ಬಜೆಟ್‌ನಲ್ಲಿ ಎರಡ್ಮೂರು ಕಡೆ ಮಾತ್ರ ಕಾಣಿಸಿಕೊಂಡ ಬೀದರ್‌ ಜಿಲ್ಲೆ

KannadaprabhaNewsNetwork |  
Published : Feb 17, 2024, 01:20 AM IST
bidar MAP | Kannada Prabha

ಸಾರಾಂಶ

ತಲಾದಾಯ, ನಿರುದ್ಯೋಗ ಸಮಸ್ಯೆ ಇತ್ಯರ್ಥಕ್ಕಿಲ್ಲ ಜಿಲ್ಲೆಗೆ ಕೊಡುಗೆ. ಗುರುದ್ವಾರಾ, ಸಿಖ್ ಲಿಗಾರ್‌ ಜನರ ಆರ್ಥಿಕ ಸಬಲೀಕರಣಕ್ಕೆ ₹3 ಕೋಟಿ. ಐತಿಹಾಸಿಕ ಸುರಂಗ ಬಾವಿಗಳ ಕರೇಜ್‌ ಅಭಿವೃದ್ಧಿಗೆ ₹15 ಕೋಟಿ, ಹೊನ್ನಿಕೇರಿ ಅರಣ್ಯ ಪ್ರದೇಶ ಸಂರಕ್ಷಣೆಗೆ ₹15 ಕೋಟಿ ಘೋಷಣೆ ಮಾಡಿದ ಸಿದ್ದರಾಮಯ್ಯ ಬಜೆಟ್‌.

ಅಪ್ಪಾರಾವ್‌ ಸೌದಿ

ಕನ್ನಡಪ್ರಭ ವಾರ್ತೆ ಬೀದರ್‌

ತಲಾದಾಯ, ನಿರುದ್ಯೋಗ ಸಮಸ್ಯೆ ಇತ್ಯರ್ಥಕ್ಕಿಲ್ಲ ಜಿಲ್ಲೆಗೆ ಕೊಡುಗೆ ನೀಡಬಲ್ಲ ಬಜೆಟ್‌ ನಿರೀಕ್ಷಿಸಿತ್ತಾದರೂ ಕಳೆದ ಬಜೆಟ್‌ಗೆ ಹೋಲಿಸಿದರೆ ಈ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ ಪುಸ್ತಕದ ಎರಡ್ಮೂರು ಕಡೆ ಬೀದರ್‌ ಕಾಣಿಸಿಕೊಂಡಿದ್ದು, ಸಮಾಧಾನ ತರುವಂಥದ್ದೇ ಹೊರತು ತೃಪ್ತಿದಾಯಕವಲ್ಲ.

ಬೀದರ್‌ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳ ಸ್ಥಾಪನೆ ಮೂಲಕ ಜನರಿಗೆ ಉದ್ಯೋಗ, ಉದ್ಯಮ ಸ್ಥಾಪಿಸುವ ಅವಕಾಶ ಕಲ್ಪಿಸುವಂಥ ಯೋಜನೆಗಳ ಮೂಲಕ ತಲಾದಾಯ ಹೆಚ್ಚಳಕ್ಕೆ ಕ್ರಮ, ಕೃಷಿ, ಯುನಾನಿ ಕಾಲೇಜು, ಕಾನೂನು ಕಾಲೇಜು ಹಾಗೆಯೇ ಬಹು ದಿನಗಳ ಕನಸಾದ ಮಹಿಳಾ ಪೊಲೀಸ್‌ ತರಬೇತಿ ಕೇಂದ್ರ ಸ್ಥಾಪನೆ, ಬೀಗ ಜಡಿದುಕೊಂಡಿರುವ ಬಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆ ಪುನಶ್ಚೇತನಕ್ಕೆ ಒಂದಷ್ಟು ಬಜೆಟ್‌, ಸಮಾರು ಎರಡು ವರ್ಷಗಳಿಂದ ಸತತ ಪ್ರತಿಭಟನೆ ನಡೆಸುತ್ತಿರುವ ಕಾರಂಜಾ ಸಂತ್ರಸ್ತರಿಗೆ ಪರಿಹಾರ, ನೀರಾವರಿಗೆ ಪ್ರತ್ಯೇಕ ನಿಧಿ ಇದ್ಯಾವುದನ್ನೂ ಬಜೆಟ್‌ನಲ್ಲಿ ಗಣನೆಗೆ ತೆಗೆದುಕೊಂಡಿಲ್ಲ.

ಕಾರಂಜಾ ಸಂತ್ರಸ್ತರಿಗೆ ತಣ್ಣೀರು:

ನೀರಾವರಿ, ಜನರ ನೀರಿನ ದಾಹ ನೀಗಿಸಲು ಕಾರಂಜಾ ಜಲಾಶಯಕ್ಕೆ ಭೂಮಿ ನೀಡಿ ದಶಕಗಳಿಂದ ಸೂಕ್ತ ಪರಿಹಾರಕ್ಕಾಗಿ ಕಾಯುತ್ತಿರುವ ಕಾರಂಜಾ ಸಂತ್ರಸ್ತರಿಗೆ ವಿಶೇಷ ಪ್ರಕರಣ ಎಂದು ಗುರುತಿಸಿ ಅನುದಾನವನ್ನು ಬಜೆಟ್‌ನಲ್ಲಿ ಸಿದ್ದರಾಮಯ್ಯ ಘೋಷಿಸುತ್ತಾರೆಂಬ ಭರವಸೆ ಮೇಲೆ ಕಾಯಂ ತಣ್ಣೀರೆರೆಚಿದಂತಾಗಿದೆ.

ಮಹಾತ್ಮ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿ ಆಗಿದೆ. ಈಗಾಗಲೇ ನಡೆಯುತ್ತಿರುವ ನೂತನ ಅನುಭವ ಮಂಟಪ ನಿರ್ಮಾಣ ಕಾಮಗಾರಿ ಹೊರತುಪಡಿಸಿ ಬಸವಣ್ಣನ ಕರ್ಮಭೂಮಿ ಬಸವಕಲ್ಯಾಣದ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವ ಆಶಾಭಾವ ಕಮರಿ ಹೋದಂತಾಗಿದೆ. ಜಿಲ್ಲೆಯಲ್ಲಿ ಹರಿಯುವ ಗೋದಾವರಿಯ ಉಪನದಿ ಮಾಂಜ್ರಾ ನದಿ ನೀರು ಸದ್ಬಳಕೆ/ ಯೋಜನೆಗಳಿಗೆ ಅನುದಾನ ಈ ಬಾರಿಯೂ ಬಜೆಟ್‌ನಲ್ಲಿ ಕಾಣಿಸಿಲ್ಲ.

ಬೀದರ್‌ ಜಿಲ್ಲೆಯಲ್ಲಿ ತಲಾದಾಯ, ನಿರುದ್ಯೋಗ ಸಮಸ್ಯೆ ಇತ್ಯರ್ಥಕ್ಕೆ ಕೈಗಾರಿಕೋದ್ಯಮಗಳ ಸ್ಥಾಪನೆಗೆ ಯೋಜನೆಗಳು ಇಲ್ಲವಾಗಿವೆಯಾದರೂ ರಾಜ್ಯ ಸರ್ಕಾರದ ಗ್ಯಾರಂಟಿಗಳ ಭರಾಟೆಯಲ್ಲಿ ಬೀದರ್‌ ಈ ಬಾರಿಯೂ ಸಂಪೂರ್ಣವಾಗಿ ಕಳೆದುಹೋಗುತ್ತೆ ಎಂಬ ಆತಂಕವನ್ನು ಕೊಂಚ ಬದಿಗಿಟ್ಟಿದೆ. ಆದರೆ ಬಜೆಟ್‌ ಪುಸ್ತಕದಲ್ಲಿ ಎರಡ್ಮೂರು ಕಡೆಗಳಲ್ಲಿ ಮಾತ್ರ ಬೀದರ್‌ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ವಾಸಿಸುತ್ತಿರುವ ಸಿಖ್‌ ಲಿಗಾರ್‌ ಸಮುದಾಯದ ಜನರ ಆರ್ಥಿಕ ಸಬಲೀಕರಣಕ್ಕಾಗಿ 2 ಕೋಟಿ ರು. ಅನುದಾನದಲ್ಲಿ ಹೊಸ ಯೋಜನೆಗಳನ್ನು ರೂಪಿಸಲಾಗುವುದು. ಬೀದರ್‌ನಲ್ಲಿರುವ ಶ್ರೀ ನಾನಕ್‌ ಝೀರಾ ಸಾಹೇಬ್‌ ಗುರುದ್ವಾರದ ಅಭಿವೃದ್ಧಿಗಾಗಿ 1 ಕೋಟಿ ರು. ಅನುದಾನ ನೀಡಲಾಗುವುದು ಎಂದು ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ.

ಐತಿಹಾಸಿಕ ಸುರಂಗ ಬಾವಿಗಳ ಕರೇಜ್‌ ಅಭಿವೃದ್ಧಿಗೆ 15 ಕೋಟಿ ರು.ಗಳನ್ನು ಮೀಸಲಿಡಲಾಗಿರುವುದು ಪ್ರವಾಸೋದ್ಯಮ ಅಭಿವೃದ್ಧಿಯ ಆಶಾಕಿರಣ ಹೆಚ್ಚಿಸಿದೆ. ಆದರೆ ಈ ಹಿಂದೆ 2016ರಲ್ಲಿಯೂ 8 ಕೋಟಿ ರು.ಗಳನ್ನು ಮೀಸಲಿಡಲಾಗಿತ್ತು. ಅದಿನ್ನೂ ಖರ್ಚಾಗಿಲ್ಲ ಅಂದಿನ ಅಭಿವೃದ್ಧಿಯ ಚಿಂತನೆ ಇಂದಿಗೂ ಚಾಲನೆಯಾಗಿಲ್ಲ. ಹೀಗಾಗಿ ಈಗಲಾದರೂ ಹೆಚ್ಚಿನ ಅನುದಾನದಲ್ಲಿ ಕರೇಜ್‌ ಪುನರುಜ್ಜೀವನ ಆರಂಭದ ಲಕ್ಷಣಗಳು ಗೋಚರಿಸಲಿವೆ ಎಂಬ ಆಶಾಭಾವ ಜನರದ್ದು.

ಹೊನ್ನಿಕೇರಿ ಅರಣ್ಯ ಪ್ರದೇಶ ಸಂರಕ್ಷಣೆಗೆ 15 ಕೋಟಿ ರು. ಘೋಷಣೆ ಮಾಡಿದ್ದು ಜಿಲ್ಲೆಯಲ್ಲಿ ಹಸಿರೀಕರಣ ಹೆಚ್ಚಳಕ್ಕೆ ಜಿಲ್ಲೆಯವರೇಯಾದ ಅರಣ್ಯ ಸಚಿವ ಈಶ್ವರ ಖಂಡ್ರೆ ಕಾಳಜಿ ತೋರಿಸುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನು ಜಿಲ್ಲಾ ಸಂಕೀರ್ಣ ನಿರ್ಮಾಣದ ಮಾತು ಬಜೆಟ್‌ನಲ್ಲಿ ಬಂದಿದ್ದು ಸಹ ಜಿಲ್ಲೆಯ ಜನತೆಗೆ ಖುಷಿ ನೀಡಿದೆ.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ