ಕನ್ನಡಪ್ರಭ ವಾರ್ತೆ ಬೆಂಗಳೂರು
ಗ್ರಾಹಕರ ನಂಬಿಕೆಯನ್ನು ಉಳಿಸಿಕೊಂಡು ಸಹಕಾರ ತತ್ವ ಪಾಲಿಸಿ ಮುಂದುವರಿದರೆ ಬ್ಯಾಂಕುಗಳು ದೀರ್ಘಕಾಲ ನಡೆಯಲು ಸಾಧ್ಯವಿದ್ದು ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಇದಕ್ಕೆ ನಿದರ್ಶನ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.ಎನ್.ಆರ್.ಕಾಲೋನಿಯ ಎಪಿಎಸ್ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ ಶ್ರೀತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕಿನ ವಜ್ರ ಮಹೋತ್ಸವ ಉದ್ಘಾಟಿಸಿ ಮಾತನಾಡಿ, ರಾಜ್ಯದಲ್ಲಿ ಸಾಕಷ್ಟು ಬ್ಯಾಂಕುಗಳು ಮುಚ್ಚಿದ ಉದಾಹರಣೆಗಳು ನಮ್ಮ ಮುಂದಿವೆ. ನಂಬಿಕೆ ವಿಶ್ವಾಸ ಇಲ್ಲದಿದ್ದಾಗ ವ್ಯವಹಾರದಲ್ಲಿ ಉಂಟಾಗುವ ಗೊಂದಲದಿಂದ ಇಂತದ್ದಾಗುತ್ತದೆ. ಬ್ಯಾಂಕ್ ಅಧ್ಯಕ್ಷ, ನಿರ್ದೇಶಕರನ್ನು ನಂಬಿ ಜನ ವಹಿವಾಟಿಗೆ ಮುಂದಾಗುತ್ತಾರೆ. ಹೀಗಿರುವಾಗ ಅವರ ಜವಾಬ್ದಾರಿ ಹೆಚ್ಚಿರುತ್ತದೆ. ತ್ಯಾಗರಾಜ ಬ್ಯಾಂಕ್ ಸುದೀರ್ಘ ಹಾದಿ ಕ್ರಮಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಜನತೆಗೆ ನೆರವಾಗಲಿ ಎಂದರು.
ವಿಧಾನಪರಿಷತ್ತಿನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಮಾತನಾಡಿ, ಸಹಕಾರಿ ಬ್ಯಾಂಕ್‌ಗಳು ಸರ್ಕಾರಗಳ ಮೇಲಿನ ಹೊರೆಯನ್ನು ಕಡಿಮೆ ಮಾಡಿದ್ದು, ದೇಶ ಕಟ್ಟುತ್ತಿವೆ. ಇಂದು ರಾಜ್ಯದಲ್ಲಿ ಸುಮಾರು 360 ಸಹಕಾರಿ ಬ್ಯಾಂಕ್‌ಗಳು ₹53,000 ಕೋಟಿ ವಹಿವಾಟು ನಡೆಸುತ್ತಿದ್ದು, ಸುಮಾರು 50 ಲಕ್ಷ ಜನರು ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಈ ಕ್ಷೇತ್ರದ ಚಟುವಟಿಕೆಯಲ್ಲಿ ತೊಡಗಿದ್ದಾರೆ ಎಂದರು.ಶ್ರೀತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ 14 ಶಾಖೆ ಹೊಂದಿದ್ದು, ಇನ್ನು 3 ಶಾಖೆಗಳ ನಿರ್ಮಾಣ ಪ್ರಗತಿಯಲ್ಲಿವೆ. ಸಾವಿರಾರು ಜನರು ಠೇವಣಿದಾರರು ಇದ್ದಾರೆ. ಸಾವಿರಾರು ಜನರಿಗೆ ಸಾಲವನ್ನೂ ನೀಡಿದೆ ಎಂದರು.
ಬ್ಯಾಂಕ್ ಅಧ್ಯಕ್ಷ ಡಾ.ಎಂ.ಆರ್.ವೆಂಕಟೇಶ್ ಮಾತನಾಡಿ, ನಮ್ಮ ಬ್ಯಾಂಕ್ ಬೆಂಗಳೂರಿನ ಹಳೆಯ ಸಹಕಾರಿ ಸಂಸ್ಥೆಯಾಗಿದ್ದು, ವಾರ್ಷಿಕ ₹6000 ಕೋಟಿ ವಹಿವಾಟು ನಡೆಸುತ್ತದೆ. ಆರ್‌ಬಿಐ ಹಾಗೂ ಸರ್ಕಾರ ನಗರ, ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಸಮಸ್ಯೆಗೆ ಸಿಲುಕಿದರೆ, ಅವುಗಳ ಪುನಶ್ಚೇತನಕ್ಕೆ ಸರ್ಕಾರಗಳು, ಆರ್‌ಬಿಐ ಒಂದು ಪ್ರತ್ಯೇಕ ಸಂಸ್ಥೆ ಸ್ಥಾಪಿಸಬೇಕು. ಅದರ ಮೂಲಕ ಆರ್ಥಿಕ ಮತ್ತು ತಾಂತ್ರಿಕವಾಗಿ ನೆರವಾಗಬೇಕು ಎಂದು ಒತ್ತಾಯಿಸಿದರು.ಸಹಕಾರ ಸಂಘಗಳ ಅಂಬ್ರೆಲಾ ಆರ್ಗನೈಸೇಷನ್ ಸಿಇಒ ಡಿ.ಕೃಷ್ಣ, ಅರ್ಬನ್ ಬ್ಯಾಂಕ್ ಫೆಡರೇಷನ್ ಸಿಇಒ ಪುಂಡಲೀಕ ಕೇರೂರ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಎಂಡಿ ನವೀನ್, ಶ್ರೀ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ನಿರ್ದೇಶಕ ಮಂಡಳಿ ಸದಸ್ಯರು ಇದ್ದರು.
ತಿಪಟೂರಿನ ‘ಮರ್ಚೆಂಟ್ಸ್ ಕೋ-ಅಪರೇಟಿವ್ ಬ್ಯಾಂಕ್’ ‘ಅತ್ಯುತ್ತಮ ಬ್ಯಾಂಕ್’ ಎಂದು ₹25 ಸಾವಿರ ನಗದು ಒಳಗೊಂಡ ಶ್ರೀ ತ್ಯಾಗರಾಜ ರಾಜ್ಯ ಪ್ರಶಸ್ತಿ ನೀಡಲಾಯಿತು. ತಲಾ ₹10ಸಾವಿರ ಒಳಗೊಂಡ ‘ಅತ್ಯುತ್ತಮ ಸಿಬ್ಬಂದಿ’ ಪ್ರಶಸ್ತಿಯನ್ನು ಉಮೇಶ್ ಮತ್ತು ವಾಣಿ ಬಿರಾದಾರ್ ಪಡೆದರು. ‘ಶ್ರೀ ತ್ಯಾಗರಾಜ ವಜ್ರಶ್ರೀʼ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಯಿತು. ಪಟ್ಟಣ ಸಹಕಾರ ಬ್ಯಾಂಕ್‌ಗಳನ್ನು ಸದೃಢವಾಗಿಸಲು ಒಟ್ಟು 7 ನಿರ್ಣಯ ಅಂಗೀಕರಿಸಲಾಯಿತು.