ಹಾವೇರಿ ಜಿಲ್ಲೆಯ ಹಲವು ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸ್ಪಂದನೆ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork | Published : Mar 7, 2025 11:46 PM

ಸಾರಾಂಶ

ರಾಣಿಬೆನ್ನೂರು ಸೇರಿದಂತೆ ಹಲವು ಕಡೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಮಾಡುವ ನಿರ್ದಾರ ಉದ್ಯೋಗ ಸೃಜನೆಯೊಂದಿಗೆ ಆರ್ಥಿಕ ಪ್ರಗತಿ ಸಾಧನೆ ಮಾಡಲು ಸಹಾಯವಾಗಲಿದೆ.

ಹಾವೇರಿ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಕಾರ್ಯಗಳಿಗೆ ₹34 ಕೋಟಿ, ಹಾವೇರಿ ಸೇರಿ ಕೆಲವು ಜಿಲ್ಲೆಗಳಲ್ಲಿ ಸಂಚಾರ ಮೇಲ್ವಿಚಾರಣೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಪತ್ತೆ ಹಚ್ಚಿ ನಿಯಂತ್ರಿಸಲು ಕೃತಕ ಬುದ್ಧಿಮತ್ತೆ ಆಧರಿತ ವಿದ್ಯುನ್ಮಾನ ಕ್ಯಾಮೆರಾಗಳ ಅಳವಡಿಕೆಗೆ ಬಜೆಟ್‌ನಲ್ಲಿ ₹50 ಕೋಟಿ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಹಲವು ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಬಜೆಟ್‌ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಬ್ಯಾಡಗಿ ಮೆಣಸಿನಕಾಯಿ ತಳಿಯ ಸಂರಕ್ಷಣೆ ಮತ್ತು ಎಲೆಮುರುಟು ರೋಗ, ತ್ರಿಪ್ಸ್‌ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂಶೋಧನೆ ಕೈಗೊಳ್ಳುವ ನಿರ್ಧಾರ ಬ್ಯಾಡಗಿ ತಳಿಯ ಅಭಿವೃದ್ಧಿಗೆ ನೆರವಾಗಲಿದೆ. ದೇಶಿ ತಳಿಗಳ ಬೀಜ ಬ್ಯಾಂಕ್‌ ಸ್ಥಾಪನೆ ನಿರ್ಧಾರದ 20 ಜಿಐ ಟ್ಯಾಗ್‌ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳು ನಶಿಸಿ ಹೋಗುವುದನ್ನು ತಪ್ಪಿಸಲು ಸಹಾಯವಾಗಲಿದೆ ಎಂದಿದ್ದಾರೆ.

ರಾಣಿಬೆನ್ನೂರು ಸೇರಿದಂತೆ ಹಲವು ಕಡೆ ಪಿಪಿಪಿ ಮಾದರಿಯಲ್ಲಿ ಜವಳಿ ಪಾರ್ಕ್‌ ನಿರ್ಮಾಣ ಮಾಡುವ ನಿರ್ದಾರ ಉದ್ಯೋಗ ಸೃಜನೆಯೊಂದಿಗೆ ಆರ್ಥಿಕ ಪ್ರಗತಿ ಸಾಧನೆ ಮಾಡಲು ಸಹಾಯವಾಗಲಿದೆ. ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಹಲವು ಬೇಡಿಕೆಗಳಿಗೆ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಆದ್ಯತೆ ನೀಡಿರುವುದು ಸಂತಸ ತಂದಿದೆ ಎಂದಿದ್ದಾರೆ.ಹೃದಯಾಘಾತದಿಂದ ಗ್ರಾಮಲೆಕ್ಕಾಧಿಕಾರಿ ಸಾವು

ಹಾವೇರಿ: ನಗರದ ಗಾಂಧಿಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತಾಲೂಕಿನ ಹಂದಿಗನೂರಿನ ಗ್ರಾಮಲೆಕ್ಕಾಧಿಕಾರಿ ಬಸವರಾಜ ನಂದಿ (೫೨) ಹೃದಯಾಘಾತದಿಂದ ನಿಧನರಾದರು.ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಗ್ರಾಮಲೆಕ್ಕಾಧಿಕಾರಿ ಬಸವರಾಜ ನಂದಿ ಅವರಿಗೆ ಹೃದಯಾಘಾತ ಸಂಭವಿಸಿದ್ದು, ತಕ್ಷಣ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆತರುವಷ್ಟರಲ್ಲಿ ನಿಧನ ಹೊಂದಿದ್ದರು.ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಟಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

Share this article