ರಾಜ್ಯದ ಸರ್ವರ ಪಾಲಿನ ಕಲ್ಯಾಣದ ಬಜೆಟ್: ಸಚಿವ ಶಿವರಾಜ್ ತಂಗಡಗಿ

KannadaprabhaNewsNetwork |  
Published : Mar 07, 2026, 01:00 AM IST
ದೆಎ | Kannada Prabha

ಸಾರಾಂಶ

ಕೃಷಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳು, ಆರೋಗ್ಯ, ಎಐ ಕೌಶಲ್ಯಾಭಿವೃದ್ಧಿ ಹಾಗೂ ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ.

ಕೊಪ್ಪಳ: ಬಜೆಟ್‌ನಲ್ಲಿ ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸರ್ವ ಜನರ ಕಲ್ಯಾಣಕ್ಕೆ ಒತ್ತು ನೀಡಿದ್ದು, ಇದು ಹಿಂದುಳಿದ, ದೀನ-ದಲಿತರ ಜನಪರವಾದ ಬಜೆಟ್ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.

ಆರ್ಥಿಕ ಶಿಸ್ತಿನಿಂದ ಕೂಡಿದ ಬಜೆಟ್ ಇದಾಗಿದ್ದು, ತಮ್ಮ ಸುದೀರ್ಘವಾದ 17ನೇ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಯೋಜನೆಗಳಿಗೆ ಅನುದಾನ ಒದಗಿಸುವ ಜತೆಗೆ ಇತರ ಕ್ಷೇತ್ರಗಳಿಗೂ ಸಮಾನ ಆದ್ಯತೆ ನೀಡಿದ್ದಾರೆ ಎಂದು ಶ್ಲಾಘಿಸಿದ್ದಾರೆ.

ಕೃಷಿ, ಶಿಕ್ಷಣ, ಕೌಶಲ್ಯಾಭಿವೃದ್ಧಿ, ನೀರಾವರಿ, ಗ್ರಾಮೀಣಾಭಿವೃದ್ಧಿ, ಕೈಗಾರಿಕೆ, ಮೂಲಸೌಕರ್ಯ, ಮಹಿಳಾ ಮತ್ತು ಮಕ್ಕಳು, ಆರೋಗ್ಯ, ಎಐ ಕೌಶಲ್ಯಾಭಿವೃದ್ಧಿ ಹಾಗೂ ಕೆರೆ ತುಂಬಿಸುವ ಯೋಜನೆಗೆ ಆದ್ಯತೆ ನೀಡಲಾಗಿದೆ. ಅನ್ನದಾತನಿಗಾಗಿ ₹100 ಕೋಟಿ ವೆಚ್ಚದಲ್ಲಿ ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ, ಸಸ್ಯ ಸಂಜೀವಿನಿ, ಅಥಣಿಯಲ್ಲಿ ಕೃಷಿ‌ ಕಾಲೇಜನ್ನು ಸ್ಥಾಪಿಸುವ ಬಗ್ಗೆ ಘೋಷಣೆ ಮಾಡಲಾಗಿದೆ. 16 ವರ್ಷಗಳ ಒಳಗಿನ ಮಕ್ಕಳಿಗೆ ಮೊಬೈಲ್ ಬಳಕೆ ನಿಷೇಧ, ಪ್ರತಿ ಜಿಲ್ಲೆಯಲ್ಲಿ ಸಹಕಾರ ಕೇಂದ್ರ ಸ್ಥಾಪನೆ, ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಸೇರಿದಂತೆ ಉತ್ತಮ ಬಜೆಟ್ ಮಂಡಿಸಿದ್ದಾರೆ ಎಂದು ತಂಗಡಗಿ ಹೇಳಿದ್ದಾರೆ.

ಇನ್ನು ಎಜುಕೇಷನ್ ಹಬ್ ಆಗಿರುವ 9 ಜಿಲ್ಲೆಗಳಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 150 ಸಂಖ್ಯಾ ಬಲದ 50 ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯ ಸ್ಥಾಪನೆ, ಮಡಿವಾಳ ಸಮಾಜದ ನಿರುದ್ಯೋಗ ಯುವಕ- ಯುವತಿಯರಿಗೆ ಸ್ವಯಂ ಉದ್ಯೋಗಕ್ಕಾಗಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸಲು ₹5 ಲಕ್ಷದ ವರೆಗೆ ಶೇ. 4 ಬಡ್ಡಿದರದಲ್ಲಿ ಸಾಲ ಸೌಲಭ್ಯ, ಸವಿತಾ ಸಮಾಜದವರು ಸಲೂನ್ ಶಾಪ್ ತೆರೆಯಲು ಶೇ. 4ರ ಬಡ್ಡಿದರಲ್ಲಿ ₹10 ಲಕ್ಷ ವರೆಗೆ ಸಾಲ ಮತ್ತು ಸಹಾಯಧನ ನೀಡುವ ಯೋಜನೆಗೆ ಸಚಿವರು ಸಿಎಂ ಕೃತಜ್ಞತೆ ಸಲ್ಲಿಸಿದ್ದಾರೆ.

ಮಡಿವಾಳ ಸಮುದಾಯದ ಅಭಿವೃದ್ಧಿಗೆ ವಾಷಿಂಗ್ ಮಷಿನ್, ಡ್ರೈ ಮತ್ತು ಐರನಿಂಗ್ ಮೆಷಿನ್ ಇತ್ಯಾದಿ ಸಾಮಗ್ರಿಗಳನ್ನು ಒಳಗೊಂಡಂತೆ ತಲಾ ₹75 ಲಕ್ಷ ಘಟಕ ವೆಚ್ಚದಲ್ಲಿ ಆಧುನಿಕ ಲಾಂಡ್ರಿಗಳನ್ನು ಸ್ಥಾಪಿಸುವ ಯೋಜನೆ ಉತ್ತಮವಾಗಿದೆ. ಅಲ್ಲದೆ, ಡಾ. ಜಿ.ಎಸ್. ಶಿವರುದ್ರಪ್ಪ ಅವರ ಶತಮಾನೋತ್ಸವದ ಅಂಗವಾಗಿ ಕಾರ್ಯಕ್ರಮ ಆಯೋಜನೆ, ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಿಕೆ, ಬೆಳವಡಿ ಮಲ್ಲಮ್ಮ ಮತ್ತು ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸುವ ಉದ್ದೇಶಕ್ಕೆ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಒಟ್ಟಾರೆ ಸಿಎಂ ಸಿದ್ದರಾಮಯ್ಯ ಅವರು ಸರ್ವರ ಪಾಲಿನ ಬಜೆಟ್ ಮಂಡಿಸಿದ್ದಾರೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

17ರಿಂದ ರೋಶನಿ ನಿಲಯದಲ್ಲಿ ಅಂ.ರಾ. ‘ಫೋರೆನ್ಸಿಕ್‌ ಫ್ಯೂಷನ್’
ಆಯುರ್ವೇದ ಸಂಶೋಧನೆಗಳು ವ್ಯಾಪಾರ ಅವಕಾಶಗಳಾಗಿ ರೂಪುಗೊಳ್ಳಲಿ: ಡಾ.ಲಕ್ಷ್ಮೀ ನಾರಾಯಣ ಶೆಣೈ