- ಅಪರ ಡಿಸಿ ಶೀಲವಂತ ಶಿವಕುಮಾರ ಅಭಿಮತ । ಜಿಲ್ಲಾಡಳಿತ ನೇತೃತ್ವದಲ್ಲಿ ಬುದ್ಧ ಜಯಂತಿ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ದಾವಣಗೆರೆ
ವಿಶ್ವಕ್ಕೆ ಶಾಂತಿ ಮತ್ತು ಅಹಿಂಸೆಯ ಸಂದೇಶ ಸಾರಿದ ಭಗವಾನ್ ಗೌತಮ ಬುದ್ಧ ಅವರ ಬೋಧನೆಗಳು ಹಾಗೂ ತತ್ವಗಳು ಇಂದಿನ ಆಧುನಿಕ ಯುಗಕ್ಕೂ ಅತ್ಯಂತ ಪ್ರಸ್ತುತವಾಗಿದ್ದು, ಮನುಕುಲದ ಅಭಿವೃದ್ಧಿಗೆ ಅವು ದಾರಿದೀಪವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ ಅಭಿಪ್ರಾಯಪಟ್ಟರು.ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಗವಾನ್ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಬುದ್ಧರು ಜೀವನದ ಸತ್ಯ ತಿಳಿಯಲು ಪ್ರಪಂಚವು ದುಃಖಮಯವಾಗಿದೆ, ಆಸೆಯೇ ದುಃಖಕ್ಕೆ ಮೂಲಕಾರಣ, ಆಸೆಯನ್ನು ಗೆದ್ದರೆ ಮಾತ್ರ ದುಃಖವನ್ನು ಹೋಗಲಾಡಿಸಬಹುದು ಹಾಗೂ ದುಃಖ ಮುಕ್ತಿಗೆ ಅಷ್ಟಾಂಗ ಮಾರ್ಗಗಳೇ ದಾರಿ ಎಂಬ ನಾಲ್ಕು ಆರ್ಯ ಸತ್ಯಗಳನ್ನು ಬೋಧಿಸಿದರು. ಈ ಸತ್ಯಗಳನ್ನು ನಾವು ತಿಳಿದುಕೊಂಡು ಬಾಳಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯನು ಸ್ವಾರ್ಥಕ್ಕೆ ಒಳಗಾಗುತ್ತಿದ್ದಾನೆ. ಸ್ವಾರ್ಥ ಬಿಟ್ಟು ಅಶಕ್ತರಿಗೆ ಸಹಾಯ ಮಾಡುವುದೇ ಬುದ್ಧರಿಗೆ ನಾವು ಸಲ್ಲಿಸುವ ನಿಜವಾದ ಗೌರವವಾಗಿದೆ. ಬುದ್ಧ ಪ್ರತಿಪಾದಿಸಿದ ಧಮ್ಮ ಸಿದ್ಧಾಂತ ಹಾಗೂ ನಿರ್ವಾಣದ ಹಾದಿಗಳು ಅಂತರಂಗದ ಶುದ್ಧೀಕರಣಕ್ಕೆ ಸಹಕಾರಿಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಚೆನ್ನಣ್ಣ ಅವರು ಬುದ್ಧವಂದನೆ ಬೋಧಿಸಿದರು. ಅರಕೆರೆ ರಂಗಣ್ಣ ಬುದ್ಧಗೀತೆಗಳನ್ನು ಹಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಮುದಾಯದ ಮುಖಂಡರಾದ ಡಾ. ಎ.ಬಿ.ರಾಮಚಂದ್ರಪ್ಪ, ರುದ್ರಮುನಿ, ಅಣ್ಣಪ್ಪ, ಬುದ್ಧ ಅನುಯಾಯಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
-1ಕೆಡಿವಿಜಿ34: