ಮಕ್ಕಳಲ್ಲಿ ಪ್ರೀತಿ ತುಂಬಿ ಆರೋಗ್ಯಕರ ಸಮಾಜ ನಿರ್ಮಿಸಿ

KannadaprabhaNewsNetwork | Published : Sep 16, 2024 1:49 AM

ಸಾರಾಂಶ

ಕನಕಪುರ: ಇಂದು ದೇಶದಲ್ಲಿ ದ್ವೇಷದ ಬದಲು ಪ್ರೀತಿಯ ಸಮಾಜ ಕಟ್ಟಬೇಕಾಗಿದೆ ಎಂದು ಎಸ್‌ಸಿಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ತಿಳಿಸಿದರು.

ಕನಕಪುರ: ಇಂದು ದೇಶದಲ್ಲಿ ದ್ವೇಷದ ಬದಲು ಪ್ರೀತಿಯ ಸಮಾಜ ಕಟ್ಟಬೇಕಾಗಿದೆ ಎಂದು ಎಸ್‌ಸಿಎಸ್‌ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ತಿಳಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಭವಿಷ್ಯದ ದೃಷ್ಟಿಯಿಂದ ಕಂದಾಚಾರ, ಮೂಢನಂಬಿಕೆ ಹಾಗೂ ಜಾತಿ, ಧರ್ಮ ಎಂಬ ವಿಷ ಬೀಜ ಬಿತ್ತದೆ ಉತ್ತಮ ಶಿಕ್ಷಣ ನೀಡಿ ಅವರ ಮನಸ್ಸಿನಲ್ಲಿ ಪ್ರೀತಿಯನ್ನು ತುಂಬಿ ಆರೋಗ್ಯಕರ ಸಮಾಜ ನಿರ್ಮಾಣ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಡಾ. ಬಾಬಾ ಸಾಹೇಬರ ಆಶಯದಂತೆ ಸಮಾಜದಲ್ಲಿ ತುಳಿತಕ್ಕೆ ಒಳಗಾದ ಸಮುದಾಯದವರ ಆರ್ಥಿಕ ಹಾಗೂ ಸಾಮಾಜಿಕ ಸುಧಾರಣೆಗಾಗಿ ಸಹಕಾರ ಸಂಘವನ್ನು ಆರಂಭಿಸಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.

ಒಂದು ಸಹಕಾರ ಸಂಘ ಕಟ್ಟಿ ಬೆಳೆಸುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಎಸ್ ಸಿ/ಎಸ್ ಟಿ ಜನಾಂಗದ ಸಹಕಾರ ಸಂಘ ಸ್ಥಾಪಿಸಿ ಸಮುದಾಯದ ಏಳಿಗೆಗೆ ಶ್ರಮಿಸುತ್ತಿರುವುದು ಅತ್ಯಂತ ಶ್ಲಾಘನೀಯ. ಒಂದು ಸಹಕಾರ ಸಂಘ ಉತ್ತಮ ವಹಿವಾಟು ನಡೆಸಿ ಲಾಭಗಳಿಸಲು ಸದಸ್ಯರ ಸಹಕಾರ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಂಘದಲ್ಲಿ ಸಾಲ ಪಡೆದಿರುವ ಸದಸ್ಯರು ಸಕಾಲಕ್ಕೆ ಮರುಪಾವತಿ ಮಾಡುವ ಮೂಲಕ ಸಂಘದ ಪ್ರಗತಿಗೆ ಕೈ ಜೋಡಿಸಿದಾಗ ಲಾಭಾಂಶ ಹೆಚ್ಚಳವಾಗಿ ಸಮುದಾಯದ ಜನರಿಗೆ ಹೆಚ್ಚಿನ ಸೌಲಭ್ಯ ನೀಡಲು ಅನುಕೂಲವಾಗಲಿದೆ. ಈಗಾಗಲೇ ಸಂಘದ ಸದಸ್ಯರ ಆರೋಗ್ಯ ದೃಷ್ಟಿಯಿಂದ ಯಶಸ್ವಿನಿ ಯೋಜನೆಯ ಅವಕಾಶ ಕಲ್ಪಿಸಿರುವುದು ಉತ್ತಮ ಕೆಸಲ ಎಂದರು.

ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ರಾಜ್ಯಾಧ್ಯಕ್ಷ ತುಂಬಲ ರಾಮಣ್ಣ ಮಾತನಾಡಿ, ಬಾಬಾ ಸಾಹೇಬರ ಆಶಯದಂತೆ ಈ ಸಹಕಾರ ಸಂಘವನ್ನು ಕೇವಲ ಎರಡು ವರ್ಷಗಳ ಹಿಂದೆ ಸ್ಥಾಪನೆ ಮಾಡಿದ್ದು ರಾಜ್ಯಾದ್ಯಂತ ಸುಮಾರು 30,000 ಸದಸ್ಯರ ಸಹಕಾರದಿಂದ 28 ಶಾಖೆಗಳಿಂದ 20 ಕೋಟಿ ರುಪಾಯಿಯಷ್ಟು ವಹಿವಾಟು ನಡೆಸಲಾಗಿದೆ. ಇದರಿಂದ ಬರುವ ಲಾಭಾಂಶವನ್ನು ಸದಸ್ಯರ ಅಭಿವೃದ್ಧಿಗಾಗಿ ಬಳಸಲಾಗುವುದು. ಮುಂದಿನ ದಿನಗಳಲ್ಲಿ ನಮ್ಮ ಸಂಘದ ವತಿಯಿಂದ ಇ- ಸ್ಟಾಂಪ್ ಕೇಂದ್ರವನ್ನು ತೆರೆಯಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಹತ್ತನೇ ತರಗತಿ ಮತ್ತು ದ್ವೀತಿಯ ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ತಲಾ ಐವತ್ತು ಮಕ್ಕಳಿಗೆ ಇದೇ ವೇಳೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಬಿಡಿಸಿಸಿ ಬ್ಯಾಂಕ್ ಕೇಂದ್ರ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ, ಸುರೇಶ್, ಜವಾಹರ್ ನವೋದಯ ಶಾಲೆಯ ಕನಕಪುರ ಪ್ರಾಂಶುಪಾಲ ಕುಮಾರ್, ಎಸ್ ಸಿ ಎಸ್ ಟಿ ಸರ್ಕಾರಿ ನೌಕರ ಸಮನ್ವಯ ಸಮಿತಿ ಜಿಲ್ಲಾಧ್ಯಕ್ಷ ಜೈ ಪ್ರಕಾಶ್, ಉಪಾಧ್ಯಕ್ಷ ವಿಷಕಂಠ, ಬೆಂಗಳೂರು ವಿಶ್ವ ವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯ ಶಿವಣ್ಣ,

ಸಂಘದ ಕನಕಪುರ ಶಾಖೆಯ ಎಂ.ಸಿ.ನಾಗರಾಜು, ಶಿವಲಿಂಗಯ್ಯ,ಗಿರೇನಹಳ್ಳಿ ಶಿವಕುಮಾರ್, ಚಿಕ್ಕಸ್ವಾಮಿ, ಟಿ. ಸಿ. ವೆಂಕಟೇಶ್, ವಕೀಲ ಸಿದಾರ್ಥ ಸೇರಿದಂತೆ ಸಂಘದ ನೂರಾರು ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:

ಕನಕಪುರದಲ್ಲಿ ನಡೆದ ಅಂಬೇಡ್ಕರ್ ವಿವಿಧೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯನ್ನು ಗಣ್ಯರು ಉದ್ಘಾಟಿಸಿದರು.

Share this article