ಮಕ್ಕಳಿಗೆ ಮೋಬೈಲ್ ಗೀಳು ಬಿಟ್ಟು ಸೃಜನಶೀಲತೆ ವಾತಾವರಣ ಕಲ್ಪಿಸಿ

KannadaprabhaNewsNetwork | Published : Mar 10, 2025 1:30 AM

ಸಾರಾಂಶ

ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್‌ನಲ್ಲಿ ಅಲ್ಲ. ಮಗುವಿಗೆ ಊಟ ಮಾಡಿಸುವಾಗಲೂ ತಾಯಂದಿರು ಮೊಬೈಲ್‌ನಲ್ಲಿ ತೋರಿಸುವುದರಿಂದ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಮೊಬೈಲ್‌ಗೇ ಅಂಟಿಕೊಳ್ಳುತ್ತಾರೆ

ಕೊಪ್ಪಳ: ಮಕ್ಕಳಿಗೆ ಮೋಬೈಲ್ ಗೀಳು ಬಿಟ್ಟು ಅವರದೇ ಆದ ಸೃಜನಶೀಲ ವಾತಾವರಣ ಕಲ್ಪಿಸುವ ಅವಶ್ಯಕತೆ ಇದೆ ಎಂದು ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ರಾಜ್ಯ ಬಾಲ ಭವನ ಸೊಸೈಟಿ (ರಿ)ಬೆಂಗಳೂರು, ಜಿಲ್ಲಾಡಳಿತ, ಜಿಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೊಪ್ಪಳ ಸಹಯೋಗದೊಂದಿಗೆ ಜರುಗಿದ 2025ರ ಮಕ್ಕಳ ವಿವಿಧ ಸ್ಪರ್ಧೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಮಗುವಿನಲ್ಲಿ ತನ್ನದೇ ಆದ ಪ್ರತಿಭೆ ಅಡಗಿದ್ದು, ಬಾಲ ಭವನವು ಮಕ್ಕಳೊಳಗಿನ ಪ್ರತಿಭೆ ಹೊರ ತರುವ ವೇದಿಕೆಯಾಗಿದೆ ಎಂದರು.

ಮಕ್ಕಳ ಕ್ರಿಯಾಶೀಲತೆ, ಸೃಜನಶೀಲತೆ ಇರುವುದು ಮಣ್ಣಿನಲ್ಲೇ ಹೊರತು ಮೊಬೈಲ್‌ನಲ್ಲಿ ಅಲ್ಲ. ಮಗುವಿಗೆ ಊಟ ಮಾಡಿಸುವಾಗಲೂ ತಾಯಂದಿರು ಮೊಬೈಲ್‌ನಲ್ಲಿ ತೋರಿಸುವುದರಿಂದ ಬೆಳೆಯುತ್ತಾ ಬೆಳೆಯುತ್ತಾ ಮಕ್ಕಳು ಮೊಬೈಲ್‌ಗೇ ಅಂಟಿಕೊಳ್ಳುತ್ತಾರೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಮಕ್ಕಳು ಸ್ವತಂತ್ರವಾಗಿ ಆಲೋಚಿಸುವುದನ್ನು ಕಲಿತಾಗ ಅವರಲ್ಲಿ ಸೃಜನಶೀಲತೆ ಅರಳುತ್ತದೆ. ಸ್ವಂತಕ್ಕೆ ಆಟದ ಸಾಮಾನು ಸೃಷ್ಟಿಸಿಕೊಳ್ಳುವುದು ಮಕ್ಕಳ ಮೊದಲ ಸೃಜನಶೀಲ ಕ್ರಿಯೆಯಾಗಿದ್ದು, ಪೋಷಕರು ಮಕ್ಕಳಲ್ಲಿ ಸ್ವಂತಿಕೆ ಬೆಳೆಸಲು ಸಹಕರಿಸಬೇಕು. ಮನೆಯಿಂದ ಹೊರಗೆ ಮಕ್ಕಳು ಆಟಕ್ಕೆ ಇಳಿದಾಗ ಕೈಗೆ ಸಿಕ್ಕ ಸಾಮಗ್ರಿಗಳೇ ಅವರ ಆಟದ ವಸ್ತುಗಳಾಗುತ್ತವೆ. ಕೇವಲ ನಾಲ್ಕು ಗೋಡೆ ಮಧ್ಯೆ ಕುಳ್ಳಿರಿಸಿ ಪ್ಲಾಸ್ಟಿಕ್ ಆಟದ ವಸ್ತುಗಳು, ಮೊಬೈಲ್‌ಗಳ ಗೀಳು ಹಚ್ಚಿಕೊಳ್ಳುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಟಿತಗೊಳ್ಳುತ್ತದೆ. ನಾವೆಲ್ಲ ಆಡುವಾಗ ಪ್ಲಾಸ್ಟಿಕ್ ವಸ್ತುಗಳ ಹಾವಳಿಯಾಗಲಿ, ಮೊಬೈಲ್‌ಗಳ ಚಾಳಿಯಾಗಲಿ ಇರಲಿಲ್ಲ. ಹೀಗಾಗಿ ನಮಗೆ ಪುಸ್ತಕ, ಮಣ್ಣಿನ ವಸ್ತುಗಳು ಹೆಚ್ಚು ಹತ್ತಿರವಾದವು. ಕೆಳಗೆ ಕುಳಿತಿರುವ ಮಕ್ಕಳು ಮುಂದಿನ ದಿನಗಳಲ್ಲಿ ಇಲ್ಲಿ ಮೇಲೆ ಕೂರುವಂತಾಗಬೇಕು ಎಂದರೆ ಪುಸ್ತಕಗಳ ಒಡನಾಟ ಮುಖ್ಯ.ಇದರಿಂದ ಓದು, ಬರಹದ ಜತೆಗೆ ಗ್ರಹಿಕೆಯೂ ಉತ್ತಮಗೊಳ್ಳುತ್ತದೆ ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಮಾತನಾಡಿ, ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡುವ ಮನೋಭಾವ ಇಟ್ಟುಕೊಂಡಾಗ ಮಾತ್ರ ಮಕ್ಕಳ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ. ಎಲ್ಲ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಮಕ್ಕಳ ಶಿಕ್ಷಣದಡಿ ಕೇವಲ ಶಿಕ್ಷಕರ ಪಾತ್ರ ಅಷ್ಟೇ ಅಲ್ಲದೇ ಪೋಷಕರ ಜವಾಬ್ದಾರಿಯೂ ಹೆಚ್ಚಾಗಿದೆ. ಮಕ್ಕಳಿಗೆ ಮೋಬೈಲ್‌ನಿಂದ ಆದಷ್ಟು ದೂರವಿಡಬೇಕು. ಮಕ್ಕಳಲ್ಲಿ ಅನೇಕ ಪ್ರತಿಭೆಗಳು ಅಡಗಿರುತ್ತವೆ. ಕೆಲ ಮಕ್ಕಳು ಅವಕಾಶ ವಂಚಿತರಾಗಿ ತಮ್ಮ ಪ್ರತಿಭೆ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಬಾಲ ಭವನವು ಮಕ್ಕಳ ಪ್ರತಿಭೆಗಳ ಪ್ರದರ್ಶನಕ್ಕೆ ಅವಕಾಶ ನೀಡುತ್ತಿದೆ. ನಮ್ಮ ಸರ್ಕಾರವು ಬಜೆಟ್‌ನಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹ 5 ಸಾವಿರ ಕೋಟಿ ನೀಡಿದ್ದು, ಇದರಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕಾಗಿ ಮೀಸಲಿರಿಸುವ ಮೂಲಕ ಶಿಕ್ಷಣಕ್ಕೆ ಹೆಚ್ಚು ಪ್ರಮುಖ್ಯತೆ ನೀಡಿದೆ. ಮಕ್ಕಳನ್ನು ಭವಿಷ್ಯದ ನಾಗರಿಕರನ್ನಾಗಿ ಮಾಡುವ ಜಬಾವ್ದಾರಿ ಎಲ್ಲರ ಮೇಲಿದ್ದು, ಇದಕ್ಕಾಗಿ ಶ್ರಮಿಸೋಣ ಎಂದು ಹೇಳಿದರು.

ರಾಜ್ಯ ಬಾಲ ಭವನ ಸೊಸೈಟಿಯ ಅಧ್ಯಕ್ಷ ಬಿ.ಆರ್. ನಾಯ್ಡು ಮಾತನಾಡಿ, ಮಕ್ಕಳಿಗೆ ಓದುವ ಕುರಿತು ಒತ್ತಡ ನೀಡದೇ ಸೃಜನಾತ್ಮಕ ಕಲೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸದರೆ ಅವರಿಗೆ ಓದುವುದರಲ್ಲಿ ಆಸಕ್ತಿ ತಾನಾಗಿಯೇ ಬರುತ್ತದೆ. ಮಕ್ಕಳನ್ನು ವಿವಿಧ ಸ್ಪರ್ಧೆ, ಕಲೆ ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಬೇಕು. ಈ ಹಿನ್ನೆಲೆಯಲ್ಲಿ ಬಾಲ ಭವನವು ಯಾವಾಗಲೂ ಮಕ್ಕಳ ಕಾರ್ಯಕ್ರಮ ಹಮ್ಮಿಕೊಳ್ಳಲು ಸದಾ ಸಿದ್ಧವಿದೆ ಎಂದರು.

ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ, ಸಸಿಗಳನ್ನು ಯಾವ ರಿತಿ ಬೆಳೆಸುತ್ತೇವೆ, ಅದೇ ರೀತಿ ಮಕ್ಕಳನ್ನು ಅಂಗನವಾಡಿ ಹಂತದಲ್ಲಿಯೇ ಆಟ ಹಾಗೂ ಇತರೆ ಕಲಿಕೆ ನೀಡುವುದರ ಮೂಲಕ ಬೆಳೆಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸುಸಜ್ಜಿದ ವ್ಯವಸ್ಥೆ ಸರ್ಕಾರವು ಹಮ್ಮಿಕೊಳ್ಳುತ್ತಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಲು ಪ್ರೋತ್ಸಾಹಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿವೆ ಎಂದರು.

ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೇಯ, 2025-26ನೇ ಸಾಲಿನ ನಮ್ಮ ರಾಜ್ಯದ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ₹94 ಸಾವಿರ ಕೋಟಿಗಳನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಿದೆ. ಕಳೆದ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶವು ಕಡಿಮೆಯಾಗಿದ್ದು, ಇದಕ್ಕೆ ವಿಚಾರಿಸಿದಾಗ ಬಹಳಷ್ಟು ಮಕ್ಕಳು ಶಾಲೆಗೆ ಬಾರದೇ ಇರುವುದು ಕಂಡುಬಂದಿದೆ. ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಂತಹ ಕೆಲಸವಾಗುತ್ತಿದ್ದು, ಇದಕ್ಕೆ ಪೋಷಕರು ಸಹಕರಿಸುವುದರ ಜತೆಗೆ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಗಿರೀಶ್ ಕೋಟೆ, ನಟರಾಜ್, ಲಕ್ಷ್ಮೀ ನಾರಾಯಣ, ಗೂಳಪ್ಪ ಹಲಗೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಹಾಗೂ ಕೊಪ್ಪಳ ಜಿಲ್ಲಾ ಬಾಲಭವನ ಸಮಿತಿ ಕಾರ್ಯದರ್ಶಿ ಪರಶುರಾಮ ವೈ. ಶೆಟ್ಟೆಪ್ಪನವರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮತ್ತು ಸಂಗೀತ ಶಿಕ್ಷಕರು, ಶಾಲಾ ಮಕ್ಕಳಿದ್ದರು.

Share this article