ದುಶ್ಚಟಗಳಿಲ್ಲದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ

KannadaprabhaNewsNetwork | Published : Aug 5, 2024 12:35 AM

ಸಾರಾಂಶ

ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದ ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಸಲಹೆ ನೀಡಿದರು.

ಕನ್ನಡಪ್ರಭ ‍‍‍‍‍‍ವಾರ್ತೆ ಚಾಮರಾಜನಗರ

ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದ ಬಾಲ ನ್ಯಾಯ ಮಂಡಳಿ ಸದಸ್ಯ ಟಿ.ಜೆ.ಸುರೇಶ್ ಸಲಹೆ ನೀಡಿದರು.

ಚಾಮರಾಜನಗರ ಜೆಎಸ್‌ಎಸ್ ಮಹಿಳಾ ಪದವಿ ಪೂರ್ವಕ ಕಾಲೇಜಿನಲ್ಲಿ ವ್ಯಸನ ಮುಕ್ತ ದಿನಾಚರಣೆ ಪ್ರಯುಕ್ತ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ಮತ್ತು ಯುವ ಸಮುದಾಯದ ಮೇಲೆ ಭಾರತ ದೊಡ್ಡ ಆಶಯವನ್ನು ಹೊಂದಿದೆ. ಆದ್ದರಿಂದ ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು. ಮಾದಕ ವಸ್ತುಗಳ ಗಾಂಜಾ ಅಫೀಮು, ಡ್ರಗ್ಸ್, ಬಿಡಿ ಸಿಗರೇಟ್, ಗುಟ್ಕಾ, ಇವುಗಳು ಮಾನವ ಜೀವನವನ್ನು ನಾಶ ಮಾಡುತ್ತವೆ.ಇಂತಹ ದುಶ್ಚಟಗಳಿಗೆ ಒಳಗಾಗದೆ ಜೋಪಾನವಾಗಿರಬೇಕು ಎಂದು ಹೇಳಿದರು.

ನಮ್ಮ ದೇಶದಲ್ಲಿ ಸುಮಾರು ಶೇ 30 ರಷ್ಟು ಗಂಡು ಮತ್ತು ಶೇ 5 ರಷ್ಟು ಹೆಣ್ಣುಮಕ್ಕಳು ಮದ್ಯಪಾನಕ್ಕೆ ಬಲಿಯಾಗಿದ್ದಾರೆ. ಮನುಷ್ಯನಿಗೆ ಶಾರೀರಿಕ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ. ಕಾರ್ಮಿಕ ವರ್ಗದವರು ಹೆಚ್ಚು ಮದ್ಯಪಾನ ಚಟಕ್ಕೆ ಒಳಗಾಗುತ್ತಾರೆ. ಸಮಾಜದಲ್ಲಿ ದುಶ್ಚಟಗಳು ಅನೇಕ ವಿಧದಲ್ಲಿ ಯುವಕ ಯುವತಿಯರು ಬಲಿಯಾಗುತ್ತಿದ್ದಾರೆ. ಆದ್ದರಿಂದ ಅವುಗಳಿಂದ ನಾವು ನಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬರೂ ತಮ್ಮ ನೆರೆಹೊರೆಯಲ್ಲಿ ಕಂಡು ಬರುವ ಮಾದಕ ವ್ಯಸನಿಗಳಿಗೆ ತಿಳಿ ಹೇಳುವ ಕೆಲಸ ಮಾಡಬೇಕು ಎಂದು ತಿಳಿಸಿದರು.

ಮಾದಕ ವ್ಯಸನಕ್ಕೆ ಒಳಗಾದ ವ್ಯಕ್ತಿ ದೈಹಿಕ, ಮಾನಸಿಕ, ಆರ್ಥಿಕವಾಗಿ ದಿವಾಳಿಯಾಗುವ ಜತೆಗೆ ಕುಟುಂಬದಿಂದ ದೂರವಾಗುತ್ತಾನೆ. ಆದ್ದರಿಂದ, ಯುವಕ, ಯುವತಿಯರು ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋದರೆ ಸಮಾಜದಲ್ಲಿ ಉತ್ತಮ ಪ್ರಜೆಯಾಗಬಹುದು ಎಂದು ತಿಳಿಸಿದರು.

ಪೋಷಕರು ಮಕ್ಕಳನ್ನು ಉತ್ತಮ ವಿದ್ಯಾವಂತರಾಗಲಿ ಎಂದು ಕಾಲೇಜಿಗೆ ಕಳುಹಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ತಪ್ಪು ದಾರಿಗೆ ಹೋಗದೆ ಒಳ್ಳೆಯ ಮಾರ್ಗ ಆಯ್ಕೆ ಮಾಡಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾದವರು ಅವುಗಳನ್ನು ತೊರೆಯಲು ಅನೇಕ ಕೇಂದ್ರಗ ಳನ್ನು ಸರ್ಕಾರ ತೆರೆದಿದ್ದು. ಅಲ್ಲಿ ಸೂಕ್ತ ಚಿಕಿತ್ಸೆ ಮೂಲಕ ಅವರಿಗೆ ದುಶ್ಚಟ ಬಿಡಿಸಲಾಗುತ್ತದೆ ಎಂದರು.

ಪ್ರಭಾರ ಪ್ರಾಂಶುಪಾಲ ಎ.ಎಂ. ಮಹದೇವಸ್ವಾಮಿ, ಎನ್‌ಎಸ್‌ಎಸ್‌ ಕಾರ್ಯಕ್ರಮ ಸಂಯೋಜನಾಧಿಕಾರಿ ಗಿರೀಶ್‌ ಹರವೆ, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಇದ್ದರು.

Share this article