ಕನ್ನಡಪ್ರಭ ವಾರ್ತೆ ಹಾಸನ
ಞಬೌದ್ಧ ಮಹಾಸಭಾ ಅಧ್ಯಕ್ಷ ಮಲ್ಲಯ್ಯ ಮಾತನಾಡಿ, ಈ ದಿನವನ್ನು ವಿಶ್ವದಾದ್ಯಂತ ಭಗವಾನ್ ಬುದ್ಧರ ಜಯಂತಿಯಾಗಿ ಆಚರಿಸಲಾಗುತ್ತದೆ. ಬುದ್ಧರು ಜನ್ಮತಾಳಿದ ಈ ದಿನ ಅತ್ಯಂತ ಪವಿತ್ರ ಮತ್ತು ಶ್ರೇಷ್ಠವಾದ ದಿನವಾಗಿದೆ. ಬೌದ್ಧ ಧರ್ಮದ ಮುಖಂಡರು, ದಲಿತ ಸಮುದಾಯದ ನಾಯಕರು, ಪ್ರಗತಿಪರ ಚಿಂತಕರು ಹಾಗೂ ಸಮುದಾಯದ ನೌಕರರು ಭಾಗವಹಿಸಿರುವುದು ಸಂತೋಷದ ಸಂಗತಿ ಎಂದರು. ಬೌದ್ಧ ಧರ್ಮವು ಶಾಂತಿ, ಸಮಾನತೆ, ಕರುಣೆ ಮತ್ತು ಮಮತೆಯ ಸಂದೇಶ ಸಾರುವ ಧರ್ಮವಾಗಿದ್ದು, “ಯುದ್ಧ ಬೇಡ, ಬುದ್ಧ ಬೇಕು” ಎಂಬ ಘೋಷಣೆಯೊಂದಿಗೆ ವಿಶ್ವಶಾಂತಿ ಬುದ್ಧ ವಿಹಾರ ಕೇಂದ್ರದಿಂದ ನಡಿಗೆ ಹಮ್ಮಿಕೊಂಡಿದ್ದೇವೆ ಎಂದು ತಿಳಿಸಿದರು. ಸಮಾಜದಲ್ಲಿ ಶಾಂತಿ ನೆಲೆಸಬೇಕು, ಹಿಂಸೆ ಅಂತ್ಯವಾಗಬೇಕು ಎಂಬ ಸಂದೇಶವನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು. ಆದರೆ ಇಂತಹ ಮಹತ್ವದ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದ ಯಾವುದೇ ಹಿರಿಯ ಅಧಿಕಾರಿಗಳು ಹಾಜರಾಗದಿರುವುದು ಬೌದ್ಧ ಸಮಾಜಕ್ಕೆ ತುಂಬಾ ನೋವು ತಂದಿದೆ. ಜಿಲ್ಲಾಡಳಿತ ಶಿಷ್ಟಾಚಾರ ಪಾಲನೆ ಮಾಡಿಲ್ಲ. ಶಾಂತಿ ಬಯಸುವ ಧರ್ಮದ ಕಾರ್ಯಕ್ರಮಕ್ಕೆ ಸಹಕಾರ ನೀಡದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಈ ರೀತಿಯ ನಿರ್ಲಕ್ಷ್ಯ ಮರುಕಳಿಸದಂತೆ ಜಿಲ್ಲಾಡಳಿತ ಗಮನಹರಿಸಬೇಕು ಎಂದು ಮನವಿ ಮಾಡಿದರು.ದಲಿತ ಸಮುದಾಯದ ಮುಖಂಡ ಎಚ್. ಕೆ. ಸಂದೇಶ್ ಮಾತನಾಡಿ, ಬುದ್ಧನ ೨೫೭೦ನೇ ಜನ್ಮದಿನಾಚರಣೆಯನ್ನು ಆಚರಿಸುತ್ತಿದ್ದೇವೆ. ಇತ್ತೀಚಿನ ವರ್ಷಗಳಲ್ಲಿ ಸರ್ಕಾರದ ವತಿಯಿಂದ ಬುದ್ಧ ಜಯಂತಿ ಆಚರಣೆ ಮಾಡಬೇಕೆಂದು ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ. ಇದಕ್ಕಾಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇವೆ ಎಂದರು. ಬುದ್ಧನು ಈ ಜಗತ್ತಿಗೆ ಪ್ರೀತಿ, ಕರುಣೆ, ಮಮಕಾರ ಮತ್ತು ಸಮಾನತೆಯ ಮೌಲ್ಯಗಳನ್ನು ನೀಡಿದ ಮಹಾನ್ ತತ್ವಜ್ಞಾನಿ ಎಂದು ಸ್ಮರಿಸಿದ ಅವರು, ಇಂತಹ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ, ಎಸ್ಪಿ, ಸಹಾಯಕ ಆಯುಕ್ತರು, ಹೆಚ್ಚುವರಿ ಎಸ್ಪಿ ಹಾಗೂ ತಹಸೀಲ್ದಾರ್ ಹಾಜರಾಗಬೇಕಾಗಿತ್ತು ಎಂದು ಹೇಳಿದರು. ಇಂದು ಮೇ ೧ ರಜೆ ದಿನವಾಗಿದ್ದರೂ, ಜನರಿಗೆ ಒಳ್ಳೆಯ ಸಂದೇಶ ನೀಡಲು ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರುವ ಅವಕಾಶವಿತ್ತು. ಜಿಲ್ಲಾಧಿಕಾರಿಗಳು ಇದನ್ನು ವಿಶೇಷ ಕಾರ್ಯಕ್ರಮವೆಂದು ಪರಿಗಣಿಸಿ ಗಮನ ಕೊಡಬೇಕಾಗಿತ್ತು. ಇಂತಹ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಮರುಕಳಿಸದಂತೆ ನಿಗಾವಹಿಸಬೇಕು ಎಂದು ಒತ್ತಾಯಿಸಿದರು.ಕಾರ್ಯಕ್ರಮದಲ್ಲಿ ಎಂಜಿನಿಯರ್ ಹೇಮಂತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ತಾರನಾಥ್, ಅಂಬೂಗ ಮಲ್ಲೇಶ್, ಜಗದೀಶ್, ಕುಮಾರ್ ಗೌರವ್, ರಾಜಶೇಖರ್, ಚಿನ್ನೇನಹಳ್ಳಿ ಸ್ವಾಮಿ, ಸ್ವಾಮಿಗೌಡ, ಹರೀಶ್ ಉಳುವಾರೆ, ಜೈಭೀಮ್ ಬ್ರಿಗೇಡ್ ಜಿಲ್ಲಾಧ್ಯಕ್ಷ ರಾಜೇಶ್, ಶಿವಮ್ಮ, ಗಂಗಾಧರ್ ಸೇರಿದಂತೆ ಇತರರು ಭಾಗವಹಿಸಿದ್ದರು.