ವ್ಯವಸ್ಥೆ ಮಾಡಿಕೊಂಡು ಎಸಿ, ಕೂಲರ್ ಮತ್ತಿತರ ಸೌಲಭ್ಯಗಳೊಂದಿಗೆ ತಣ್ಣಗೆ ಇರುತ್ತಾರೆ. ಆದರೆ, ಬಡವರು ಹಾಗೂ ಮಧ್ಯಮ ವರ್ಗದವರು ಜೆಸ್ಕಾಂ ಪೂರೈಸುವ ವಿದ್ಯುತ್ ಮೇಲೆಯೇ ಅವಲಂಬಿತರಾಗಿದ್ದು, ವಿದ್ಯುತ್ ಸ್ಥಗಿತವಾದರೆ ಮನೆಯಲ್ಲಿರುವುದು ಹೇಗೆ? ಪುಟ್ಟ ಮಕ್ಕಳು ಹಾಗೂ ವೃದ್ಧರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದು ವಿದ್ಯುತ್ ಕಣ್ಣುಮುಚ್ಚಾಲೆ ಮುಂದುವರಿಸಿದರೆ ಗತಿ ಏನು? ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಬುಡ್ಡಿ ಚಿಮಣಿಯೇ ಗತಿ

ವಿದ್ಯಾರ್ಥಿಗಳಿಗೆ ರಜೆ ಸಮಯವಾದರೂ ಶಾಲೆಯವರು ಸಾಕಷ್ಟು ಹೋಂವರ್ಕ್ ನೀಡಿದ್ದಾರೆ. ಬಿಸಿಲು ಎಂದು ಮಕ್ಕಳನ್ನು ಹೊರಗಡೆ ಕಳಿಸುವಂತಿಲ್ಲ. ವಿದ್ಯುತ್ ಇಲ್ಲದ ಸ್ಥಿತಿಯಲ್ಲಿ ಮನೆಯಲ್ಲೂ ಇಟ್ಟುಕೊಳ್ಳುವಂತಿಲ್ಲ ಎಂಬ ಪರಿಸ್ಥಿತಿಯಲ್ಲಿದ್ದೇವೆ ಎಂಬುದು ಪೋಷಕರ ಅಳಲು. ಗ್ರಾಮೀಣ ಭಾಗದಲ್ಲಂತೂ ವಿದ್ಯಾರ್ಥಿಗಳು ಇಂದಿಗೂ ದೀಪದ ಬೆಳಕಿನಲ್ಲಿ ಓದುವ ಸ್ಥಿತಿ ನಿರ್ಮಾಣವಾಗಿದ್ದು, ಜೆಸ್ಕಾಂ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂದು ಜನರು ದೂರುತ್ತಾರೆ.

ಗ್ರಾಮೀಣ ಭಾಗದ ರೈತರ ಸ್ಥಿತಿಯಂತೂ ಮತ್ತಷ್ಟೂ ಶೋಚನೀಯ ಎನಿಸಿದೆ. ಸಮರ್ಪಕ ವಿದ್ಯುತ್ ಇಲ್ಲದ ಕಾರಣ ಕೃಷಿ ಪಂಪ್‌ಸೆಟ್‌ಗಳ ಕಾರ್ಯಾಚರಣೆಯೂ ಕುಂಠಿತವಾಗಿದೆ. ಪ್ರತಿವರ್ಷವೂ ಬೆಳೆನಷ್ಟಕ್ಕೀಡಾಗುತ್ತಿರುವ ರೈತಾಪಿಗಳು, ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಬೆಳೆಗೆ ನೀರು ಹರಿಸದ ಸ್ಥಿತಿಯಿದೆ. ಮತ್ತೊಂದೆಡೆ ಹೋಟೆಲ್, ಬೇಕರಿ, ವೆಲ್ಡಿಂಗ್, ಪ್ರಿಂಟಿಂಗ್ ಹಾಗೂ ಇತರೆ ಸಣ್ಣ ಕೈಗಾರಿಕೆಗಳಲ್ಲಿ ವಿದ್ಯುತ್ ವ್ಯತ್ಯಯದಿಂದ ಕೆಲಸಗಳು ನಡೆಯದೆ, ಒದ್ದಾಡುವಂತಾಗಿದ್ದು, ಯಾವುದೇ ಮುನ್ನೆಚ್ಚರಿಕೆ ನೀಡದೆ ವಿದ್ಯುತ್ ಕಡಿತ ಮಾಡುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಟ್ರಾನ್ಸ್‌ಫಾರ್ಮರ್‌ ಡಮಾರ್‌

ಕೆಲವೆಡೆ ಟ್ರಾನ್ಸ್‌ಫಾರ್ಮರ್‌ಗಳು ಪದೇಪದೇ ಸುಟ್ಟು ಹೋಗುತ್ತಿರುವುದು ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಹಳೆಯ ವಿದ್ಯುತ್ ತಂತಿಗಳು ಹಾಗೂ ನಿರ್ವಹಣೆಯ ಕೊರತೆಯಿಂದ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಮಳೆಗಾಲಕ್ಕೂ ಮುನ್ನ ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ದುರಸ್ತಿ ಮಾಡದಿದ್ದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಯಿದೆ ಎಂಬ ಆತಂಕವೂ ವ್ಯಕ್ತವಾಗಿದೆ.

ಬೇಸಿಗೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಿರುವುದರಿಂದ ಒತ್ತಡ ಹೆಚ್ಚಾಗಿದೆ ಎನ್ನಲಾಗುತ್ತಿದ್ದರೂ, ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸುವಲ್ಲಿ ಜೆಸ್ಕಾಂ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ವಿಫಲವಾಗಿವೆ ಎಂಬ ಸಾರ್ವಜನಿಕರ ಟೀಕೆಗಳನ್ನು ಅಲ್ಲಗಳೆಯುವಂತಿಲ್ಲ.

ಜೀನ್ಸ್‌ ಉದ್ಯಮಕ್ಕೂ ಬಿಸಿ

ವಿದ್ಯುತ್ ಸಮಸ್ಯೆಯಿಂದ ಬಳ್ಳಾರಿ ಜೀನ್ಸ್‌ ಉದ್ಯಮಕ್ಕೂ ಪೆಟ್ಟು ಬಿದ್ದಿದ್ದು ಸಮರ್ಪಕ ವಿದ್ಯುತ್ ಇಲ್ಲದೆ ಜೀನ್ಸ್ ಯೂನಿಟ್‌ಗಳು ಸರಿಯಾಗಿ ಕೆಲಸ ನಿರ್ವಹಿಸದಾಗಿವೆ. ಜೀನ್ಸ್‌ನ 60 ವಾಷಿಂಗ್ ಯೂಟಿನ್‌ಗಳು ಸೇರಿದಂತೆ ಕೈಗಾರಿಕಾ ಪ್ರದೇಶದಲ್ಲಿ ಬರುವ ನೂರಾರು ಸಣ್ಣಪುಟ್ಟ ಉದ್ಯಮಗಳ ಮೇಲೆ ಸುಮಾರು 20 ಸಾವಿರ ಕುಟುಂಬಗಳು ಅವಲಂಬಿತವಾಗಿದ್ದು, ವಿದ್ಯುತ್ ಸರಬರಾಜಿನಲ್ಲಾಗುತ್ತಿರುವ ವ್ಯತ್ಯಯದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ನಿತ್ಯ ಬರುತ್ತಿವೆ ಪ್ರಕಟಣೆಗಳು

ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಗರದ ಇಂತಿಂಥ ಪ್ರದೇಶದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರ ವರೆಗೆ ವಿದ್ಯುತ್ ಇರುವುದಿಲ್ಲ. ಸಾರ್ವಜನಿಕರು ಸಹಕರಿಸುವಂತೆ ಜೆಸ್ಕಾಂ ಅಧಿಕಾರಿಗಳು ಕೋರಿದ್ದಾರೆ ಎನ್ನುವ ಪತ್ರಿಕಾ ಪ್ರಕಟಣೆಗಳು ನಿತ್ಯ ಬರುತ್ತವೆ. ಬೇಸಿಗೆ ಶುರುವಾದ ಬಳಿಕವಂತೂ ವಿದ್ಯುತ್ ಸಮಸ್ಯೆಯ ಪ್ರಕಟಣೆಗಳು ಹೆಚ್ಚಾಗಿದ್ದು, ನಗರ ಹಾಗೂ ಗ್ರಾಮೀಣ ಪ್ರದೇಶ ಎನ್ನದೆ ಎಲ್ಲ ಕಡೆ ಲೋಡ್‌ ಶೆಡ್ಡಿಂಗ್ ನಡೆಯುತ್ತಿರುವುದು ಕಂಡು ಬರುತ್ತಿದೆ. ಬಳ್ಳಾರಿಯ ಪಾರ್ವತಿನಗರ 2ನೇ ಲಿಂಕ್ ರಸ್ತೆಯಲ್ಲಿ ಭಾನುವಾರ ರಾತ್ರಿ 8ಕ್ಕೆ ವಿದ್ಯುತ್ ಸ್ಥಗಿತವಾಯಿತು. ಟ್ರಾನ್ಸ್‌ಫಾರ್ಮರ್ ಸುಟ್ಟಿದೆ. ಇನ್ನು ಎರಡು ತಾಸಿನಲ್ಲಿ ವಿದ್ಯುತ್ ಬರಲಿದೆ ಎಂದು ಜೆಸ್ಕಾಂ ಅಧಿಕಾರಿಗಳು ತಿಳಿಸಿದರು.

ಆದರೆ, ಟ್ರಾನ್ಸ್‌ಫಾರ್ಮರ್ ಅಳವಡಿಸಿ ವಿದ್ಯುತ್ ಪೂರೈಕೆ ಮಾಡಿದ್ದು ಮರುದಿನ ಮಧ್ಯಾಹ್ನ 12.30ಕ್ಕೆ. ಇಡೀ ರಾತ್ರಿ ವಿದ್ಯುತ್ ಇಲ್ಲದೆ ಜನರು ಒದ್ದಾಡಿದರು. ಅಧಿಕಾರಿಗಳು ಮಾತ್ರ ನಿರುಮ್ಮಳವಾಗಿ ನಿದ್ರೆ ಮಾಡಿದರು. ಇದು ಜೆಸ್ಕಾಂ ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕನ್ನಡಿ.

ವಿದ್ಯುತ್ ಸ್ಥಗಿತದಿಂದ ರೋಸಿ ಹೋಗಿದ್ದೇವೆ. ವಾರದಲ್ಲಿ ಎರಡು ದಿನವಾದರೂ ವಿದ್ಯುತ್ ಸ್ಥಗಿತಗೊಳ್ಳುತ್ತಿದೆ. ಯಾವಾಗ ಕರೆಂಟ್ ಬರುತ್ತೆ? ಯಾವಾಗ ಹೋಗುತ್ತೆ ಎಂಬುದೇ ಗೊತ್ತಾಗಲ್ಲ. ಹೀಗಾದರೆ ವ್ಯಾಪಾರಿಗಳು ಬದುಕುವುದಾದರೂ ಹೇಗೆ ಎಂದು ಪ್ರಶ್ನಿಸುತ್ತಾರೆ ನಗರದ ಬೆಂಗಳೂರು ರಸ್ತೆಯ ವ್ಯಾಪಾರಿ ವಿಜಯಕುಮಾರ್.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರ್ಪಕವಾಗಿ ಬಸ್ ಸಂಚಾರಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಹಾವೇರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕುಡಿವ ನೀರಿನ ಸಮಸ್ಯೆ