ಚಿತ್ರದುರ್ಗ: ಅಸಮಾನತೆ, ಜಾತೀಯತೆ, ಅಸ್ಪೃಶ್ಯತೆ ನಿವಾರಣೆಗೆ ಬುದ್ಧನ ಪಂಚಶೀಲಗಳಲ್ಲಿ ಉತ್ತರಗಳನ್ನು ಕಂಡುಕೊಳ್ಳಬಹುದು ಎಂದು ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ನವಯಾನ ಬುದ್ಧ ಧಮ್ಮ ಸಂಘದವತಿಯಿಂದ ಪತ್ರಕರ್ತರ ಭವನದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ನವಯಾನ ಮುಂದಿನ ಹೆಜ್ಜೆಗಳ ನಿರ್ಧರಿಸುವ ಚಿಂತನ ಮಂಥನ ಕಾರ್ಯಕ್ರಮದಲ್ಲಿ ಬುದ್ಧ, ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಬುದ್ಧನ ಆಲೋಚನೆಗೆ ಡಾ.ಬಿ.ಆರ್.ಅಂಬೇಡ್ಕರ್ ಬೇರೆ ಮೆರುಗನ್ನು ಕೊಟ್ಟಿದ್ದಾರೆ. ಬುದ್ಧನ ನವಯಾನ ಬೇರೆ ನವಯಾನಕ್ಕಿಂತ ಭಿನ್ನವಾದುದು. ಕುಡಿತ, ಕಳ್ಳತನ, ಸುಳ್ಳು ಹೇಳುವುದು, ಹಿಂಸೆ, ಅಸಮಾನತೆ ವಿರುದ್ಧ ಬುದ್ಧ ಮಾತನಾಡಿದ್ದಾನೆ. ಅಸೃಶ್ಯತೆ ಆಚರಿಸುವುದು, ಜಾತಿ, ವರ್ಗ ಅಸಮಾನತೆ ವಿರೋಧಿಸುತ್ತಿದ್ದ ಬುದ್ಧ ಯಜ್ಞ ಯಾಗಾದಿಗಳ ಹೆಸರಿನಲ್ಲಿ ವೈದಿಕ ಧರ್ಮದವರು ಪ್ರಾಣಿ ಹಿಂಸೆ ಮಾಡುತ್ತಿದ್ದುದನ್ನು ಬಲವಾಗಿ ಖಂಡಿಸುತ್ತಿದ್ದರು. ಅಹಿಂಸಾತ್ಮಕವಾದ ಜಗತ್ತನ್ನು ಬುದ್ಧ ನೀಡಿದ್ದಾನೆ. ಮಾದಿಗ, ಹೊಲೆಯ ಜನಾಂಗದಲ್ಲಿ ಹುಟ್ಟಿರುವವರು ಬುದ್ಧನ ಸಂದೇಶದಂತೆ ಅಹಿಂಸಾತ್ಮಕವಾಗಿದ್ದಾರೆಂದು ಹೆಮ್ಮೆಪಟ್ಟುಕೊಂಡರು.
ಶ್ರೇಷ್ಟ ವಿಚಾರಗಳನ್ನು ನವಯಾನ ಬೌದ್ಧ ಧರ್ಮ ಕೊಟ್ಟಿದೆ. ದೇಶದಲ್ಲಿ ಬದಲಾವಣೆಯಾಗಬೇಕಾದರೆ ಬುದ್ಧ ಧಮ್ಮ ಆಚರಣೆಗೆ ಬರಬೇಕು. ಚಿಕ್ಕಮಗಳೂರಿನಲ್ಲಿ ದಲಿತ ಯುವಕ ದೇವಸ್ಥಾನ ಪ್ರವೇಶಿಸಿದ ಎನ್ನುವ ಕಾರಣಕ್ಕಾಗಿ ಥಳಿಸಲಾಗಿದೆ. ಅವಮಾನ, ತಿರಸ್ಕಾರ, ಜಾತಿಯತೆ, ಶೋಷಣೆ ಎಲ್ಲಿ ನಡೆಯುತ್ತದೋ ಅಂತಹ ಕಡೆ ಹೋಗಬೇಡಿ ಎಂದು ಅಂಬೇಡ್ಕರ್ ಹೇಳಿದ್ದಾರೆ. ನಮಗಿರುವ ನೋವುಗಳಿಗೆ ಬುದ್ಧನ ಪಂಚಶೀಲಗಳಲ್ಲಿ ಉತ್ತರಗಳನ್ನು ಕಂಡುಕೊಳ್ಳಬೇಕಿದೆ ಎಂದರು.ನಿವೃತ್ತ ತಹಸೀಲ್ದಾರ್ ಮಲ್ಲಿಕಾರ್ಜುನ್ ಮಾತನಾಡಿ, ನವಯಾನ ಬೌದ್ಧ ಧರ್ಮ ಆಚರಣೆಯಲ್ಲಿದೆಯೇ ವಿನಃ ಅನುಸರಣೆಯಲ್ಲಿಲ್ಲ. ಡಾ.ಬಿ.ಆರ್.ಅಂಬೇಡ್ಕರ್ ವಿಚಾರಧಾರೆ ಹಿನ್ನೆಲೆಯಲ್ಲಿ ನವಯಾನ ಬುದ್ಧ ಧಮ್ಮ ಸಾಮಾಜಿಕರಣಗೊಳ್ಳಬೇಕಿದೆ ಎಂದು ಹೇಳಿದರು.
ಲೇಖಕ ಎಚ್.ಆನಂದ್ ಕುಮಾರ್ ಮಾತನಾಡಿ, ಎಲ್ಲಾ ಜಾತಿ ಧರ್ಮದವರು ಸಮಾನವಾಗಿ ಬಾಳುವ ಹಕ್ಕನ್ನು ಸಂವಿಧಾನ ನೀಡಿದೆ. ಅಂಬೇಡ್ಕರ್ ದೃಷ್ಠಿಕೋನದಲ್ಲಿ ನವಯಾನ ಬೌದ್ಧಧರ್ಮ ಆಚರಿಸುವ ಮೂಲಕ ಸಮ ಸಮಾಜ ನಿರ್ಮಾಣ ಮಾಡಿ ವಿಚಾರ, ವಿಶಾಲತೆಗೆ ಒಳಗಾಗಿ ಸದೃಢತೆಯನ್ನು ಗಳಿಸಿಕೊಳ್ಳಬಹುದು ಎಂದು ತಿಳಿಸಿದರು.ಡಾ.ವಿ.ಬಸವರಾಜ್, ಡಿ.ದುರುಗೇಶಪ್ಪ, ಚಿಕ್ಕಣ್ಣ ವೇದಿಕೆಯಲ್ಲಿದ್ದರು. ಸರಿತಾ ಭೀಮರಾವ್, ರೋಹಿಣಿ ಶಿವಕುಮಾರ್, ಸರ್ವಮಂಗಳ, ಶಿವಕುಮಾರಿ, ದೀಕ್ಷಿತ ರಾಮಚಂದ್ರ, ಕೆ.ಕುಮಾರ್, ರಾಮು ಗೋಸಾಯಿ, ಹನುಮಂತಪ್ಪ ದುರ್ಗ, ಬಿ.ರಾಜಣ್ಣ, ರಾಮು ಚಿಂತನ ಮಂಥನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.