ಬಿ. ಲಕ್ಷ್ಮಿಕಾಂತಸಾ
ತಾಲೂಕಿನ ಪಶ್ಚಿಮ ಭಾಗದುದ್ದಕ್ಕೂ ತುಂಗಭದ್ರಾ ನದಿ ಹರಿಯುತ್ತದೆ. ಆದರೆ, ಪಶ್ಚಿಮ ಭಾಗದ 17 ಕೆರೆಗಳ ಅಚ್ಚುಕಟ್ಟು ಪ್ರದೇಶಗಳ ಕೃಷಿ ಭೂಮಿಗಳು ನೀರಿಲ್ಲದೇ ಬಸವಳಿದಿವೆ. ಬಹುತೇಕ ಕೆರೆಯಂಗಳಗಳು ರೈತರ ನಿಟ್ಟುಸಿರಿನ ಕೇಂದ್ರಗಳಾಗಿವೆ. ಈ ಭಾಗದ ರೈತರ ಪರಿಸ್ಥಿತಿ ಹೇಗಾಗಿದೆ ಎಂದರೆ ಸಮುದ್ರದ ಜೊತೆ ನೆಂಟಸ್ತನ ಉಪ್ಪಿಗೆ ಬಡತನ ಎನ್ನುವಂತಾಗಿದೆ.
ಈ ಹಿಂದೆ ನಿಜಲಿಂಗಪ್ಪನವರ ಕಾಲದಲ್ಲಿ ಚನ್ನಬಸವನಗೌಡರು ಶಾಸಕರಾಗಿದ್ದಾಗ ಜಾರಿಗೊಳಿಸಲಾದ ತಾಲೂಕಿನ 14 ಏತ ನೀರಾವರಿ ಯೋಜನೆಗಳು ಎದುಸಿರು ಬಿಡುತ್ತಿವೆ. ಯೋಜನೆಗಳ ಮೋಟಾರ್, ನೀರೆತ್ತುವ ಯಂತ್ರಗಳು ಕಾಲನ ದಾಳಿಗೆ ಸಿಲುಕಿ ಶಿಥಿಲಾವಸ್ಥೆಯಲ್ಲಿವೆ. ಎಲ್ಲ ಏತ ನೀರಾವರಿ ಯೋಜನೆಗಳನ್ನು ನವೀಕರಿಸಿ ರೈತರಿಗೆ ನೆರವಾಗಬೇಕು ಎಂಬ ಒತ್ತಾಯ ಕೇಳಿ ಬರುತ್ತಿದೆ.ತಾಲೂಕಿನ ತಂಬ್ರಹಳ್ಳಿ ಗ್ರಾಮದ ಸುತ್ತಲಿನ ಗ್ರಾಮಗಳ ವಿದ್ಯಾರ್ಥಿಗಳು ಪದವಿ ಕಾಲೇಜು ಸ್ಥಾಪನೆಗೆ ಮತ್ತು ರೈತರು ತಂಬ್ರಹಳ್ಳಿ ಎರಡನೆಯ ಹಂತದ ಏತ ನೀರಾವರಿ ಯೋಜನೆ ಜಾರಿಗಾಗಿ ಆಗ್ರಹಿಸಿ ಜಿಲ್ಲಾ ಕೇಂದ್ರದ ವರೆಗೂ ಪಾದಯಾತ್ರೆ ನಡೆಸಿ ಪ್ರತಿಭಟನೆ ನಡೆಸಿದ್ದರೂ ಸರಕಾರ ಕಣ್ಣು ತೆರೆದಿಲ್ಲ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ್ ಮತ್ತು ಟಿ. ವೆಂಕೋಬಪ್ಪ ಆರೋಪಿಸುತ್ತಾರೆ.
ತಾಲೂಕಿನಲ್ಲಿ ಬೆಣಕಲ್ಲು, ದಸಮಾಪುರ ಮತ್ತು ಮಗಿಮಾವಿನಹಳ್ಳಿ ಬಳಿ ಕಾಯ್ದಿಟ್ಟ ಅರಣ್ಯವಿದ್ದರೂ ಅದು ಕಡಿದಿಟ್ಟ ಅರಣ್ಯವಾಗಿದೆ ಎಂಬ ವ್ಯಂಗ್ಯದ ಮಾತುಗಳಿಗೆ ಬರವಿಲ್ಲ. ಈ ಭಾಗದ ಕಾಯ್ದಿಟ್ಟ ಅರಣ್ಯದ ರಕ್ಷಣೆ ಮತ್ತು ಅಭಿವೃದ್ಧಿಗಾಗಿ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಕಚೇರಿ ಮರು ಆರಂಭಿಸಬೇಕು ಎಂಬ ಕೂಗುಗಳು ದಟ್ಟವಾಗಿವೆ. ಕಚೇರಿ ಆರಂಭಿಸಿದರೆ ತಾಲೂಕಿನ ತುಂಗಭದ್ರಾ ಹಿನ್ನೀರು ಸಹಿತ ಹಗರಿಬೊಮ್ಮನಹಳ್ಳಿ ಜಲಾಶಯ ಮತ್ತು ಅಂಕಸಮುದ್ರ ಪಕ್ಷಿಧಾಮಕ್ಕೆ ದೇಶ ವಿದೇಶಗಳಿಂದ ಲಗ್ಗೆ ಇಡುವ ಖಗ ಸಿರಿಗಳ ರಕ್ಷಣೆಗೂ ಬಲ ಬರುತ್ತದೆ ಎಂಬ ಅಂದಾಜಿದೆ.
ತಂಬ್ರಹಳ್ಳಿ ಎರಡನೆಯ ಹಂತದ ನೀರಾವರಿ ಯೋಜನೆ ಸೇರಿದಂತೆ ತಾಲೂಕಿನ 17 ಕೆರೆಗಳಿಗೆ ತುಂಗಭದ್ರಾ ನದಿಯಿಂದ ನೀರು ತರುವ ಕಾಮಗಾರಿಗೆ ಅನುದಾನ ಒದಗಿಸಬೇಕು. ಕ್ಷೇತ್ರದಲ್ಲಿ ಗುರುತಿಸಲಾಗಿರುವ ವಸತಿ ಹೀನರನ್ನು ಕೂಡಲೇ ಪರಿಗಣಿಸಿ ನಿವೇಶನ ಸಹಿತ ವಸತಿ ಕಲ್ಪಿಸಲು ಬಜೆಟ್ ನಲ್ಲಿ ಅನುದಾನ ಒದಗಿಸಬೇಕು ಎಂದು ಶಾಸಕರಾದ ನೇಮಿರಾಜ ನಾಯ್ಕ ಒತ್ತಾಯಿಸಿದ್ದಾರೆ.ನೀರಾವರಿ, ಶಿಕ್ಷಣ ಮತ್ತು ಇತರೇ ರಂಗಗಳ ಅಭಿವೃದ್ಧಿಗೆ ಪೂರಕ ಅನುದಾನ ಒದಗಿಸಿ ಅತೀ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿಯಿಂದ ತಾಲೂಕು ಮುಕ್ತವಾಗಬೇಕಿದೆ.