ರಾಣಿಬೆನ್ನೂರು ನಗರಸಭೆ ಬಜೆಟ್ ಸಲಹೆಗಳು ಹಂತ ಹಂತವಾಗಿ ಜಾರಿ: ಜಿಲ್ಲಾಧಿಕಾರಿ

KannadaprabhaNewsNetwork |  
Published : Jan 10, 2026, 02:30 AM IST
ರಾಣಿಬೆನ್ನೂರು ನಗರಸಭೆಯ  ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಜರುಗಿದ 2026-27 ನೇ ಸಾಲಿನ ನಗರಸಭೆ ಬಜೆಟ್‌ನ ಎರಡನೇ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಮಾತನಾಡಿದರು. ನಗರಸಭೆ ಆಯುಕ್ತ ಎಫ್.ಐ.ಇಂಗಳಗಿ ಇದ್ದರು. | Kannada Prabha

ಸಾರಾಂಶ

ಸ್ಥಳೀಯ ನಗರಸಭೆಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮತ್ತು ನಗರಸಭೆಯ ಆಡಳಿತಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ 2026-27 ನೇ ಸಾಲಿನ ನಗರಸಭೆ ಬಜೆಟ್‌ನ ಮೊದಲ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದವು.

ರಾಣಿಬೆನ್ನೂರು: ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಎಐ ಬಳಕೆ, ಆಯ್ದ ಉದ್ಯಾನಗಳನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಗ್ರಂಥಾಲಯ ತೆರೆಯುವುದು, ಶಿಥಿಲಗೊಂಡ ನಗರಸಭೆ ಮಳಿಗೆಗಳನ್ನು ಕೆಡವಿ ಹೊಸ ಮಳಿಗೆಗಳ ನಿರ್ಮಾಣ, ಶತಮಾನ ಕಂಡ ನಗರಸಭೆ ಪ್ರೌಢಶಾಲೆಗೆ ನೂತನ ಕಟ್ಟಡ ನಿರ್ಮಿಸುವುದು, ನಗರಸಭೆ ಕ್ರೀಡಾಂಗಣಕ್ಕೆ ಪ್ರಾಶಸ್ತ್ಯ, ನಗರದಲ್ಲಿ ಯೋಧ ಭವನ ಸ್ಥಾಪನೆ, ನಗರಸಭೆಯಿಂದ ಉಚಿತವಾಗಿ ಶವವಾಹನ ನೀಡುವ ವ್ಯವಸ್ಥೆ ಮುಂತಾದ ಸಲಹೆಗಳು ಸ್ಥಳೀಯ ನಗರಸಭೆಯ ಸರ್ ಎಂ.ವಿಶ್ವೇಶ್ವರಯ್ಯ ಸಭಾಭವನದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಮತ್ತು ನಗರಸಭೆಯ ಆಡಳಿತಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಅಧ್ಯಕ್ಷತೆಯಲ್ಲಿ ಜರುಗಿದ 2026-27 ನೇ ಸಾಲಿನ ನಗರಸಭೆ ಬಜೆಟ್‌ನ ಮೊದಲ ಸುತ್ತಿನ ಪೂರ್ವಭಾವಿ ಸಭೆಯಲ್ಲಿ ವ್ಯಕ್ತವಾದವು. ಸಭೆಯ ಪ್ರಾರಂಭದಲ್ಲಿಯೇ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಪ್ರತಿವರ್ಷ ಬಜೆಟ್ ಸಲಹೆಗಳನ್ನು ಅನುಷ್ಠಾನ ಮಾಡುವುದಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಆದರೆ ವಾಸ್ತವವಾಗಿ ಸೂಕ್ತವಾದ ಸಲಹೆಯನ್ನು ಅನುಷ್ಠಾನ ಮಾಡಲಾಗುತ್ತದೆ. ಅಭಿವೃದ್ಧಿ ನಿರಂತರ ಪ್ರಕ್ರಿಯೆಯಾಗಿದೆ. ಕೆಲವು ಸಲಹೆಗಳನ್ನು ನಂತರದ ವರ್ಷಗಳಲ್ಲಿ ಜಾರಿಗೆ ತರಲಾಗುತ್ತದೆ. ಸಾರ್ವಜನಿಕರು ಬಜೆಟ್ ಕುರಿತು ತಮ್ಮ ಸಲಹೆಗಳನ್ನು ಸಂಕ್ಷಿಪ್ತವಾಗಿ ತಿಳಿಸಿ ಹಾಗೂ ಅನಾವಶ್ಯಕ ವಿಷಯಗಳ ಚರ್ಚೆ ಬೇಡ ಎಂದು ತಿಳಿಸಿದರು. ಡಾ.ಗಿರೀಶ ಕೆಂಚಪ್ಪನವರ ಮಾತನಾಡಿ, ನಗರದಲ್ಲಿನ ರಸ್ತೆಗಳು, ವೃತ್ತಗಳನ್ನು ಅಭಿವೃದ್ಧಿ ಮಾಡಬೇಕು. ಸಂಚಾರ ದಟ್ಟಣೆ ಹೆಚ್ಚಾಗಿದ್ದು ಪೊಲೀಸ್ ಹಾಗೂ ನಗರಸಭೆ ಸಹಯೋಗದಲ್ಲಿ ಅದರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಎಐ ತಂತ್ರಜ್ಞಾನ ಬಳಕೆ ಮಾಡಿದಲ್ಲಿ ಅನುಕೂಲವಾಗುತ್ತದೆ ಎಂದು ಸಲಹೆ ನೀಡಿದರು. ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಡಾ.ಎಸ್.ಎಲ್. ಪವಾರ ಮಾತನಾಡಿ, ನಗರಸಭೆ ಪ್ರೌಢಶಾಲೆಯ ಕಟ್ಟಡ ನಿರ್ಮಾಣಗೊಂಡು 130 ವರ್ಷಗಳಾಗಿದ್ದು ಅದು ಸಂಪೂರ್ಣ ಶಿಥಿಲಗೊಂಡಿದೆ. ಅದನ್ನು ಹೊಸದಾಗಿ ನಿರ್ಮಿಸಲು ನಗರಸಭೆಯಿಂದ ಅನುದಾನ ಒದಗಿಸಬೇಕು. ಅಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗಾಗಿ ಕಂಪ್ಯೂಟರ್‌ಗಳನ್ನು ಪೂರೈಸಬೇಕು. ನಗರಸಭೆ ಕ್ರೀಡಾಂಗಣವನ್ನು ಸುಸ್ಸಜ್ಜಿತವಾಗಿ ನಿರ್ಮಾಣ ಮಾಡಿ ಯುವಜನಸೇವೆ ಮತ್ತು ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡುವುದು ಸೂಕ್ತ. ನಗರದ ರಾಜಕಾಲುವೆ ನೀರು ದೇವರಗುಡ್ಡ ರಸ್ತೆ ಸಮೀಪದಲ್ಲಿ ಮುಕ್ತಿಧಾಮ ಹಾಗೂ ವೀರಶೈವ ರುದ್ರಭೂಮಿ ಬಳಿ ಬಂದು ಸೇರುತ್ತಿದ್ದು ಅದಕ್ಕಾಗಿ ಅಲ್ಲೊಂದು ತಡೆಗೋಡೆ ನಿರ್ಮಿಸಬೇಕು ಎಂದು ಸಲಹೆ ನೀಡಿದರು. ನಗರಸಭೆ ಮಾಜಿ ಸದಸ್ಯ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ನಗರದಲ್ಲಿ ಯೋಧ ಭವನ ನಿರ್ಮಾಣ ಹಾಗೂ ಯೋಧರ ಉದ್ಯಾನ ಮಾಡಬೇಕು. ತಾಲೂಕಿನ ಗ್ರಾಮೀಣ ಭಾಗದಿಂದ ನಗರಕ್ಕೆ ಆಗಮಿಸುವ ರೈತರಿಆಗಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ವಿಶ್ರಾಂತಿ ಭವನ ನಿರ್ಮಾಣಕ್ಕೆ ಚಿಂತನೆ ಮಾಡಬೇಕು. ನಗರಸಭೆ ವತಿಯಿಂದಲೇ ಶವ ವಾಹನ ಖರೀದಿಗೆ ಬಜೆಟ್‌ನಲ್ಲಿ ಅನುದಾನ ನೀಡಬೇಕು ಹಾಗೂ ಇದನ್ನು ಬಡಜನರಿಗೆ ಉಚಿತವಾಗಿ ಒದಗಿಸಬೇಕು ಎಂದರು. ಫಕ್ಕೀರಗೌಡ ಪಾಟೀಲ ಮಾತನಾಡಿ, ನಗರದ ಆಯ್ದ ಉದ್ಯಾನಗಳನಲ್ಲಿ ಮಹಿಳೆಯರು ಮತ್ತು ಮಕ್ಕಳಿಗಾಗಿ ಗ್ರಂಥಾಲಯ ತೆರೆಯಬೇಕು ಎಂದರು. ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ತಮ್ಮ ಸಲಹೆಗಳನ್ನು ತಿಳಿಸಿದರು.

ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಯಣ್ಣನ ವೀರಭೂಮಿ ಶೀಘ್ರ ಲೋಕಾರ್ಪಣೆ
ಅಕ್ರಮ ಬಾಂಗ್ಲಾ ವಲಸಿಗರನ್ನು ಹೊರಗಟ್ಟಿ