ಕನ್ನಡಪ್ರಭ ವಾರ್ತೆ ಸಿರಿಗೆರೆ
ವಿಧಾನ ಪರಿಷತ್ತಿಗೆ ನಡೆಯಲಿರುವ ಚುನಾವಣೆಯಲ್ಲಿ ಮಾಜಿ ಸಚಿವ ಎಚ್. ಆಂಜನೇಯ ಅವರಿಗೆ ಸ್ಥಾನ ಕಲ್ಪಿಸಿಕೊಡುವಂತೆ ಕ್ಷೇತ್ರದಾದ್ಯಂತ ಒತ್ತಡ ಹೆಚ್ಚಾಗುತ್ತಿದೆ.ಹೋಬಳಿ ಕೇಂದ್ರವಾದ ಭರಮಸಾಗರದ ಸಮುದಾಯ ಭವನವೊಂದರಲ್ಲಿ ಇಂದು ನಡೆದ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಎಚ್.ಆಂಜನೇಯ ಅವರಿಗೆ ಈ ಬಾರಿ ಸ್ಥಾನ ಕಲ್ಪಿಸಿಕೊಡಲೇಬೇಕೆಂಬ ಹಕ್ಕೊತ್ತಾಯ ಮಂಡಿಸಿದರು.
ಎಚ್.ಆಂಜನೇಯ ಜಿಲ್ಲೆಯ ಕಾಂಗ್ರೆಸ್ ಮುಖಂಡರಲ್ಲಿ ಬಹು ಮುಖ್ಯ ನಾಯಕರಾಗಿದ್ದಾರೆ. ರಾಜ್ಯದಲ್ಲಿ ಪ್ರಮುಖ ದಲಿತ ನಾಯಕರೆನಿಸಿಕೊಂಡಿದ್ದಾರೆ. ಜಿಲ್ಲೆಯ ರಾಜಕಾರಣದಲ್ಲಿ ಅವರು ಬೆಳೆದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರ ಪಡೆಯನ್ನು ಕಟ್ಟಿ ಬೆಳೆಸುವಲ್ಲಿ ಅವರು ದೊಡ್ಡ ಪಾತ್ರ ವಹಿಸಿದ್ದಾರೆ. ಅದನ್ನು ಪರಿಗಣಿಸಿ ಅವರಿಗೆ ಸ್ಥಾನ ಕಲ್ಪಿಸಬೇಕು ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಬಿ.ಟಿ.ನಿರಂಜನಮೂರ್ತಿ ಹೇಳಿದರು.ಸಚಿವರಾಗಿದ್ದಾಗ ಎಚ್.ಆಂಜನೇಯ ಜಾರಿಗೊಳಿಸಿದ ಹಲವು ಕಾರ್ಯಕ್ರಮಗಳಿಂದ ಜಿಲ್ಲೆಯಲ್ಲಿ ಜನಪ್ರಿಯರಾಗಿದ್ದಾರೆ. ಸಾಕಷ್ಟು ಅನುದಾನವನ್ನು ತಂದು ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಪಕ್ಷದ ಪರವಾಗಿ ಇವರ ಹೋರಾಟ, ದಿಟ್ಟತನ, ಎದೆಗಾರಿಕೆಯನ್ನು ಯಾರು ಅಲ್ಲಗಳೆಯವಂತಿಲ್ಲ. ಅವರು ಸಚಿವರಾಗಿದ್ದಾಗ ಪ.ಜಾತಿ, ಪ.ಪಂಗಡ ಮತ್ತು ಹಿಂದುಳಿದ ವರ್ಗಗಳ ಜಾತಿಗಳಿಗೆ ಹೊಸ ಹೊಸ ಯೋಜನೆಯನ್ನು ಕೈಗೊಂಡು ಯೋಜನಾ ವೆಚ್ಚದ ಅರ್ಧ ಭಾಗದಷ್ಟು ಸಬ್ಸಿಡಿ ನೀಡಿದ್ದರು ಎಂದರು.
ವಿಧಾನಸಭಾ ಚುನಾವಣೆಯಲ್ಲಿ ಸೋಲನ್ನಪ್ಪಿದ್ದರೂ ಮೊನ್ನೆಯ ಲೋಕಸಭಾ ಚುನಾವಣೆಯಲ್ಲಿ ಇಡೀ ಚಿತ್ರದುರ್ಗ ಕ್ಷೇತ್ರದಾದ್ಯಂತ ಕಾಲಿಗೆ ಚಕ್ರಕಟ್ಟಿಕೊಂಡವರಂತೆ ಓಡಾಡಿದ್ದು, ಆಂಜನೇಯ. ಇನ್ನಿತರ ಕ್ಷೇತ್ರದಲ್ಲಿಯೂ ಅವರು ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವೇ ಆತ್ಮವಾಗಿರುವ ಆಂಜನೇಯ ಅವರಿಗೆ ಸ್ಥಾನ ಕಲ್ಪಿಸ ಬೇಕಾದುದು ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳ ಹೊಣೆಗಾರಿಕೆಯಾಗಿದೆ ಎಂದು ನಿರಂಜನಮೂರ್ತಿ ಹೇಳಿದರು.ಆಂಜನೇಯ ಅವರಿಗೆ ಎಂ.ಎಲ್.ಸಿ. ಸ್ಥಾನದ ಅವಕಾಶ ನೀಡಬೇಕೆಂದು ಹಲವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ದುರ್ಗೇಶ್, ಪೂಜಾರ್ ಡಿಸಿಸಿ ಸದಸ್ಯರಾದ ಪ್ರಕಾಶ್, ಕಾಂಗ್ರೆಸ್ ಮುಖಂಡರುಗಳಾದ ರಹಮತ್ ಉಲ್ಲಾ, ಎಸ್. ಬಿ.ಹನುಮಂತಪ್ಪ, ದ್ಯಾಮಣ್ಣ, ಓಬಣ್ಣ, ಶಿವಣ್ಣ, ಕುಬೆಂದ್ರಪ್ಪ, ರುದ್ರೇಶ್, ಕೆ.ಅಂಜಿನಪ್ಪ ಪ್ರಶಾಂತ್, ಚಂದ್ರು, ಕೃಷ್ಣಮೂರ್ತಿ ವೀರಬಸಪ್ಪ ರೇವಣ್ಣ ಮುಂತಾದವರಿದ್ದರು.