ಸರ್ವರನ್ನೂ ಕರೆದೊಯ್ಯುವ ಬಜೆಟ್‌ : ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲ ಮೆಚ್ಚುಗೆ

KannadaprabhaNewsNetwork | Updated : Mar 10 2025, 10:57 AM IST

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2025-2026ರ ರಾಜ್ಯ ಬಜೆಟ್‌ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪರಿಪೂರ್ಣ ಬಜೆಟ್‌ ಆಗಿದೆ  ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

 ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ 2025-2026ರ ರಾಜ್ಯ ಬಜೆಟ್‌ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಪರಿಪೂರ್ಣ ಬಜೆಟ್‌ ಆಗಿದೆ. ಕ್ರೀಡೆ, ಸಮಾಜ ಕಲ್ಯಾಣ, ಕೃಷಿ, ನೀರಾವರಿ, ಗ್ಯಾರಂಟಿ ಸೇರಿ ಎಲ್ಲ ಕ್ಷೇತ್ರಗಳಿಗೂ ಒತ್ತು ನೀಡುವ ಮೂಲಕ ಮಹಿಳೆಯರು, ರೈತರು, ಯುವಕರು, ಅಲ್ಪಸಂಖ್ಯಾತರು ಸೇರಿ ಸರ್ವರನ್ನೂ ಸಮಾನವಾಗಿ ಕರೆದೊಯ್ಯುವ ಬಜೆಟ್‌ ಇದಾಗಿದೆ ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಹೇಳಿದ್ದಾರೆ.

ಬಜೆಟ್‌ ಕುರಿತು ಪತ್ರಿಕಾ ಹೇಳಿಕೆ ಮೂಲಕ ಪ್ರತಿಕ್ರಿಯೆ ನೀಡಿರುವ ಅವರು, ʻನನ್ನ ದೃಷ್ಟಿಯಲ್ಲಿ ಹೆಣ್ಣು ಅಬಲೆ ಅಲ್ಲ. ಅವಳೊಂದು ಮಹಾಶಕ್ತಿʼ ಎಂದು ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹೇಳಿದ್ದು ಅಕ್ಷರಶಃ ಸತ್ಯ. ಈ ವಾಕ್ಯದಂತೆ ಕರ್ನಾಟಕದ ನಮ್ಮ ಕಾಂಗ್ರೆಸ್‌ ಸರ್ಕಾರ ನಡೆಯುತ್ತಿದೆ. ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಸರ್ವರ ಹಿತವೇ ನಮ್ಮ ಕಾಂಗ್ರೆಸ್‌ ಸರ್ಕಾರದ ಸಂಕಲ್ಪವಾಗಿದೆ ಎಂದು ತಿಳಿಸಿದ್ದಾರೆ.

ಬಜೆಟ್ ₹4.09 ಲಕ್ಷ ಕೋಟಿ ಒಳಗೊಂಡಿದೆ. ಕಳೆದ ವರ್ಷದ ಬಜೆಟ್ ಅಂದಾಜುಗಳಿಗಿಂತ ಶೇ.10.3ರಷ್ಟು ಬೆಳವಣಿಗೆ ಕಂಡುಬಂದಿದೆ. ಕರ್ನಾಟಕ ರಾಜ್ಯದ ಜಿಡಿಪಿ ಶೇ.7.4 ರಷ್ಟು ಬೆಳೆದಿದೆ. ಕೃಷಿ ಕ್ಷೇತ್ರದಲ್ಲಿ ಕೂಡ ಶೇ.4ರಷ್ಟು ಬೆಳವಣಿಗೆ ಕಂಡಿದೆ. ಕರ್ನಾಟಕ ರಾಜ್ಯದ ಜಿಡಿಪಿ ರಾಷ್ಟ್ರೀಯ ಬೆಳವಣಿಗೆ ಶೇ.6.2ಕ್ಕಿಂತ ಹೆಚ್ಚಿದೆ. ಇದು ಕರ್ನಾಟಕ ರಾಜ್ಯದ ಅಭಿವೃದ್ಧಿಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಬದ್ಧತೆಯನ್ನು ದೃಢಪಡಿಸುತ್ತದೆ. ಈ ಬಜೆಟ್ ರಾಜ್ಯದ ಜನರನ್ನು ಸಬಲೀಕರಣಗೊಳಿಸಲಿದೆ ಎಂದು ಅವರು ಹೇಳಿದ್ದಾರೆ.

ನಮ್ಮ 5 ಗ್ಯಾರಂಟಿಗಳ ಈಡೇರಿಕೆಗಾಗಿ ₹51,034 ಕೋಟಿ ಮತ್ತು ರಾಜ್ಯದ ಸರ್ವತೋಮುಖ ಅಭಿವೃದ್ಧಿಯನ್ನು ಉತ್ತೇಜಿಸುವ ಸಲುವಾಗಿ ಬಂಡವಾಳ ಹೂಡಿಕೆಗಾಗಿ ₹83,200 ಕೋಟಿ ಮೀಸಲಿಡಲಾಗಿದೆ. ಈ ಮೂಲಕ ನುಡಿದಂತೆ ನಡೆದಿದ್ದೇವೆ. ನಮ್ಮ ಪಕ್ಷ ಚುನಾವಣಾ ಪೂರ್ವದ ಪ್ರಣಾಳಿಕೆಯಲ್ಲಿ ನೀಡಿದ್ದ ಬಹುತೇಕ ಭರವಸೆಗಳನ್ನು ಸಿಎಂ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಈಡೇರಿಸಿದ್ದಾರೆ ಎಂದು ಸುರ್ಜೇವಾಲಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this article