ಕನ್ನಡಪ್ರಭ ವಾರ್ತೆ ಉಡುಪಿ
ಬುದ್ದಿಸ್ಟ್ ಸೊಸೈಟಿ ಆಫ್ ಇಂಡಿಯಾ ಹಾಗು ಸಂಬುದ್ಧ ಎಜುಕೇಷನಲ್ ಕಲ್ಚರಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬುಧವಾರ ಆದಿಉಡುಪಿಯ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಬುದ್ಧ ಪೂರ್ಣಿಮೆ ಪ್ರಯುಕ್ತ ವಿದ್ಯಾರ್ಥಿಗಳಿಗೆ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ವಲಯದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ. ಟಿ. ಅವರು, ಯಾವುದೇ ಒಂದು ಧರ್ಮದಲ್ಲಿ ಅನಾಚಾರ, ಅಂಧಾನುಕರಣೆ ಮೌಢ್ಯಾಚರಣೆಗಳು ಹೆಚ್ಚಾದಾಗ ಹೊಸ ಧರ್ಮ ಹುಟ್ಟಿಕೊಳ್ಳುತ್ತದೆ. ಹಿಂದೆ ಭಾರತದ ಇತಿಹಾಸದಲ್ಲಿ ಅಂತಹದ್ದೇ ವಾತಾವರಣ ಸೃಷ್ಟಿಯಾಗಿ ಬೌದ್ಧ ಧರ್ಮ ಹುಟ್ಟಿಕೊಂಡಿತು. ಬುದ್ಧರು ತನ್ನ ಜ್ಞಾನೋದಯದಿಂದ ಕಂಡುಕೊಂಡ ಸತ್ಯವನ್ನು ಜನರಿಗೆ ತಿಳಿಸಿ ದುಃಖವನ್ನು ಮೆಟ್ಟಿ ನಿಲ್ಲುವ ಮಾರ್ಗವನ್ನು ತಿಳಿಸಿದರು. ಅವರು ತಾನು ಹೇಳಿದ ವಿಚಾರಗಳು ಸರಿಯಾಗಿದ್ದರೆ ಮಾತ್ರ ಅನುಸರಿಸುವಂತೆ ತಿಳಿಸಿದರು. ಹಾಗಾಗಿ ಮನುಷ್ಯನ ಐಹಿಕ ಸುಖಕ್ಕಾಗಿ ಬುದ್ಧರ ಬೋದನೆಗಳು ಧರ್ಮಾತೀತವಾಗಿ ಎಲ್ಲರಿಗೂ ಅಗತ್ಯವಾಗಿದೆ ಎಂದರು.
ಸಂಬುದ್ಧ ಟ್ರಸ್ಟ್ ನ ವತಿಯಿಂದ ಎಸ್ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಆರ್ಥಿಕವಾಗಿ ಹಿಂದುಳಿದ ಎಲ್ಲಾ ಸಮುದಾಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಉಡುಪಿ ತಹಸಿಲ್ದಾರ್ ಪಿ.ಆರ್. ಗುರುರಾಜ್ ಮತ್ತು ಲೋಕೋಪಯೋಗಿ ಅಭಿಯಂತರರ ದಿನೇಶ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು.ಈ ವರ್ಷದ ವಿಶೇಷ ಶಿಷ್ಯವೇತನವನ್ನು ದ್ವಿತೀಯ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣಳಾದ ದ.ಕ. ಜಿಲ್ಲೆಯ ಉಪಾಸಕ ದೇವಪ್ಪ ಬೌದ್ ಅವರ ಮಗಳು ಗಾನಶ್ರೀ ಅವರಿಗೆ ನೀಡಿ ಸನ್ಮಾನಿಸಲಾಯಿತು.
ಬಿಎಸ್ಐ ಜಿಲ್ಲಾ ಘಟಕದ ಅಧ್ಯಕ್ಷ ಅಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ರಾಘವೇಂದ್ರ ಅತಿಥಿಗಳನ್ನು ಸ್ವಾಗತಿಸಿದರು. ಮಂಜುನಾಥ್ ವಿ. ವಕೀಲರು ಪ್ರಾಸ್ತಾವಿಕವಾಗಿ ಮಾತನಾಡಿ, ನಾಗರಾಜ್ ಉಪ್ಪುರ್ ವಂದಿಸಿದರು.