ಚಂದ್ರಶೇಖರಗೌಡರಿಗೆ ಪಕ್ಷದಲ್ಲಿ ಸೂಕ್ತ ಸ್ಥಾನ ನೀಡಿ: ಜಿ.ಆರ್‌.ರಮೇಶ್‌ ಮನವಿ

KannadaprabhaNewsNetwork |  
Published : May 25, 2024, 12:51 AM IST
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ ಗೌಡ ರವರಿಗೆ ಸರ್ಕಾರದಲ್ಲಿ ಉನ್ನತ ಸ್ಥಾನ ನೀಡುವಂತೆ ಮಧುಗಿರಿಯಲ್ಲಿ ಕಾಂಗ್ರೆಸ್‌ ಪಕ್ಷದ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ವರಿಷ್ಠರಲ್ಲಿ ಮನವಿ ಮಾಡಿದರು.ಜಿಲ್ಲಾ ಪ್ರಧಆನ ಕಾರ್ಯದರ್ಶಿ ಜಿ.ಆರ್‌.ರಮೇಶ್‌, ಕೆಪಿಸಿಸಿ ಸದಸ್ಯ ರಾದ ಸಿದ್ದಾಪುರ ರಂಗಶ್ಯಾಮಯ್ಯ, ಮುಖಂಡರಾದ ಮೂಡಲಗಿರೀಶ್‌ ಸೇರಿದಂತೆ ಅನೇಖರು ಇದ್ದಾರೆ.  | Kannada Prabha

ಸಾರಾಂಶ

ಕಾಡುಗೊಲ್ಲ ಜನಾಂಗಕ್ಕೆ ಸೇರಿದ ಚಂದ್ರಶೇಖರ್‌ಗೌಡರಿಗೆ ಈವರೆಗೆ ಉನ್ನತ ಸ್ಥಾನ ನೀಡದಿರುವುದು ಜಿಲ್ಲೆಯ ಕಾಂಗ್ರೆಸಿಗರಿಗೆ ಬೇಸರ ತಂದಿದೆ.

ಕನ್ನಡಪ್ರಭ ವಾರ್ತೆ ಮಧುಗಿರಿ

ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸಂಸತ್‌ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಚಂದ್ರಶೇಖರ್‌ ಗೌಡ ಹಗಲಿರುಳು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್‌.ಪಿ.ಮುದ್ದಹನುಮೇಗೌಡ ಪರ ಪ್ರಚಾರ ನಡೆಸುವಲ್ಲಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಗೌಡರಿಗೆ ರಾಜ್ಯಮಟ್ಟದಲ್ಲಿ ಕಾಂಗ್ರೆಸ್‌ ಪಕ್ಷ ಸೂಕ್ತ ಸ್ಥಾನ ನೀಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಆರ್‌.ರಮೇಶ್‌ ಕಾಂಗ್ರೆಸ್‌ ಪಕ್ಷದ ವರಿಷ್ಠರಲ್ಲಿ ಮನವಿ ಮಾಡಿದರು.

ಇಲ್ಲಿನ ಜಿಬಿಎನ್‌ ಗೇಟ್‌ ಬಳಿಯಿರುವ ಎಸ್‌ಎಂಐಡಿ ಫೌಂಡೇಷನ್‌ ಅವರಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಂದ್ರಶೇಖರಗೌಡ ಕಾಡುಗೊಲ್ಲ ಜನಾಂಗದ ಜಿಲ್ಲಾ ಅಧ್ಯಕ್ಷರಾಗಿಯೂ ಸತತ 15 ವರ್ಷಗಳಿಂದ ಸೇವೆ ಸಲ್ಲಿಸುವ ಮೂಲಕ ಜಿಲ್ಲೆಯ ಮನೆ ಮಾತಾಗಿದ್ದಾರೆ. ಇವರಿಗೆ ಕಾಂಗ್ರೆಸ್‌ ಸರ್ಕಾರದಲ್ಲಿ ಸೂಕ್ತ ಸ್ಥಾನಮಾನ ನೀಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಬಲಿಷ್ಠವಾಗಿ ಕಟ್ಟಲು ಅನುಕೂಲವಾಗಲಿದೆ ಎಂದರು.

ಗೊಲ್ಲ ಸಮುದಾಯದ ಮುಖಂಡ ಮೂಡ್ಲ ಗಿರೀಶ್‌ ಮಾತನಾಡಿ, ತುಮಕೂರು ಜಿಲ್ಲಾ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರುವ ಚಂದ್ರಶೇಖರ್‌ಗೌಡ ಕೇವಲ 4 ತಿಂಗಳಲ್ಲಿ ಜಿಲ್ಲೆಯಲ್ಲಿ ಮಿಂಚಿನಂತೆ ಸಂಚರಿಸಿ, ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ತಳಮಟ್ಟದಿಂದ ಸಂಘಟಿಸಿ ಜಿಲ್ಲೆಯಲ್ಲಿ 7 ಆಸೆಂಬ್ಲಿ ಕ್ಷೇತ್ರಗಳಲ್ಲಿ ಪಕ್ಷ ಜಯಗಳಿಸಲು ಪ್ರಮುಖ ಪಾತ್ರ ವಹಿಸಿದ್ದಾರೆ. ಆದ್ದರಿಂದ ಸರ್ಕಾರದಲ್ಲಿ ಗೌಡರಿಗೆ ಗೌರವ ಸ್ಥಾನ ನೀಡುವ ಮೂಲಕ ಕಾಡು ಗೊಲ್ಲ ಜನಾಂಗವನ್ನು ಮುಖ್ಯ ವಾಹಿನಿಗೆ ತರಬೇಕೆಂದು ವರಿಷ್ಠರಲ್ಲಿ ಮನವಿ ಮಾಡಿದರು.

ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶ್ಯಾಮಣ್ಣ ಮಾತನಾಡಿ, ಕಾಡುಗೊಲ್ಲ ಜನಾಂಗಕ್ಕೆ ಸೇರಿದ ಚಂದ್ರಶೇಖರ್‌ಗೌಡರಿಗೆ ಈವರೆಗೆ ಉನ್ನತ ಸ್ಥಾನ ನೀಡದಿರುವುದು ಜಿಲ್ಲೆಯ ಕಾಂಗ್ರೆಸಿಗರಿಗೆ ಬೇಸರ ತಂದಿದೆ. ಗೌಡರು ಪಕ್ಷಕ್ಕಾಗಿ ಶ್ರಮಿಸಿದ್ದು, ಇವರಿಗೆ ಸರ್ಕಾರದಲ್ಲಿ ಉನ್ನತ ಹುದ್ದೆ ನೀಡುವಂತೆ ವರಿಷ್ಠರಲ್ಲಿ ಮನವಿ ಮಾಡಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಹಾಲಪ್ಪ,ಪುಲಮಾಚಿ ಗ್ರಾಪಂ ಸದಸ್ಯ ನರಸಿಂಹಮೂರ್ತಿ, ಚಿತ್ತಯ್ಯ, ಕೋಟೆಕಲ್ಲಪ್ಪ, ರಾಮಾಂಜನೇಯ, ಹನುಮಂತಪ್ಪ, ಶಿವಾನಂದ್‌, ಎಸ್‌.ಸಂಜೀವಯ್ಯ, ಪೋಸ್ಟ್‌ ಮರಿಯಪ್ಪ , ಜಯರಾಮಯ್ಯ ಸೇರಿ ಅನೇಕರಿದ್ದರು.

PREV