ಸೋಮರಡ್ಡಿ ಅಳವಂಡಿ ಕೊಪ್ಪಳ
ಹೌದು, ಕೊಪ್ಪಳ ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಮಂಡನೆ ಮಾಡಲಿರುವ ಬಜೆಟ್ ನಲ್ಲಿ ಸಾಕಷ್ಟು ಬೇಡಿಕೆ ಸಂಸದ ರಾಜಶೇಖರ ಹಿಟ್ನಾಳ ಸಲ್ಲಿಕೆ ಮಾಡಿದ್ದು, ಅದರಲ್ಲಿ ಯಾವುದಾದರೂ ದಕ್ಕುವುದೇ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕೊಪ್ಪಳ ಜಿಲ್ಲೆಯಲ್ಲಿ ಪ್ರವಾಸೋದ್ಯಮದಲ್ಲಿ ವಿಪುಲ ಅವಕಾಶ ಇದ್ದು. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಮಂತ್ರಾಲಯದ ಅಧಿಕಾರಿಗಳು ಇತ್ತೀಚಿಗಷ್ಟೇ ಕೊಪ್ಪಳ ಅನ್ವೇಷಿಸಿ ಎನ್ನುವ ಕಾರ್ಯಕ್ರಮ ಮಾಡಿದಾಗ ಬೆರಗಾಗುವಂತಹ ಮಾಹಿತಿ ನೋಡಿದ್ದಾರೆ. ಅಷ್ಟೇ ಅಲ್ಲ ಉತ್ತರ ಕರ್ನಾಟಕದಲ್ಲಿಯೇ ಇಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚು ಅವಕಾಶ ಇದೆ ಎಂದು ಸಹ ಹೇಳಿದ್ದಾರೆ. ಹೀಗಾಗಿ, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಭಾರಿ ನಿರೀಕ್ಷೆ ಹುಟ್ಟು ಹಾಕುವಂತೆ ಮಾಡಿದೆ.ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಅಯೋಧ್ಯೆಯ ಮಾದರಿಯಲ್ಲಿಯೇ ಅಂಜನಾದ್ರಿಯ ಅಭಿವೃದ್ಧಿಯಾಗಬೇಕು, ರಾಮನ ಭಕ್ತ ಹನುಮಂತ ಜನಿಸಿದ ನಾಡು ಈಗಾಗಲೇ ದೇಶಾದ್ಯಂತ ಸುಪ್ರಸಿದ್ಧಿಯಾಗಿರುವ ಅಂಜನಾದ್ರಿಯಲ್ಲಿ ದೇಶ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೀಗಾಗಿ, ಅಂಜನಾದ್ರಿಯನ್ನು ಅಯೋಧ್ಯೆಯ ಮಾದರಿಯಲ್ಲಿಯೇ ಅಭಿವೃದ್ಧಿಪಡಿಸಬೇಕು ಎಂದು ₹1350 ಕೋಟಿ ಪ್ರಸ್ತಾವನೆ ಸಲ್ಲಿಸಿದ್ದಾರೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೊಪ್ಪಳ ಜಿಲ್ಲೆಗೆ ಆಗಮಿಸಿದಾಗಲೂ ಖುದ್ದು ಅವರ ಸಮ್ಮುಖದಲ್ಲಿಯೇ ಪ್ರಸ್ತಾವನೆ ಪ್ರಸ್ತಾಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು ಖಂಡಿತ ಪರಿಗಣಿಸುವ ಭರವಸೆ ನೀಡಿದ್ದರು. ಹೀಗಾಗಿ, ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಅದು ಘೋಷಣೆಯಾಗುವುದೇ ಎನ್ನುವುದು ಸದ್ಯದ ಕುತೂಹಲವಾಗಿದೆ.
ಇದಲ್ಲದೆ ಈಗಾಗಲೇ ಅಂಜನಾದ್ರಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳಿಗೆ ಕೇಂದ್ರ ಸರ್ಕಾರ ₹ 200 ಕೋಟಿ ನೀಡುವಂತೆ ಸಂಸದ ರಾಜಶೇಖರ ಹಿಟ್ನಾಳ ಪ್ರತ್ಯೇಕ ಮನವಿ ಮಾಡಿದ್ದಾರೆ. ಇದರ ಜತೆಗೆ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೂ ₹100 ಕೋಟಿ ನೀಡುವಂತೆಯೂ ಕೋರಿದ್ದಾರೆ.ಇದು ಕೇವಲ ಈಗಿನದಲ್ಲ, ಈ ಹಿಂದೆಯೂ ಈ ರೀತಿಯ ಮನವಿ ಸಲ್ಲಿಸಲಾಗಿದೆಯಾದರೂ ಅದಕ್ಕೆ ಮಾನ್ಯತೆ ಸಿಕ್ಕಿಲ್ಲ. ಈ ಬಾರಿಯಾದರೂ ಮಾನ್ಯತೆ ಸಿಕ್ಕೀತೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಇದರ ಹೊರತಾಗಿಯೂ ಕೊಪ್ಪಳ ಜಿಲ್ಲೆಯಲ್ಲಿ ಸಿರಿಧಾನ್ಯ ಮತ್ತು ತರಕಾರಿ, ಹಣ್ಣುಗಳನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಇದನ್ನು ಮೌಲ್ಯವರ್ದನೆ ಮಾಡಿ, ಮಾರುಕಟ್ಟೆಗೆ ರವಾನೆ ಮಾಡುವ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರ ಏನಾದರೂ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆ ಇದೆ.ಅಂಜನಾದ್ರಿ ಸೇರಿದಂತೆ ಕೊಪ್ಪಳ ಜಿಲ್ಲಾದ್ಯಂತ ಇರುವ ಪ್ರವಾಸಿ ತಾಣಗಳು, ಐತಿಹಾಸಿಕ ಸ್ಥಳಗಳು, ದೇವಸ್ಥಾನಗಳನ್ನೊಳಗೊಂಡು ರೈಲು ಮಾರ್ಗದ ಅಗತ್ಯವಿದೆ. ಅದರಲ್ಲೂ ಅಂಜನಾದ್ರಿಯಿಂದ ಅಯೋಧ್ಯೆಗೆ ನೇರವಾಗಿ ರೈಲು ಓಡಿಸುವಂತೆ ಬಹಳ ದಿನಗಳ ಕಾಲದ ಬೇಡಿಕೆಯೂ ಸಹ ಇದೆ. ಇದನ್ನು ಕಾರ್ಯಗತ ಮಾಡಬೇಕಾಗಿದೆ. ಇದರ ಜತೆಗೆ ಈಗಾಗಲೇ ಘೋಷಣೆಯಾಗಿರುವ ರೈಲ್ವೆ ಯೋಜನೆ ಪೂರ್ಣಗೊಳಿಸಿರುವುದು, ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರಿಗೆ ಹೊಸ ರೈಲು ಮಾರ್ಗ ನಿರ್ಮಾಣದ ಬೇಡಿಕೆ, ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಮೇಲ್ದರ್ಜೆಗೇರಿಸುವುದು ಸೇರಿದಂತೆ ಹಲವಾರು ಬೇಡಿಕೆ ಇವೆ. ಈ ಎಲ್ಲ ಬೇಡಿಕೆ ಈಡೇರಿಸುವ ದಿಸೆಯಲ್ಲಿ ಬಜೆಟ್ ನಲ್ಲಿ ಘೋಷಣೆಯಾಗುತ್ತಿದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಕೇಂದ್ರ ಸರ್ಕಾರ ಮಂಡನೆ ಮಾಡಲಿರುವ ಬಜೆಟ್ ನಲ್ಲಿ ವಿಶೇಷ ಆದ್ಯತೆ ನೀಡುವಂತೆ ಹಲವಾರು ಬೇಡಿಕೆ ಈ ಹಿಂದೆಯೇ ಮನವಿ ಮಾಡಲಾಗಿದೆ. ಅಂಜನಾದ್ರಿ, ಹುಲಿಗೆಮ್ಮ ದೇವಸ್ಥಾನ ಸೇರಿದಂತೆ ಹಲವಾರು ದೇವಸ್ಥಾನಗಳ ಅಭಿವೃದ್ಧಿಗೆ, ಬೈಪಾಸ್ ರಸ್ತೆ ನಿರ್ಮಾಣ, ಹೆದ್ದಾರಿ ನಿರ್ಮಾಣ ಸೇರಿದಂತೆ ಹಲವಾರು ಬೇಡಿಕೆ ಸಲ್ಲಿಕೆ ಮಾಡಲಾಗಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದ್ದಾರೆ.