ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್ ಕೇವಲ ದಾಖಲೆಗಾಗಿ. ಈ ಬಜೆಟ್ ಮೇಲೆ ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಅವರು ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಲಿತರ ಪರವಾಗಿ ಭಾಷಣ ಮಾಡುವ ಸಿದ್ದರಾಮಯ್ಯ ಎಸ್ಸಿ, ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಇದನ್ನು ಸಂಬಂಧಿಸಿದ ಸಚಿವರು ಸಮರ್ಥಿಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಬೆಂಗಳೂರು ಅಭಿವೃದ್ಧಿಗೆ ಸಾಕಷ್ಟು ಹಣ ನೀಡಿದ್ದಾರೆ. ಅದಾದ ನಂತರ ಬೇರೆ ಯಾವ ಸರ್ಕಾರದಲ್ಲಿಯೂ ಬೆಂಗಳೂರು ಅಭಿವೃದ್ಧಿ ಆಗಿಲ್ಲ. ಬಿಜೆಪಿ ನಿಯೋಗ ಬೆಂಗಳೂರಿಗೆ ₹10 ಸಾವಿರ ಕೋಟಿ ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ. ಆದರೆ, ಸರ್ಕಾರಕ್ಕೆ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಆಗುತ್ತಿಲ್ಲ ಎಂದರು.
ಮಹದಾಯಿ ಕುರಿತು ಧ್ವನಿ ಎತ್ತುವೆ
ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆಯ ವಿಳಂಬದ ಕುರಿತು ಮುಂಬರುವ ಅಧಿವೇಶನದಲ್ಲಿ ಮತ್ತೊಮ್ಮೆ ಧ್ವನಿ ಎತ್ತುತ್ತೇನೆ. ಯೋಜನೆ ಅನುಷ್ಠಾನದ ಬಗ್ಗೆ ಬಿಜೆಪಿ ಸಾಕಷ್ಟು ಪ್ರಯತ್ನ ಮಾಡುತ್ತಿದೆ. ಆದಷ್ಟು ಬೇಗ ಮಹದಾಯಿ ವಿವಾದ ಇತ್ಯರ್ಥವಾಗುವ ಭರವಸೆಯಿದೆ ಎಂದರು.
ಬೇಧ-ಭಾವವಿಲ್ಲ
ಬೆಳಗಾವಿ ಕರ್ನಾಟಕಕ್ಕೆ ಸೇರಿದೆ, ಇದರಲ್ಲಿ ಯಾವುದೇ ಪ್ರಶ್ನೆ ಇಲ್ಲ. ಮಹಾಜನ್ ಆಯೋಗದ ವರದಿ ಇದನ್ನು ಸ್ಪಷ್ಟವಾಗಿ ತಿಳಿಸಿದೆ. ಬೆಳಗಾವಿಯಲ್ಲಿ ಕನ್ನಡಿಗರು ಮತ್ತು ಮರಾಠಿಗರು ಎನ್ನುವ ಭೇದ- ಭಾವ ಇಲ್ಲ. ಎಲ್ಲರೂ ಒಗ್ಗಟ್ಟಾಗಿದ್ದಾರೆ. ಆದರೆ, ಕೆಲವು ವೈಯಕ್ತಿಕ ಘಟನೆಗಳನ್ನು ಭಾಷಾ ವಿವಾದಕ್ಕೆ ಎಳೆದು ತರಬಾರದು ಎಂದರು.
ಕಾಂಗ್ರೆಸ್‌ನಲ್ಲಿ ಒಳಜಗಳ ಜೋರು
ಮುಖ್ಯಮಂತ್ರಿ ಸ್ಥಾನ ಸಿಗದೇ ಹೋದಲ್ಲಿ ಡಿ.ಕೆ. ಶಿವಕುಮಾರ ಅವರ ಮುಂದಿನ ನಡೆ ಏನಾಗುತ್ತದೆ ಎಂಬುದು ಗೊತ್ತಿಲ್ಲ. ಹಿಂದೆ ಸಿಎಂ ಆಯ್ಕೆಯ ಸಂದರ್ಭದಲ್ಲಿ ಪವರ್ ಷೇರಿಂಗ್ ಮಾತುಕತೆ ಆಗಿತ್ತು. ಅದು ಹೈಕಮಾಂಡ್ ನೇತೃತ್ವದಲ್ಲಿಯೇ, ಡಿ.ಕೆ. ಶಿವಕುಮಾರ ಹಾಗೂ ಸಿದ್ದರಾಮಯ್ಯನವರ ಮಧ್ಯ ಒಪ್ಪಂದವಾಗಿದೆ. ಆದರೆ, ಅದನ್ನು ಬಹಿರಂಗವಾಗಿ ಯಾರು ಹೇಳುವ ಧೈರ್ಯ ಮಾಡುತ್ತಿಲ್ಲ. ಅದರಿಂದ ಕಾಂಗ್ರೆಸ್ ಪಕ್ಷದಲ್ಲಿ ಒಳಜಗಳ ಜೋರಾಗಿದ್ದು, ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ ಎಂದರು.
ಡಿಕೆಶಿ ಮುಂದಿನ ನಡೆ ಗೊತ್ತಿಲ್ಲ: ಶೆಟ್ಟರ್
ಹುಬ್ಬಳ್ಳಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಮುಂದಿನ ನಡೆ ಏನು ಎಂಬುದು ಯಾರಿಗೂ ಗೊತ್ತಿಲ್ಲ. ಕಾಂಗ್ರೆಸ್‌ನಲ್ಲಿ ಯಾರು ಏಕನಾಥ ಶಿಂಧೆ, ಯಾರು ಅಜಿತ್ ಪವಾರ್ ಆಗುತ್ತಾರೆಯೋ ಗೊತ್ತಿಲ್ಲ. ಅದನ್ನು ಡಿ.ಕೆ. ಶಿವಕುಮಾರ ಅವರೇ ಹೇಳಬೇಕು ಎಂದು ಸಂಸದ ಜಗದೀಶ ಶೆಟ್ಟರ್ ಮಾರ್ಮಿಕವಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ದಿನದಿಂದ ದಿನಕ್ಕೆ ಒಳಜಗಳ ಹೆಚ್ಚಳವಾಗುತ್ತಿದೆ. ಅದು ಯಾವಾಗ ಸ್ಫೋಟವಾಗುತ್ತದೆಯೋ ಗೊತ್ತಿಲ್ಲ.
ಹೈಕಮಾಂಡ್ ನೇತೃತ್ವದಲ್ಲಿ ಡಿ.ಕೆ. ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವೆ ಮುಖ್ಯಮಂತ್ರಿ ಸ್ಥಾನ ಹಂಚಿಕೆಯ ಒಪ್ಪಂದವಾಗಿದೆ. ಅದರ ಬಗ್ಗೆ ಬಹಿರಂಗವಾಗಿ ಹೇಳಲು ಯಾರಿಗೂ ಧೈರ್ಯವಿಲ್ಲ. ಸಿದ್ದರಾಮಯ್ಯ ಅಧಿಕಾರ ಬಿಟ್ಟು ಇಳಿಯಲು ಸಿದ್ಧರಿಲ್ಲ. ಆದರೆ. ಡಿ.ಕೆ. ಶಿವಕುಮಾರ್ ಒಪ್ಪಂದದಂತೆ ಅಧಿಕಾರ ಕೊಡಿ ಎನ್ನುತ್ತಿದ್ದಾರೆ. ಇದೇ ರೀತಿಯ ಹಲವು ಗೊಂದಲಗಳು ಕಾಂಗ್ರೆಸ್‌ನಲ್ಲಿ ಇಂದಿಗೂ ಮುಂದುವರೆದಿವೆ ಎಂದರು.
ಮೇಕೆದಾಟು ಹೋರಾಟದ ಪಾದಯಾತ್ರೆಯಲ್ಲಿ ಕನ್ನಡ ಚಲನಚಿತ್ರ ಕಲಾವಿದರು ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ನಟ್ಟು- ಬೋಲ್ಟು ಸರಿಮಾಡುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಬೆದರಿಕೆ ಹಾಕಿರುವುದು ಸರಿಯಲ್ಲ. ಹೋರಾಟಕ್ಕೆ ಬರಬೇಕೋ ಬೇಡವೋ ಎನ್ನುವುದು ಅವರಿಗೆ ಬಿಟ್ಟ ವಿಚಾರ. ಗೋಕಾಕ್ ವರದಿ ಜಾರಿ ಹೋರಾಟದ ಸಂದರ್ಭದಲ್ಲಿ ರಾಜಕುಮಾರ್ ಸ್ವಯಂಪ್ರೇರಿತರಾಗಿ ಧುಮುಕಿದ್ದರು. ಅವರೇ ಹೋರಾಟದ ನೇತೃತ್ವ ತೆಗೆದುಕೊಂಡಿದ್ದರು. ಚಲನಚಿತ್ರ ಕಲಾವಿದರು ಹೊರಾಟಕ್ಕೆ ಬರದೇ ಇದ್ದಲ್ಲಿ ಜನರೇ ತೀರ್ಮಾನಿಸುತ್ತಾರೆ. ಹೋರಾಟಕ್ಕೆ ಬನ್ನಿ ಅಂತ ಬೆದರಿಕೆ ಹಾಕುವುದು ಸರಿಯಲ್ಲ ಎಂದರು.