ಎಲ್ಲ ಧರ್ಮ, ಜಾತಿ, ಭಾಷೆಯವರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟ ಸಮುದಾಯ ವೀರಶೈವ ಲಿಂಗಾಯತ ಸಮುದಾಯ. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ಹೀಗಾಗಿ ನಾವು ಸಂಘಟಿತರಾಗಿ ನಮ್ಮ ಉಳಿವಿಗಾಗಿ ಶ್ರಮಿಸಬೇಕು .
ಕನ್ನಡಪ್ರಭ ವಾರ್ತೆ ಹಲಗೂರು
ಜಾತ್ರೆ, ಉತ್ಸವಗಳು, ರಾಜಗೋಪುರ ಲೋಕಾರ್ಪಣೆಯಂತಹ ಧಾರ್ಮಿಕ ಆಚರಣೆಗಳಿಂದ ನಮ್ಮಲ್ಲಿ ಹೊಸ ಚೈತನ್ಯ ಮೂಡುವ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಯ ಪುನರುತ್ಥಾನವಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ ಬಿ.ಖಂಡ್ರೆ ಅಭಿಪ್ರಾಯಪಟ್ಟರು.
ಸಮೀಪದ ಹಲಸಹಳ್ಳಿ ಷಡಕ್ಷರಿ ಗವಿಮಠದಲ್ಲಿ ರಾಜಗೋಪುರ ಮತ್ತು ಬಸವದ್ವಾರ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಧಾರ್ಮಿಕ ಕಾರ್ಯಕ್ರಮಗಳು ಗ್ರಾಮಗಳಲ್ಲಿ ನಡೆದಾಗ ಬಂಧು ಮಿತ್ರರು ಒಗ್ಗೂಡುತ್ತಾರೆ. ಸಂಬಂಧಗಳು ಗಟ್ಟಿಗೊಳ್ಳುತ್ತವೆ ಎಂದರು.
ನಡುಗನ್ನಡ ಮಹಾಕವಿ ಹಾಗೂ ಸಂಸ್ಕೃತ ಕನ್ನಡದಲ್ಲಿ ಪಾಂಡಿತ್ಯ ಹೊಂದಿದ್ದ ಶ್ರೀ ಷಡಕ್ಷರ ದೇವರು ಹಲವು ಕೃತಿಗಳನ್ನು ರಚಿಸಿ, ಈ ನಾಡಿಗೆ ಬೆಳಕು ನೀಡಿದ್ದಾರೆ. ಬಸವೇಶ್ವರಸ್ವಾಮಿ ಇಲ್ಲಿ ಗುಹೆಯಲ್ಲಿ ಮೂಡಿ ಈ ಕ್ಷೇತ್ರ ಪವಿತ್ರವಾಗಿದೆ ಎಂದು ತಿಳಿಸಿದರು.
ಪರಿಸರ ಪ್ರೇಮಿಗಳಾಗಿದ್ದ ಪೂರ್ವಜರು:
ನಮ್ಮ ಪೂರ್ವಜರು ಮಹಾನ್ ಪರಿಸರ ಪ್ರೇಮಿಗಳಾಗಿದ್ದರು. ನಮಗೆ ಈ ಭೂಮಿಯಲ್ಲಿ ಬದುಕುವ ಹಕ್ಕು ಇರುವಂತೆಯೇ ಖಗ, ಮೃಗ, ಕೀಟ, ಸಸ್ಯಗಳಿಗೂ ಬದುಕುವ ಹಕ್ಕಿದೆ ಎಂದು ತಿಳಿದಿದ್ದರು. ಬೆಟ್ಟ, ಗುಡ್ಡಗಳನ್ನೂ ಪೂಜಿಸುತ್ತಿದ್ದರು, ವನ ಮಹೋತ್ಸವ ಆಚರಿಸುವ ಮೂಲಕ ಕಾಡಿಗೆ ಗೌರವ ಸಲ್ಲಿಸಿ ಪ್ರಕೃತಿ ಉಳಿಸಿದ್ದಾರೆ ಎಂದರು.
ಇಂದು ಎಲ್ಲ ಕ್ಷೇತ್ರಗಳಂತೆ ಆಧ್ಯಾತ್ಮಿಕ, ಧಾರ್ಮಿಕ ಕ್ಷೇತ್ರವೂ ಕಲುಷಿತವಾಗುತ್ತಿರುವುದು ಆತಂಕದ ವಿಷಯ, ಈ ನಿಟ್ಟಿನಲ್ಲಿ ಪೂಜ್ಯರು, ಹಿರಿಯರು, ಮಠಾಧಿಪತಿಗಳು ಧಾರ್ಮಿಕ ಕ್ಷೇತ್ರದ ಪಾವಿತ್ರ್ಯ ಸಂರಕ್ಷಣೆಗೆ ಮಾರ್ಗದರ್ಶನ ಮಾಡಬೇಕು ಎಂದು ಮನವಿ ಮಾಡಿದರು.
ವೀರಶೈವ ಲಿಂಗಾಯತ ಸಮಾಜಕ್ಕೆ ಭವ್ಯ ಇತಿಹಾಸವಿದೆ, ನಾವು ಕೇವಲ ನಮ್ಮ ಪೂರ್ವಜರ ಹಿರಿಮೆ ಬಗ್ಗೆ ಹೆಮ್ಮಪಟ್ಟರೆ ಸಾಲದು, ವರ್ತಮಾನದ ಜೀವಂತಿಕೆಯನ್ನೂ ಉಳಿಸಬೇಕು, ಇದಕ್ಕಾಗಿ ಶ್ರಮಿಸಿ ನಮ್ಮ ಸಮಾಜದ ಗರಿಮೆ ಎತ್ತಿಹಿಡಿಯಬೇಕು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ದಾಸೋಹದ ಮಹತ್ವ ತಿಳಿಸಿದರು, ನಾವು ದುಡಿದು ಗಳಿಸಬೇಕು, ಗಳಿಸಿ ಉಳಿಸಬೇಕು, ಉಳಿಸಿದ್ದನ್ನು ದಾಸೋಹದ ಮೂಲಕ ಸಮಾಜಕ್ಕೆ ಮರಳಿ ನೀಡಬೇಕು ಎಂದರು.
ಎಲ್ಲ ಧರ್ಮ, ಜಾತಿ, ಭಾಷೆಯವರನ್ನೂ ಅಪ್ಪಿಕೊಂಡು, ಒಪ್ಪಿಕೊಂಡು, ಎಲ್ಲರಿಗೂ ಸಾಮಾಜಿಕ ನ್ಯಾಯಕೊಟ್ಟ ಸಮುದಾಯ ವೀರಶೈವ ಲಿಂಗಾಯತ ಸಮುದಾಯ. ಸಂಘಟನೆಯಲ್ಲಿ ಶಕ್ತಿ ಇದೆ. ವಿಘಟನೆಯಲ್ಲಿ ದೌರ್ಬಲ್ಯವಿದೆ. ಹೀಗಾಗಿ ನಾವು ಸಂಘಟಿತರಾಗಿ ನಮ್ಮ ಉಳಿವಿಗಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.
ಕೆಳಗೆ ಬಿದ್ದವರನ್ನು ಮೇಲೆತ್ತುವ ಕಾರ್ಯವನ್ನು ಅಖಿಲ ಭಾರತ ವೀರಶೈವ ಮಹಾಸಭಾ ಮಾಡುತ್ತಿದೆ. ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ವೀ.ಲಿಂ.ಭವನ, ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುವ ಸಂಕಲ್ಪ ಮಾಡಿದೆ, ತಮ್ಮನ್ನು ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದ ಅರ್ಪಿಸುತ್ತೇನೆ. ಇಂದು ಸಮಾಜ ಕವಲು ದಾರಿಯಲ್ಲಿದೆ, ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲರಿಗೂ ಸಾಮಾಜಿಕ ನ್ಯಾಯ ಕೊಟ್ಟ ನಮ್ಮ ಸಮಾಜದ ಮುಂದೆಯೂ ಅನೇಕ ಸಮಸ್ಯೆ ಸವಾಲುಗಳಿವೆ. ಆ ಸವಾಲುಗಳನ್ನು ಮೆಟ್ಟಿನಿಲ್ಲಲು ಶ್ರಮಿಸುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಸುತ್ತೂರು ಮಹಾ ಸಂಸ್ಥಾನದ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ, ಹಲಸಹಳ್ಳಿ ಗವಿಮಠದ ಪರಮಪೂಜ್ಯ ಶ್ರೀ ಷಡಕ್ಷರಿ ಸ್ವಾಮೀಜಿ, ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.