ಬೆಂಗಳೂರು : ‘ಡ್ರಗ್ಸ್ ಮುಕ್ತ ಕರ್ನಾಟಕ’ದ ನಿರ್ಮಾಣಕ್ಕಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಂಗವಾಗಿ ‘ನಮ್ಮ ಪೊಲೀಸ್, ನಮ್ಮ ಹೆಮ್ಮೆ’ ಘೋಷವಾಕ್ಯದಡಿ ರಾಜ್ಯಾದ್ಯಂತ ಪೊಲೀಸರಿಂದ ಭಾನುವಾರ ಮ್ಯಾರಥಾನ್ ಓಟ ನಡೆಯಿತು. ಈ ವೇಳೆ, ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಶಾಂತಿ ಕುರಿತು ಜಾಗೃತಿ ಮೂಡಿಸಲಾಯಿತು.
ಬೆಂಗಳೂರಿನಲ್ಲಿ ಜಿಲ್ಲಾ ಪೊಲೀಸ್ ಹಾಗೂ ಪ್ರೆಸಿಡೆನ್ಸಿ ಯೂನಿವರ್ಸಿಟಿ ಸಹಯೋಗದಲ್ಲಿ ನಡೆದ 5 ಕಿ.ಮೀ. ಮ್ಯಾರಥಾನ್ ನಲ್ಲಿ ಧೃವ ಸರ್ಜಾ, ಶ್ರೀಮುರುಳಿ, ಅಕುಲ್ ಬಾಲಾಜಿ ಭಾಗಿಯಾಗಿದ್ದರು. ಕಾರವಾರದ ರವೀಂದ್ರನಾಥ ಟಾಗೋರ ಕಡಲ ತೀರದಲ್ಲಿ ಮಾದಕ ದ್ರವ್ಯ ಹಾಗೂ ಸೈಬರ್ ಅಪರಾಧ ಮುಕ್ತ ಕರ್ನಾಟಕ-2025ರ ಮ್ಯಾರಥಾನ್ 5ಕೆ ಓಟ ಆಯೋಜಿಸಲಾಗಿತ್ತು. ಮ್ಯಾರಥಾನ್‌ನಲ್ಲಿ ಭಾಗವಹಿಸಿದ್ದ ನೌಕಾಪಡೆಯ ಉದ್ಯೋಗಿ ಗುರುಚರಣ ಎಂಬುವರು ನಗರದ ಮಾಲಾದೇವಿ ಮೈದಾನದ ಬಳಿ ಬರುತ್ತಿದ್ದಂತೆ ನಿತ್ರಾಣಗೊಂಡು ಕುಸಿದು ಬಿದ್ದರು. ಅಲ್ಲೇ ಇದ್ದ ಶಾಸಕ ಸತೀಶ ಸೈಲ್ ತಕ್ಷಣ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದರು.
ಅಂಕೋಲಾದ ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ಅನಾಥವಾಗಿದ್ದ ಶ್ವಾನ ಕೂಡ ಮ್ಯಾರಥಾನ್ ನಲ್ಲಿ 5 ಕಿ.ಮೀ. ಸಂಚರಿಸಿ ಪದಕ ಪಡೆದಿದೆ. ಶಿರೂರು ಗುಡ್ಡ ಕುಸಿತದ ಬಳಿಕ ಮಾಲೀಕರನ್ನು ಕಳೆದುಕೊಂಡು ಈ ಶ್ವಾನ ಅನಾಥವಾಗಿ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿತ್ತು. ಮಳೆ, ಚಳಿಯಲ್ಲಿ ಶ್ವಾನ ಇರುವುದನ್ನು ಗಮಸಿದ್ದ ಎಸ್ಪಿ ಎಂ.ನಾರಾಯಣ ಅದನ್ನು ಮನೆಗೆ ತಂದು ಸಾಕಿ ಪೊಲೀಸ್ ಶ್ವಾನಗಳಿಗೆ ತರಬೇತಿ ನೀಡುವಂತೆ ಇದಕ್ಕೂ ತರಬೇತಿ ಕೊಡಿಸಿದ್ದಾರೆ.
ವಿಜಯಪುರದ ಗೋಳಗುಮ್ಮಟದ ಆವರಣದಲ್ಲಿ ನಡೆದ ಮ್ಯಾರಥಾನ್‌ಗೆ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ। ಎಂ.ಬಿ.ಪಾಟೀಲ ಚಾಲನೆ ನೀಡಿದರು. ಮಂಡ್ಯ ಸರ್ ಎಂವಿ ಕ್ರೀಡಾಂಗಣದಲ್ಲಿ ನಡೆದ ಮ್ಯಾರಥಾನ್ ಓಟದಲ್ಲಿ ಬಿಗ್ ಬಾಸ್ ಖ್ಯಾತಿಯ ರಜತ್, ನಟ ರಿಷಿ ಪಾಲ್ಗೊಂಡಿದ್ದರು. ಬೆಳಗಾವಿ, ಹಾವೇರಿ ಸೇರಿ ರಾಜ್ಯದ ಎಲ್ಲಾ ಕೇಂದ್ರಗಳಲ್ಲಿಯೂ ಮ್ಯಾರಥಾನ್ ಆಯೋಜಿಸಲಾಗಿತ್ತು.