ಈಶ್ವರ ಶೆಟ್ಟರ
ಕೆಲವು ವರ್ಷಗಳಿಂದ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಜಿಲ್ಲೆಗೆ ಘೋಷಣೆಯಾಗಿರುವ ಬಹುತೇಕ ಯೋಜನೆಗಳಿಗೆ ಅಗತ್ಯ ಅನುದಾನ ನೀಡದಿರುವ ಕಾರಣಕ್ಕೆ ಬಹುತೇಕ ಯೋಜನೆಗಳಿಗೆ ಅಪೂರ್ಣಗೊಂಡಿವೆ. ನಾಲ್ಕು ವರ್ಷಗಳ ಹಿಂದೆ ಜಿಲ್ಲೆಗೆ ಘೋಷಣೆಯಾದ ಗುಳೇದಗುಡ್ಡದ ಜವಳಿ ಪಾರ್ಕ್ ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಬಜೆಟ್ ನಲ್ಲಿ ನಿಗದಿಯಾದ ₹5000 ಕೋಟಿಯಲ್ಲಿ ನಿರೀಕ್ಷಿತ ಹಣ ನೀಡದ್ದರಿಂದ ಯೋಜನೆಯ ಪೂರ್ಣತೆಗೆ ಬಹುದೊಡ್ಡ ಹಿನ್ನೆಡೆಯಾಗಿದೆ.
ನಿರೀಕ್ಷಿತ ಅನುದಾನ ದೊರೆತಿದ್ದರೆ ಹಲವು ನೀರಾವರಿ ಯೋಜನೆಗಳು, ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಲ ತುಂಬುವ ಕಾರ್ಯ ಜೊತೆಗೆ ನೆನೆಗುದಿಗೆ ಬಿದ್ದ ಪುನರ್ವಸತಿ ಹಾಗೂ ಭೂಸ್ವಾಧೀನ ಪ್ರಕ್ರಿಯೆಗೆ ಅನುದಾನ ದೊರೆತು ಜಿಲ್ಲೆ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುತ್ತಿತ್ತು. ಆದರೆ ಸರ್ಕಾರ ಹಾಗೂ ಜನಪ್ರತಿನಿಧಿಗಳ ನಿರೀಕ್ಷಿತ ಪರಿಶ್ರಮ ಸಿಗದ ಕಾರಣ ಹತ್ತು ಹಲವು ಯೋಜನೆಗಳು ಕುಂಟುತ್ತಾ ಸಾಗಿದೆ.ಬಾಗಲಕೋಟೆಗೆ ಮಂಜೂರಾದ ಸರ್ಕಾರದ ವೈದ್ಯಕೀಯ ಕಾಲೇಜು, ವಿಜ್ಞಾನ ಕೇಂದ್ರದ ಸ್ಥಾಪನೆ, ಕೂಡಲಸಂಗಮ ಅಭಿವೃದ್ಧಿ, ಐಹೊಳೆ ಹಾಗೂ ಪಟ್ಟದಕಲ್ಲು, ಬಾದಾಮಿಯ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ಯೋಜನೆಗಳು ಬಜೆಟ್ ನಲ್ಲಿ ಪ್ರಸ್ತಾಪವಾಗಿ ನೆಪಮಾತ್ರದ ಅನುದಾನ ದೊರೆತು ವಿಳಂಬ ಕಾರ್ಯದಿಂದ ಹಿನ್ನೆಡೆಯಾಗಿದ್ದು, ಬಜೆಟ್ ಘೋಷಣೆಗಳೇ ಅನುಷ್ಠಾನಗೊಳ್ಳದಿದ್ದರೆ ಉಳಿದ ಭರವಸೆಗಳಿಗೆ ನ್ಯಾಯ ಹೇಗೆ ಸಿಗಲು ಸಾಧ್ಯ ಎಂಬುದು ಜನತೆಯ ಮಾತಾಗಿದೆ.
ಐತಿಹಾಸಿಕ ಪರಂಪರೆಯ ತಾಣಗಳಾಗಿರುವ ಐಹೊಳೆ, ಬಾದಾಮಿ, ಪಟ್ಟದಕಲ್ಲಿನ ಅಭಿವೃದ್ಧಿ ವಿಷಯ ಬಂದಾಗಲೆಲ್ಲ ದೊಡ್ಡದಾಗಿ ಮಾತನಾಡುವ ಜಿಲ್ಲೆಯ ಪ್ರತಿನಿಧಿಗಳು ಪ್ರವಾಸೋದ್ಯಮ ಕ್ಷೇತ್ರ ಬಲಪಡಿಸಲು ಬೇಕಾದ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಾಗದ ಅಸಹಾಯಕತೆಯಲ್ಲಿದ್ದಾರೆ. ಈ ಹಿಂದೆ ಬಾದಾಮಿ ಪ್ರತಿನಿದಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಳಜಿಯಿಂದ ಕೆಲವು ಕೆಲಸಗಳು ಆರಂಭವಾಗುವ ಲಕ್ಷಣಗಳು ಇವೆಯಾದರೂ ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ, ಬಸವಣ್ಣನವರ ಐಕ್ಯಸ್ಥಳ ಕೂಡಲಸಂಗಮದಲ್ಲಿನ ಘೋಷಿತ ಕಾಮಗಾರಿಗಳಿಗೆ ವೇಗ ಸಿಗುತ್ತಿಲ್ಲ, ಹೀಗಾದರೆ ಅಭಿವೃದ್ಧಿಯ ಕನಸು ನನಸಾಗುವುದಾದರೂ ಹೇಗೆ ಎಂಬುದು ಜಿಲ್ಲೆಯ ಜನತೆಯ ಅಂಬೋಣ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕಳೆದ ವರ್ಷದ ಬಜೆಟ್ ಘೋಷಣೆ ಜಿಲ್ಲೆಯ ಮಟ್ಟಿಗೆ ಅರ್ಥ ಕಳೆದುಕೊಂಡಿದೆ ಎನ್ನಬಹುದು. ಕೆರೂರ ಏತ ನೀರಾವರಿ ಅನುಷ್ಠಾನ ವಿಳಂಬಗತಿಯಲ್ಲಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಯೋಗಾಲಯ ಸ್ಥಾಪನೆಗೆ ನ್ಯಾಯ ಸಿಕ್ಕಿಲ್ಲ. ಮೆಳ್ಳಿಗೇರಿ, ಸಸಾಲಟ್ಟಿ, ಶಿವಲಿಂಗೇಶ್ವರ ಏತನೀರಾವರಿ ಯೋಜನೆ ಪೂರ್ಣಪ್ರಮಾಣದಲ್ಲಿ ಜಾರಿಯಾಗಿಲ್ಲ. ಶಿರೂರ ಏತ ನೀರಾವರಿ ಕಾಮಗಾರಿ ಇದೀಗ ಅಲ್ಪ ಪ್ರಮಾಣದಲ್ಲಿ ಕಾರ್ಯಾರಂಭವಾಗುವ ಲಕ್ಷಣ ಕಾಣುತ್ತಿದೆ. ಇಂತಹ ಮಹತ್ವಾಕಾಂಕ್ಷೆಯ ಯೋಜನೆಗಳೇ ಸಾಕಾರಗೊಳ್ಳುತ್ತಿಲ್ಲ. ಹೀಗಾಗಿ ಬಜೆಟ್ ಘೋಷಣೆಗಳು ಸಹ ಅರ್ಥ ಕಳೆದುಕೊಳ್ಳುವಂತಾಗಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಬೇಕಾದ ಸಾವಿರಾರು ಕೋಟಿ ಹಣವನ್ನು ಗುರುವಾರದ ಬಜೆಟ್ ನಲ್ಲಿ ಒದಗಿಸಿ ಸಂತ್ರಸ್ತರ ಭಾವನೆಗಳಿಗೆ ಸ್ಪಂದಿಸುತ್ತಾರೆ ಎಂಬ ಭರವಸೆಯಲ್ಲಿರುವ ಜಿಲ್ಲೆಯ ಜನತೆಗೆ ಬಜೆಟ್ ನಲ್ಲಿ ನ್ಯಾಯ ದೊರೆಯಬಹುದೇ ಎಂಬುದು ಸದ್ಯದ ಪ್ರಶ್ನೆ.
ವಿಶ್ವ ಪಾರಂಪರಿಕ ಪ್ರವಾಸಿ ತಾಣಗಳಾದ ಐಹೊಳೆ, ಪಟ್ಟದಕಲ್ಲು, ಬಾದಾಮಿಯಲ್ಲಿನ ಸ್ಮಾರಕಗಳಿಗೆ ಹೊಂದಿಕೊಂಡಿರುವ ಜನ ವಸತಿಯನ್ನು ಸ್ಥಳಾಂತರಿಸುವ ನಿಟ್ಟಿನಲ್ಲಿ ಬೇಕಾದ ಅನುದಾನವನ್ನು ಬಜೆಟ್ ನಲ್ಲಿ ಒದಗಿಸುವ ಭರವಸೆ ನೀಡಿದ್ದರೂ ಸಹ ಅಂದಿನ ಬಜೆಟ್ ನಲ್ಲಿ ಹಣ ಒದಗಿಸಲು ಸಾಧ್ಯವಾಗಿರಲಿಲ್ಲ. ಬಾಗಲಕೋಟೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಸೂಕ್ತ ಅನುದಾನ ಸಿಗದೆ, ಕಾಲೇಜು ಸ್ಥಾಪನೆಗೆ ಬೇಕಾದ ಸೌಲಭ್ಯಗಳಿಲ್ಲದ ಕಾರಣಕ್ಕೆ ಹಿನ್ನೆಡೆಯಾಗಿದ್ದು, ಪ್ರಸಕ್ತ ಬಜೆಟ್ ನಲ್ಲಿ ಅನುದಾನ ಸಿಗಬಹುದೇ ಎಂಬ ಜಿಜ್ಞಾಸೆ ಮೂಡಿದೆ. ಒಟ್ಟಾರೆ ಶುಕ್ರವಾರದ ಬಜೆಟ್ ಬಾಗಲಕೋಟೆ ಜಿಲ್ಲೆಯ ಅಭಿವೃದ್ಧಿಗೆ ಮುನ್ನಲೆಯಾಗಬೇಕೆಂಬುದು ಜನತೆಯ ನಿರೀಕ್ಷೆಯಾಗಿದೆ.
ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸಕ್ತಿ ಮೇರೆಗೆ ಹಿಂದಿನ ಬಜೆಟ್‌ನಲ್ಲಿ ಜವಳಿ ಪಾರ್ಕ ಸ್ಥಾಪನೆಗೆ ಘೋಷಣೆ ಮಾಡಲಾಗಿತ್ತು. ಆದರೆ ಇಡೀ ವರ್ಷದಲ್ಲಿ ಗುಳೇದಗುಡ್ಡ ಹೊರವಲಯದ ತೋಗುಣಿಸಿ ಬಳಿ ಸದ್ಯ 12 ಎಕರೆ ಜಮೀನನ್ನು ಗುರುತಿಸಲಾಗಿದೆ. ಇನ್ನೂ 3 ಎಕರೆ ಜಮೀನಿನ ಅವಶ್ಯಕತೆ ಇದೆ. ಜಮೀನಿನ ನಂತರ ಖಾಸಗಿ ಸಹ ಭಾಗಿತ್ವದಲ್ಲಿ ಸರ್ಕಾರದ ನೆರವಿನಲ್ಲಿ ಸ್ಥಾಪಿತವಾಗಬೇಕಾದ ಜವಳಿ ಪಾರ್ಕ ಇನ್ನೂ ಎಷ್ಟು ದಿನದ ನಂತರ ಆರಂಭಗೊಳ್ಳಲಿದೆಯೋ ಕಾಯ್ದು ನೋಡಬೇಕಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಮುಳುಗಡೆಯ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಸಹಸ್ರಾರು ಕುಟುಂಬಕ್ಕೆ ಶಾಶ್ವತ ಉದ್ಯೋಗ ಕಲ್ಪಿಸುವಂತಹ ಕೈಗಾರಿಕೆಗಳ ಅಗತ್ಯತೆ ಇದ್ದು ಸರ್ಕಾರ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ನೀಡುವ ಅವಶ್ಯಕತೆ ಇದೆ
ಬಾಗಲಕೋಟೆ ಸಂತ್ರಸ್ತರ ಶಾಶ್ವತ ಪುನರವಸತಿ ಅಗತ್ಯವಾಗಿದ್ದು, ನಗರದ 527 ಮೀಟರ್ ವ್ಯಾಪ್ತಿಯ ಒಳಗೆ ಭೂಸ್ವಾಧೀನ ಮಾಡಿಕೊಂಡು ಸಂತ್ರಸ್ತರಿಗೆ ಯೋಗ್ಯ ಪರಿಹಾರ ಧನ ನೀಡುವ 2013ರ ಭೂಸ್ವಾಧೀನ ಕಾಯ್ದೆ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಆಧ್ಯತೆ ನೀಡಲಿ.ಘನಶ್ಯಾಮ್ ಬಾಂಡಗೆ ಹೋರಾಟಗಾರರು, ಬಾಗಲಕೋಟೆ