ಸಿಬಿಎಸ್‌ಸಿ ಪಠ್ಯಕ್ರಮ ಶಾಲೆ ಆರಂಭದಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಅನುಕೂಲ: ಡಿ.ಕೆ.ಶಿವಕುಮಾರ್

KannadaprabhaNewsNetwork | Updated : Mar 10 2025, 12:20 PM IST

ಸಾರಾಂಶ

ಎಷ್ಟೇ ಹಣ ಮಾಡಿದರೂ ಬೆಲೆ ಇಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಪಡೆದಿರುವ ಅಂಕ ಹಾಗೂ ಪದವಿ ಪತ್ರಕ್ಕೆ ಮಾತ್ರ ಬೆಲೆ ಸಿಗುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗುತ್ತಿದೆ. ಜೊತೆಗೆ ಪ್ರತಿಯೊಬ್ಬ ರೈತನು ತನ್ನ ಮಗನಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಆಶಯ ಹೊಂದಿರುತ್ತಾನೆ.

  ಮಳವಳ್ಳಿ : ಗ್ರಾಮೀಣ ಭಾಗದಲ್ಲಿ ಸಿಬಿಎಸ್‌ಸಿ ಪಠ್ಯ ಕ್ರಮದ ಶಾಲೆ ಆರಂಭಿಸಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಳ್ಳಿಗಾಡಿನ ವಿದ್ಯಾರ್ಥಿಗಳು ಪೈಪೋಟಿ ನೀಡಲು ಸಹಕಾರಿಯಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಪಟ್ಟಣದ ಹೊರವಲಯದ ಶೆಟ್ಟಹಳ್ಳಿ ರಸ್ತೆಯಲ್ಲಿ ಬಿ.ಎಂ.ಎಜುಕೇಷನಲ್ ಟ್ರಸ್ಟ್‌ನಿಂದ ನೂತನವಾಗಿ ನಿರ್ಮಿಸಿರುವ ಬಿ.ಎಂ ಪಬ್ಲಿಕ್ ಸ್ಕೂಲ್ ಉದ್ಘಾಟಿಸಿ ಮಾತನಾಡಿ, ಎಷ್ಟೇ ಹಣ ಮಾಡಿದರೂ ಬೆಲೆ ಇಲ್ಲ. ಸ್ಪರ್ಧಾತ್ಮಕ ಯುಗದಲ್ಲಿ ಪಡೆದಿರುವ ಅಂಕ ಹಾಗೂ ಪದವಿ ಪತ್ರಕ್ಕೆ ಮಾತ್ರ ಬೆಲೆ ಸಿಗುವುದರಿಂದ ಶಿಕ್ಷಣ ಸಂಸ್ಥೆಗಳಲ್ಲಿ ಗುಣಾತ್ಮಕ ಶಿಕ್ಷಣ ನೀಡಲು ಮುಂದಾಗುತ್ತಿದೆ. ಜೊತೆಗೆ ಪ್ರತಿಯೊಬ್ಬ ರೈತನು ತನ್ನ ಮಗನಿಗೆ ಉನ್ನತ ವಿದ್ಯಾಭ್ಯಾಸ ಕೊಡಿಸಬೇಕೆಂಬ ಆಶಯ ಹೊಂದಿರುತ್ತಾನೆ ಎಂದರು.

ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳನ್ನು ದೂಡವಿಟ್ಟು ಗುಣಾತ್ಮಕ ಶಿಕ್ಷಣ ಕೊಡಲು ಮುಂದಾಗಬೇಕು. ಯಾರು ಕದಿಯಲಾಗದ, ದಾಯಾದಿ ದಕ್ಕಿಸದ, ಅಗ್ನಿಯಲ್ಲಿ ಸುಡದ, ನೀರಿನಲ್ಲಿ ನೆನೆಯದಿರುವುದು ಒಂದೇ ಅದು ವಿದ್ಯೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡಿಸಲು ಮಂಡ್ಯ ಜಿಲ್ಲೆಯಲ್ಲಿ ಜಿ.ಮಾದೇಗೌಡ, ಕೆ.ಎನ್‌.ನಾಗೇಗೌಡ, ಶಂಕರೇಗೌಡ ಸೇರಿದಂತೆ ಹಲವು ಮಂದಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಹಲವರ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಸ್ಮರಿಸಿದರು.

ಗ್ರಾಮೀಣ ಪ್ರದೇಶದಲ್ಲಿ ಪಂಚಾಯ್ತಿ ಮಟ್ಟದಲ್ಲಿ ಮಾದರಿ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ. ಸಿಎಸ್‌ಆರ್ ಅನುದಾನದಲ್ಲಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗನ್ನು ಅಭಿವೃದ್ದಿ ಪಡಿಸಲಾಗುವುದು. ಮಳವಳ್ಳಿ ತಾಲೂಕಿನಲ್ಲಿ ಡಿಜಿಟಲ್ ಶಿಕ್ಷಣಕ್ಕೆ ಚಾಲನೆ ನೀಡಲಾಗಿದೆ. ಕನಕಪುರ ಕ್ಷೇತ್ರದಲ್ಲಿಯೂ ಸಂಪೂರ್ಣವಾಗಿ ಸರ್ಕಾರಿ ಶಾಲೆಗಳನ್ನು ಡಿಜಿಟಲ್‌ಕರಣ ಮಾಡಲಾಗುವುದು ಎಂದರು.

ಗ್ರಾಮೀಣ ಭಾಗದಲ್ಲಿ ಖಾಸಗಿ ಶಾಲೆ ಆರಂಭಿಸುವುದು ಸುಲಭದ ಮಾತಲ್ಲ. ತಂದೆತಾಯಿ, ಗುರು ಹಿರಿಯರು, ಹಾಗೂ ಗ್ರಾಮದ ಋಣ ತೀರಿಸುವ ಉದ್ದೇಶದಿಂದ ಎಂ.ರಾಮಕೃಷ್ಣ ಅವರು ಸಿಬಿಎಸ್‌ಸಿ ಪಠ್ಯಕ್ರಮದ ಶಾಲೆ ಆರಂಭಿಸಿರುವುದು ಉತ್ತಮ ಬೆಳೆವಣಿಗೆಯಾಗಿದೆ ಎಂದರು.

ಶಾಸಕ ಹಾಗೂ ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಸೇವಾ ಮನೋಭಾವದಿಂದ ದುಡಿದ ತನ್ನ ಸ್ವಂತ ಹಣವನ್ನು ಶಿಕ್ಷಣ ಸಂಸ್ಥೆಗೆ ವಿನಿಯೋಗಿಸಿ ಗ್ರಾಮೀಣ ಮಕ್ಕಳಿಗೆ ಶಿಕ್ಷಣ ನೀಡಲು ಮುಂದಾಗಿರುವ ರಾಮಕೃಷ್ಣ ಅವರ ಕಾರ್ಯ ಮೆಚ್ಚಬೇಕಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ನಿವೃತ್ತ ಜೀವನದ ನಂತರ ಸಾರ್ವಜನಿಕ ಸೇವೆಗೆ ಹೋಗುವವರ ಸಂಖ್ಯೆ ವಿರಳ. ರಾಮಕೃಷ್ಣ ಅವರು ಲಾಭ ನಷ್ಟವನ್ನು ನೋಡದೇ ಹುಟ್ಟಿದ ತಾಲೂಕಿನಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸೇವೆ ಮಾಡುವ ಹಂಬಲವನ್ನು ಹೊಂದಿದ್ದಾರೆ, ಶಿಕ್ಷಣ ಕೊಡುವುದು ಎಲ್ಲಾ ಸೇವೆಗಿಂತ ದೊಡ್ಡದು ಎಂದರು.

ಬಿ.ಎಂ.ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ ಎಂ.ರಾಮಕೃಷ್ಣ ಮಾತನಾಡಿ, ಗ್ರಾಮೀಣ ಮಕ್ಕಳಿಗೆ ಸಿಬಿಎಸ್‌ಸಿ ಪಠ್ಯಕ್ರಮದ ಶಿಕ್ಷಣ ನೀಡುವ ಉದ್ದೇಶದೊಂದಿಗೆ ತಂದೆ ತಾಯಿ ಹೆಸರಿನಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹಕಾರದೊಂದಿಗೆ ಶಿಕ್ಷಣ ಸಂಸ್ಥೆ ಆರಂಭಿಸಲಾಗುತ್ತಿದೆ. ಪ್ರತಿಯೊಬ್ಬರ ಸಹಕಾರ ಆಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಅರ್ಶೀವಚನ ನೀಡಿದರು. ರಾಮಕೃಷ್ಣ ವಿರೇಶಾನಂದ ಆಶ್ರಮದ ಸ್ವಾಮಿ ವಿರೇಶಾನಂದ ಸರಸ್ವತಿ ಅವರ ದಿವ್ಯ ಸಾನಿಧ್ಯ ವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಬಿ.ಎಂ.ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಶಂಕರಲಿಂಗೇಗೌಡ, ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಲಾಗುವುದು ಎಂದರು.

ಈ ವೇಳೆ ಶಾಂತಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಪುಟ್ಟಸ್ವಾಮಿ, ಹತಹುಲ್ಲಾ, ಮರಿಸ್ವಾಮಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಾದ ಎಂ.ಎನ್.ಜಯರಾಜು, ಟಿ.ಎಂ.ಪ್ರಕಾಶ್, ಎಂ.ಎನ್.ಮಹೇಶ್ ಕುಮಾರ್, ಸಾಲುಮರದ ನಾಗರಾಜು, ಪೊಲೀಸ್ ಸಿಬ್ಬಂದಿಗಳಾದ ಪ್ರಭುಸ್ವಾಮಿ, ಯೋಧ ರಾಜೇಶ್, ಬೋರೇಗೌಡ ಅವರನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಭಿನಂದಿಸಿದರು.

ಇದಕ್ಕೂ ಮುನ್ನು ಶಾಲಾ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಾಯಿಬಾಬಾ ಮಂದಿರವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಲೋಕಾರ್ಪಣೆಗೊಳಿಸಿದರು. ನಂತರ ಪೂಜೆ ಸಲ್ಲಿಸಿ ಈ ವರ್ಷ ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದರು. ಸಮಾರಂಭದಲ್ಲಿ ಶಾಸಕರಾದ ಎಚ್.ಡಿ.ರಂಗನಾಥ್, ಕೆ.ಎಂ.ಉದಯ್, ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಹಾಗೂ ಮುಖಂಡರು ಇದ್ದರು.

Share this article