ಮೇವು ಕಿಟ್ ವಿತರಣೆಗೆ ಕೇಂದ್ರದ ಎನ್‍ಎಲ್‍ಎಂ ಯೋಜನೆಯಡಿ ₹1.20 ಕೋಟಿ ನೆರವು

KannadaprabhaNewsNetwork | Published : May 25, 2024 12:51 AM

ಸಾರಾಂಶ

ಕೇಂದ್ರ ಸರ್ಕಾರದ ಎನ್‍ಎಲ್‍ಎಂ ಯೋಜನೆಯ ಅನುದಾನದಡಿ ಎನ್‍ಡಿಡಿಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾ ಮಂಡಳ ವತಿಯಿಂದ ಹಸಿರು ಮೇವಿನ ಬಿತ್ತನೆ ಬೀಜಗಳ ಹಂಚಿಕೆಗೆ ರು.1.20 ಕೋಟಿ ನೆರವು ನೀಡಲಾಗಿದೆ.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಹೈನು ಉತ್ಪಾದಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಎನ್‍ಎಲ್‍ಎಂ ಯೋಜನೆಯ ಅನುದಾನದಡಿ ಎನ್‍ಡಿಡಿಬಿ ಹಾಗೂ ಕರ್ನಾಟಕ ಸಹಕಾರ ಹಾಲು ಮಹಾ ಮಂಡಳ ವತಿಯಿಂದ ಶಿಮುಲ್‍ಗೆ ರು.1.20 ಕೋಟಿ ಮೊತ್ತದ ಹಸಿರು ಮೇವಿನ ಬಿತ್ತನೆ ಬೀಜಗಳ ಹಂಚಿಕೆ ಮಾಡಲಾಗಿದೆ.

ಕಳೆದ ಸಾಲಿನಲ್ಲಿ ತೀವ್ರ ಬರ ಪರಿಸ್ಥಿತಿ ಇದ್ದ ಹಿನ್ನೆಲೆಯಲ್ಲಿ ಮೇವಿನ ಲಭ್ಯತೆ ಕಡಿಮೆಯಾದ್ದರಿಂದ ದುಬಾರಿ ಬೆಲೆ ತೆತ್ತು ಮೇವನ್ನು ಖರೀದಿಸಿ ನಷ್ಟ ಅನುಭವಿಸಿದ ರೈತರಿಗೆ ನೆರವಾಗುವ ಉದ್ದೇಶದಿಂದ ಮುಂಗಾರು ಹಂಗಾಮು ಪ್ರಾರಂಭವಾಗುವ ಮುನ್ನ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ವಿವಿಧ ಮೇವಿನ ತಳಿಗಳ 3.5 ಕೆ.ಜಿ. ಕಿರುಪೊಟ್ಟಣಗಳನ್ನು ರೈತರಿಗೆ ಉಚಿತವಾಗಿ ಪೂರೈಸಲು ನಿರ್ಧರಿಸಿದೆ.

ಪ್ರತಿಯೊಬ್ಬ ಹಾಲು ಉತ್ಪಾದಕರಿಗೂ ಮೇವಿನ ಬೀಜದ ಕಿರುಪೊಟ್ಟಣಗಳನ್ನು ವಿತರಿಸಿ ಹೆಚ್ಚು ಹಸಿರು ಮೇವು ಉತ್ಪಾದಿಸುವ ಮೂಲಕ ಉತ್ಪಾದನಾ ವೆಚ್ಚವನ್ನು ತಗ್ಗಿಸಿ ಹೈನುಗಾರಿಕೆಯನ್ನು ಲಾಭದಾಯಕ ಉದ್ಯಮವಾಗಿ ಮಾರ್ಪಡಿಸಲು ಯೋಜಿಸಲಾಗಿದೆ.

ಹಾಲು ಉತ್ಪಾದಕರ ಸಹಕಾರ ಸಂಘಗಳ ಹಾಲು ಶೇಖರಣೆ ಆಧಾರದ ಮೇಲೆ ಮಳೆ ಆಶ್ರಿತ ರೈತರು, ನೀರಾವರಿ ಹೊಂದಿರುವ ರೈತರನ್ನು ಗುರುತಿಸಿ ಯೋಜನೆಯ ನಿಯಮದಂತೆ ಮೇವಿನ ಜೀಜದ ಮಿನಿ ಕಿಟ್‍ಗಳನ್ನು ಹಂಚಿಕೆ ಮಾಡುವಂತೆ ಹಾಲು ಉತ್ಪಾದ ಕರ ಸಹಕಾರ ಸಂಘಗಳಿಗೆ ಈಗಾಗಲೇ ಮಾರ್ಗಸೂಚಿ ಹೊರಡಿಸಲಾಗಿದೆ.

2024-25ನೇ ಸಾಲಿಗೆ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಕ್ಕೆ 120 ಮೆಟ್ರಿಕ್ ಟನ್ ಬಹು ಕಟಾವು ಜೋಳ ಸಿಎಸ್‍ಹೆಚ್ - 24 ಎಮ್‍ಎಫ್-20ಎಮ್‍ಟಿ, ಸಿಎಸ್‍ಹೆಚ್-43 ಎಮ್‍ಎಫ್-90ಎಂಟಿ, ಮೆಕ್ಕೆಜೋಳ ಜೆ 177-10ಎಂಟಿ ಮೇವಿನ ಬಿತ್ತನೆ ಬೀಜ ಹಂಚಿಕೆಯಾಗಿದೆ. ಕೇಂದ್ರ ಸರ್ಕಾರದ ಎನ್ಎಲ್ಎಮ್ ಯೋಜನೆಯಡಿ ಒಕ್ಕೂಟಕ್ಕೆ ಹಂಚಿಕೆ ಮಾಡಲಾಗಿರುವ ಹಸಿರು ಮೇವಿನ ಬಿತ್ತನೆ ಬೀಜದ ಮಿನಿಕಿಟ್‍ಗಳನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳ ಮೂಲಕ ಹಾಲು ಉತ್ಪಾದಕರಿಗೆ ಯೋಜನೆಯ ನಿಬಂಧನೆಯ ಅನುಸಾರ ಸಾಮಾನ್ಯ ವರ್ಗಕ್ಕೆ 70%, ಪ.ಜಾತಿ 20%, ಪ.ಪಂಗಡಕ್ಕೆ 10% ನಷ್ಟು, ಹಾಲು ಶೇಖರಣೆಯ ಆಧಾರದ ಮೇಲೆ ವಿತರಿಸಲು ಯೋಜಿಸಲಾಗಿದೆ ಎಂದು ಶಿಮುಲ್ ವ್ಯವಸ್ಥಾಪಕ ನಿರ್ದೇಶಕ ಎಸ್.ಜಿ.ಶೇಖರ್ ತಿಳಿಸಿದ್ದಾರೆ.

Share this article