ರಾಜಧಾನಿಯಲ್ಲಿ ಮೂಲ ಸೌಕರ್ಯ ಅನುಷ್ಠಾನಕ್ಕೆ ಕಂಪನಿ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ

KannadaprabhaNewsNetwork | Updated : Mar 10 2025, 07:54 AM IST

ಸಾರಾಂಶ

ರಾಜಧಾನಿಯಲ್ಲಿ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ರಸ್ತೆ, ಫ್ಲೈಓವರ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಲು ಬಿಬಿಎಂಪಿ ಹಾಗೂ ಇತರೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ರಾಜಧಾನಿಯಲ್ಲಿ ಸರ್ಕಾರದ ಅನುದಾನದಲ್ಲಿ ಕೈಗೊಳ್ಳುವ ರಸ್ತೆ, ಫ್ಲೈಓವರ್ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಮುಕ್ತಾಯಗೊಳಿಸಲು ಬಿಬಿಎಂಪಿ ಹಾಗೂ ಇತರೆ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರತ್ಯೇಕ ಕಂಪನಿ ಸ್ಥಾಪಿಸಲು ರಾಜ್ಯ ಸರ್ಕಾರ ಸಿದ್ಧತೆ ಮಾಡುತ್ತಿದೆ.

ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬಿಡಿಎ ಸೇರಿದಂತೆ ವಿವಿಧ ಸಂಸ್ಥೆಗಳು ಕೈಗೊಳ್ಳುವ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ ಎಂಬ ಸಾಕಷ್ಟು ದೂರುಗಳಿವೆ. ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಜತೆಗೆ ಕಾಮಗಾರಿಯ ವೆಚ್ಚ ಸಹ ದುಬಾರಿ ಆಗುತ್ತಿದೆ. ಅಭಿವೃದ್ಧಿ ಕಾಮಗಾರಿ ಆರಂಭಿಸುವಲ್ಲಿ ವಿಳಂಬ, ಹಲವು ತಾಂತ್ರಿಕ ಸಮಸ್ಯೆಗಳು ಎದುರಿಸಬೇಕಾಗಲಿದೆ. ಈ ಹಿನ್ನೆಲೆಯಲ್ಲಿ ಸ್ಮಾರ್ಟ್‌ ಸಿಟಿ ಯೋಜನೆ ಅನುಷ್ಠಾನ ಮಾಡಲು ಸ್ಥಾಪಿಸಿರುವ ಸ್ಮಾರ್ಟ್‌ ಸಿಟಿ ಲಿಮಿಟೆಡ್‌ ಕಂಪನಿ ಮಾದರಿಯಲ್ಲಿ ಕಂಪನಿ ಸ್ಥಾಪನೆಗೆ ಮುಂದಾಗಿದೆ.

ಈ ವರ್ಷದ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನವನ್ನು ₹3 ರಿಂದ ₹7 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ. ಈ ಅನುದಾನದಿಂದ ಕಾಮಗಾರಿಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ವಿಶೇಷ ಉದ್ದೇಶಿತ ವಾಹಕ (Special Purpose Vehicle) ಸ್ಥಾಪಿಸಲು ನಿರ್ಧರಿಸಿದೆ ಎಂದು ಹೇಳುವ ಮೂಲಕ ಕಂಪನಿ ಸ್ಥಾಪಿಸುವುದಾಗಿ ಸೂಚ್ಯವಾಗಿ ಹೇಳಿದೆ.

ದೊಡ್ಡ ಯೋಜನೆಗಳಾಗಿ ಕಂಪನಿ:

ರಾಜ್ಯ ಸರ್ಕಾರ ₹40 ಸಾವಿರ ಕೋಟಿ ವೆಚ್ಚದಲ್ಲಿ ಟನಲ್‌ ರೋಡ್‌, ಸ್ಕೈ ಡಕ್‌, ವೈಟ್‌ ಟಾಪಿಂಗ್‌ ಕಾಮಗಾರಿ, ಬೆಂಗಳೂರು ಬಿಸಿನೆಸ್‌ ಕಾರಿಡಾರ್, ಬ್ರ್ಯಾಂಡ್‌ ಬೆಂಗಳೂರು ಯೋಜನೆಗಳು ಸೇರಿದಂತೆ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೊಳ್ಳುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ. ಪೂರಕವಾಗಿ ಕಂಪನಿ ಆರಂಭಿಸುವುದಕ್ಕೆ ನಿರ್ಧರಿಸಿದೆ.

ಬಾಹ್ಯ ಹೂಡಿಕೆ ಸೆಳೆಯಲು:

ಬೃಹತ್‌ ಯೋಜನೆಗಳನ್ನು ಅನುಷ್ಠಾನ ಮಾಡಲು ರಾಜ್ಯ ಸರ್ಕಾರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದಕ್ಕೆ ನಿರ್ಧರಿಸಿದೆ. ಕಂಪನಿ ಸ್ಥಾಪಿಸಿದರೆ ಸುಲಭವಾಗಿ ಸಾಲ ಪಡೆಯಲು ಸಾಧ್ಯ ಎಂಬುದು ಸಹ ಕಂಪನಿ ರಚನೆಗೆ ಮತ್ತೊಂದು ಕಾರಣವಾಗಿದೆ.

ಇಲಾಖೆಗಳ ಸಮನ್ವಯ  ಸಾಧಿಸಲು ಸಹಕಾರಿ

ಬೆಂಗಳೂರಿನಲ್ಲಿ ಬಿಬಿಎಂಪಿ, ಬೆಂಗಳೂರು ಜಲಮಂಡಳಿ, ಬೆಸ್ಕಾಂ, ಬಿಡಿಎ, ಸಂಚಾರ ಪೊಲೀಸ್‌ ವಿಭಾಗ, ಬೆಂಗಳೂರು ಜಿಲ್ಲಾಡಳಿತ ಸೇರಿದಂತೆ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕಾಮಗಾರಿ ನಡೆಸುವುದಕ್ಕೆ ಪ್ರತ್ಯೇಕ ಕಂಪನಿ ಸಹಕಾರಿಯಾಗಲಿದೆ ಎಂಬುದು ಅಧಿಕಾರಿಗಳು ಮತ್ತು ಸರ್ಕಾರದ ಅಭಿಪ್ರಾಯವಾಗಿದೆ. ಜತೆಗೆ, ಈ ಎಲ್ಲ ಇಲಾಖೆಗಳಿಗೆ ಸಂಬಂಧಿಸಿದ ಕಾಮಗಾರಿಗಳನ್ನು ಒಂದೇ ಸೂರಿನಡಿ ನಿರ್ವಹಿಸಬಹುದಾಗಿದೆ ಎನ್ನುವ ಲೆಕ್ಕಚಾರ ಸಹ ಇದೆ.

ಸ್ಮಾರ್ಟ್‌ ಸಿಟಿ ಕಚೇರಿ ಕಟ್ಟಡದಲ್ಲಿ ಕಂಪನಿ?

ಮಾರ್ಚ್‌ ಅಂತ್ಯಕ್ಕೆ ಸ್ಮಾರ್ಟ್‌ಸಿಟಿ ಯೋಜನೆ ಅಂತ್ಯವಾಗುತ್ತಿದೆ. ಸ್ಮಾರ್ಟ್‌ ಸಿಟಿ ಕಚೇರಿ ಕಟ್ಟಡ ಸಂಪೂರ್ಣವಾಗಿ ಸಿದ್ಧವಾಗಿದೆ. ಆ ಕಟ್ಟಡದ ಕಚೇರಿಯಲ್ಲಿಯೇ ಸರ್ಕಾರ ಉದ್ದೇಶಿತ ಕಂಪನಿ ಆರಂಭಿಸಲು ಚಿಂತನೆ ನಡೆಸಿದೆ. ಇನ್ನೂ ಬಿಬಿಎಂಪಿ ಹಾಗೂ ಸರ್ಕಾರದ ಯಾವ ಅಧಿಕಾರಿಗಳನ್ನು ನೇಮಕ ಮಾಡಬೇಕೆಂಬ ಬಗ್ಗೆ ಸಹ ಚರ್ಚೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Share this article