ನಾಗಮಂಗಲದಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಭಾರೀ ಮಳೆ

KannadaprabhaNewsNetwork |  
Published : May 02, 2026, 01:45 AM IST
1ಕೆಎಂಎನ್ ಡಿ31,32,33  | Kannada Prabha

ಸಾರಾಂಶ

ತಾಲೂಕಿನ ಹರಳಕೆರೆ ಗೇಟ್‌ನ ರಸ್ತೆಬದಿಯ ನೀಲಗಿರಿ ಮರದ ಕೊಂಬೆ 11 ಕೆವಿ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು, ಸುರಿವ ಮಳೆಯಲ್ಲಿಯೇ ಸೆಸ್ಕಾಂ ನೌಕರರು ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಪಟ್ಟಣ ಸೇರಿ ತಾಲೂಕಿನ ಹಲವೆಡೆ ಶುಕ್ರವಾರ ಮಧ್ಯಾಹ್ನ ಗುಡುಗು, ಸಿಡಿಲು, ಬಿರುಗಾಳಿ ಸಹಿತ ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಭಾರೀ ಮಳೆಯಿಂದಾಗಿ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡು ಪ್ರಯಾಣಿಕರು ಪರದಾಡುವಂತಾಯಿತು.

ರೈತರು ಕಷ್ಟಪಟ್ಟು ಬೆಳೆದಿದ್ದ ವಿವಿಧ ಬಗೆಯ ತರಕಾರಿ ಬೆಳೆಗಳು ಮತ್ತು ಜಾನುವಾರುಗಳ ಮುಸುಕಿನ ಜೋಳದ ಹಸಿಮೇವು ನೆಲಕಚ್ಚಿವೆ. ಮರದ ಕೊಂಬೆಗಳು ರಸ್ತೆಗೆ ಬಿದ್ದು ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನುಗ್ಗಿದ ನೀರು:

ಶುಕ್ರವಾರ ಮಧ್ಯಾಹ್ನ ಪಟ್ಟಣದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದತ್ತ ಹೆಚ್ಚಿನ ನೀರು ಹರಿಯಿತು, ಬಸ್ ನಿಲ್ದಾಣದ ಮೇಲ್ಚಾವಣಿಯ ಮಳೆನೀರು ಪೈಪ್ ಮೂಲಕ ಸರಾಗವಾಗಿ ಹರಿದು ಹೋಗಲಾಗದೆ ಚೇಂಬರ್‌ನಲ್ಲಿಯೇ ಉಕ್ಕಿ ನಿಲ್ದಾಣದಲ್ಲೆಲ್ಲಾ ತುಂಬಿಕೊಂಡಿತು.

ಇದರಿಂದಾಗಿ ಸಾರಿಗೆ ಬಸ್‌ಗಾಗಿ ಕಾಯುತ್ತಿದ್ದ ಪ್ರಯಾಣಿಕರು ಕೂರಲಾಗದೆ ಕಟ್ಟಡದ ಗೋಡೆ ಪಕ್ಕದಲ್ಲಿ ನಿಂತು ಆಶ್ರಯ ಪಡೆದು ನಿಗಮದ ಅಧಿಕಾರಿಗಳು ಮತ್ತು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದ ದೃಶ್ಯ ಕಂಡುಬಂತು, ಪ್ರತಿ ವರ್ಷ ಮಳೆ ಬಂತೆಂದರೆ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಜಲಾವೃತಗೊಂಡು ಪ್ರಯಾಣಿಕರಿಗೆ ಮತ್ತು ಸಾರಿಗೆ ಸಿಬ್ಬಂದಿಗೆ ತೊಂದರೆಯುಂಟಾಗುತ್ತದೆ, ನಿಲ್ದಾಣದತ್ತ ಮಳೆ ನೀರು ಹರಿದುಬಾರದಂತೆ ಇತ್ತೀಚೆಗೆ ₹1 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಬಸ್ ನಿಲ್ದಾಣದ ಎರಡೂ ಬದಿಯಲ್ಲಿ ದೊಡ್ಡದಾದ ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ, ಹೊಸದಾಗಿ ನಿರ್ಮಿಸಿರುವ ಚರಂಡಿಗೆ ಸರಿಯಾದ ರೀತಿಯಲ್ಲಿ ಸಂಪರ್ಕವಿಲ್ಲದ ಕಾರಣದಿಂದಾಗಿ ಮಳೆ ನೀರು ಎಂದಿನಂತೆ ನಿಲ್ದಾಣದಲ್ಲಿಯೇ ನಿಲ್ಲುವಂತಾಗಿದೆ.

ಮೇಲ್ಚಾವಣಿಯೂ ಸರಿಯಿಲ್ಲ:

ನಿಲ್ದಾಣದ ಮೇಲ್ಚಾವಣಿ ಸಿಮೆಂಟ್ ಶೀಟ್‌ಗಳು ಅಲ್ಲಲ್ಲಿ ಬಿರುಕುಗೊಂಡು ಕೆಲವೆಡೆ ರಂಧ್ರವಾಗಿವೆ. ಮಳೆ ನೀರು ಹರಿಯುವ ಸಲುವಾಗಿ ಅಳವಡಿಸಿರುವ ಪ್ಲಾಸ್ಟಿಕ್ ಪೈಪ್‌ಗಳೂ ಕೂಡ ಕಳಚಿರುವುದರಿಂದ ನಿಲ್ದಾಣದಲ್ಲಿಯೇ ನೀರು ಹರಿದು ಕೆಲಕಾಲ ಪ್ರಯಾಣಿಕರಿಗೆ ತೊಂದರೆಯಾಯಿತು.

ಸಿಡಿಲು ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ನಾಗಮಂಗಲ - ಮಂಡ್ಯ ಮುಖ್ಯ ರಸ್ತೆ ಹಾಗೂ ಮಾಗಡಿ - ಜಲಸೂರು ರಾಜ್ಯ ಹೆದ್ದಾರಿ ಬದಿಯಲ್ಲಿನ ಮರದ ಕೊಂಬೆಗಳು ಬಿದ್ದು, ಕೆಲಹೊತ್ತು ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು, ಚಾಲಕರೇ ರಸ್ತೆಯಲ್ಲಿ ಬಿದ್ದಿದ್ದ ಮರದ ಕೊಂಬೆಗಳನ್ನು ಪಕ್ಕಕ್ಕೆ ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ತಾಲೂಕಿನ ಹರಳಕೆರೆ ಗೇಟ್‌ನ ರಸ್ತೆಬದಿಯ ನೀಲಗಿರಿ ಮರದ ಕೊಂಬೆ 11 ಕೆವಿ ವಿದ್ಯುತ್ ತಂತಿ ಮೇಲೆ ಬಿದ್ದ ಪರಿಣಾಮ ಈ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿತು, ಸುರಿವ ಮಳೆಯಲ್ಲಿಯೇ ಸೆಸ್ಕಾಂ ನೌಕರರು ವಿದ್ಯುತ್ ತಂತಿ ಮೇಲೆ ಬಿದ್ದಿದ್ದ ಮರದ ಕೊಂಬೆಗಳನ್ನು ತೆರವುಗೊಳಿಸಿದರು.

ಬಿರುಗಾಳಿ ಮಳೆ ಜೊತೆಗೆ ಸಿಡಿಲು ಅಬ್ಬರಿಸುತ್ತಿದ್ದಂತೆ ತಾಲೂಕಿನ ಬಹುತೇಕ ಹಳ್ಳಿಗಳಿಗೆ ವಿದ್ಯುತ್ ಪೂರೈಸುವ ದೇವಲಾಪುರ ಹ್ಯಾಂಡ್‌ಪೋಸ್ಟ್‌ನ 220 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ವಿದ್ಯುತ್ ಸ್ಥಗಿತಗೊಳಿಸಲಾಯಿತು.

ತಾಲೂಕಿನ ಹಲವೆಡೆ ಬಿರುಗಾಳಿ ಸಹಿತ ಸುರಿದ ಮಳೆಯಿಂದಾಗಿ ರೈತರು ಕಷ್ಟಪಟ್ಟು ಬೆಳೆದಿದ್ದ ತರಕಾರಿ ಬೆಳೆಗಳು ಮತ್ತು ಜಾನುವಾರುಗಳ ಮುಸುಕಿನ ಜೋಳದ ಹಸಿಮೇವು ನೆಲಕಚ್ಚಿವೆ. ಇದರಿಂದಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಸ್ಕಾಂ ಗ್ರಾಹಕರಿಗೆ 91 ಪೈಸೆ ದರ ಹೆಚ್ಚಳದ ಶಾಕ್‌
ಅನಿಲ ದರ ಏರಿಕೆ ಸಂಘಟಿತ ಲೂಟಿ: ಸಿಎಂ