ಕನ್ನಡಪ್ರಭ ವಾರ್ತೆ ಬೆಂಗಳೂರು
ಮಾದಕ ವ್ಯಸನಿಯಾಗಿದ್ದ ಯುವಕನೊಬ್ಬ ಬೆಡ್‌ಶೀಟ್‌ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯ ಡಿಎನ್‌ಬಿ ರೆಡ್ಡಿ ಲೇಔಟ್‌ನ ಪೇಯಿಂಗ್ ಗೆಸ್ಟ್‌ನಲ್ಲಿ ಮಾ.7ರಂದು ನಡೆದಿದೆ.ಯಶವಂತಪುರ ರೈಲ್ವೆ ಸಮನಾಂತರ ರಸ್ತೆ ನಿವಾಸಿ ಸುನೀಲ್ ಕುಮಾರ್ (28) ಮೃತ. ಸುನೀಲ್ ಪದವಿಧರನಾಗಿದ್ದು, ಮೆಕ್ಯಾನಿಕ್ ಕೆಲಸ ಮಾಡುತ್ತಿದ್ದ. ಕೆಲ ವರ್ಷಗಳಿಂದ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿದ್ದ. ಮನೆಯವರು ಈತನಿಗೆ ಹಣ ನೀಡುತ್ತಿರಲಿಲ್ಲ. ಹೀಗಾಗಿ ಆತ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿ ತನ್ನ ದುಶ್ಚಟಗಳಿಗೆ ವ್ಯಯಿಸುತ್ತಿದ್ದನು
ಕಾಪರ್ ವೈರ್ ಕಳವು ಮಾಡಿದ್ದ:ಕುಟುಂಬದಿಂದ ದೂರವಾಗಿದ್ದ ಸುನೀಲ್ ನಾಲ್ಕೈದು ತಿಂಗಳಿಂದ ಕೊತ್ತನೂರಿನ ಗ್ಯಾರೇಜ್‌ವೊಂದರಲ್ಲಿ ಮೆಕ್ಯಾನಿಕ್ ಕೆಲಸ ಮಾಡಿಕೊಂಡಿದ್ದು, ಡಿಎನ್‌ಬಿ ರೆಡ್ಡಿ ಲೇಔಟ್‌ನ ಪಿ.ಜಿ.ಯಲ್ಲಿ ಉಳಿದುಕೊಂಡಿದ್ದ. ಕೆಲ ದಿನಗಳ ಹಿಂದೆ ತಾನು ಕೆಲಸ ಮಾಡುವ ಗ್ಯಾರೇಜ್‌ನಲ್ಲೇ ಕಾಪರ್ ವೈಯರ್‌ಗಳನ್ನು ಕದ್ದು ಮಾರಾಟ ಮಾಡಿದ್ದ. ಹೀಗಾಗಿ ಗ್ಯಾರೇಜ್ ಮಾಲೀಕರು ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು ಎನ್ನಲಾಗಿದೆ.
ಕ್ಷಮಿಸುವಂತೆ ಮಾಲೀಕಗೆ ಸಂದೇಶಕೆಲಸ ಇಲ್ಲದೆ ಪಿ.ಜಿ.ಯಲ್ಲೇ ಇದ್ದ ಸುನೀಲ್, ಮಾ.7ರಂದು ಸಂಜೆ ಸುಮಾರು 7 ಗಂಟೆಗೆ ಗ್ಯಾರೇಜ್ ಮಾಲೀಕರಿಗೆ ದಯವಿಟ್ಟು ಕ್ಷಮಿಸಿ ಅಣ್ಣ. ನಾನು ಸಾಯುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಬಳಿಕ ಪಿಜಿ ಕೋಣೆಯಲ್ಲಿ ಬೆಡ್‌ಶೀಟ್‌ನಿಂದ ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ. ಕೆಲ ಸಮಯದ ಬಳಿಕ ಪಿಜಿ ನಿವಾಸಿಗಳು ಗಮನಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಸಿದ್ದು, ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತ ದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಸುನೀಲ್ ಈ ಹಿಂದೆ ಸಹ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯಿದೆ ಎಂದು ಮೃತನ ಕುಟುಂಬದವರು ಹೇಳಿದ್ದಾರೆ. ಕೊತ್ತನೂರು ಠಾಣೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಲಾಗಿದೆ.