ಸಂಡೂರು: ರೇಣುಕಾಚಾರ್ಯರು ಮಾನವ ಧರ್ಮದ ಶ್ರೇಷ್ಠತೆಯನ್ನು ಎತ್ತಿ ಹಿಡಿದರು. ಅವರು ಸಮಾನತೆಯ ತತ್ವವನ್ನು ಬೋಧಿಸಿದರು ಎಂದು ವಕೀಲ ಟಿ.ಎಂ. ಶಿವಕುಮಾರ್ ತಿಳಿಸಿದರು.

ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ಅವರು ಬೋಧಿಸಿದ ವೀರಶೈವ ಧರ್ಮ ಸನಾತನ ಧರ್ಮವಾಗಿದೆ. ಹಿಮಾಲಯದಿಂದ ದಕ್ಷಿಣದವರೆಗೆ ಹಬ್ಬಿದೆ. ಮಾನವೀಯ ಗುಣಗಳು ನಶಿಸುತ್ತಿರುವ ಹೊತ್ತಿನಲ್ಲಿ ಜನರಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ ಕಾರ್ಯವಾಗಬೇಕಿದೆ. ಉತ್ತಮ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕಿದೆ ಎಂದರು.

ವೀರಶೈವ ಸಮಾಜದ ಮುಖಂಡರಾದ ಜಿ. ವೀರೇಶ್ ಮಾತನಾಡಿ, ರೇಣುಕಾಚಾರ್ಯರು ಮಾನವರ ಒಳಿತಿಗಾಗಿ ಶ್ರಮಿಸಿದರು. ವಿದ್ಯೆ, ಒಳ್ಳೆ ಸಂಸ್ಕಾರ ಪಡೆಯಲು, ಸನ್ಮಾರ್ಗದಲ್ಲಿ ಸಾಗಲು ನಮಗೆ ಗುರು ಮುಖ್ಯ. ಎಲ್ಲ ಧರ್ಮಗಳ ಸಾರ ಒಂದೇ. ಮಹನೀಯರ ಜಯಂತಿಗಳನ್ನು ಎಲ್ಲರೂ ಸೇರಿ ಆಚರಿಸುವಂತಾಗಬೇಕು. ಮಹನೀಯರ ಆದರ್ಶಗಳನ್ನು ಎಲ್ಲರಿಗೂ ತಿಳಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಶಿರಸ್ತೇದಾರ ಕೆ.ಎಂ. ಶಿವಕುಮಾರ್ ಮಾತನಾಡಿ, ಮಹನೀಯರ ಜಯಂತಿಗಳ ಆಚರಣೆ ಮೂಲಕ ಅವರ ತತ್ವ ಸಿದ್ಧಾಂತಗಳನ್ನು ತಿಳಿದು, ಅವುಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯವಿದೆ ಎಂದು ವಿವರಿಸಿದರು.

ರವಿಶಾಸ್ತ್ರಿ, ಶರಣಬಸಯ್ಯ ಶಾಸ್ತ್ರಿ ಪೂಜಾ ಕಾರ್ಯವನ್ನು ನೆರವೇರಿಸಿದರು. ಎಂ. ಚರಂತಯ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎ.ಎಂ. ಸಂತೋಷಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಜೆ.ಎಂ. ಬಸವರಾಜ ವಂದಿಸಿದರು.


ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ವಿ. ಹಿರೇಮಠ, ಕಾರ್ಯದರ್ಶಿ ಎಚ್.ಎಂ. ಮಂಜುನಾಥ್, ಮುಖಂಡರಾದ ಮೇಲುಸೀಮೆ ಶಂಕ್ರಪ್ಪ, ಜೆ.ಎಂ. ಅನ್ನದಾನಸ್ವಾಮಿ, ಎ.ಎಂ. ಸಿದ್ಧಲಿಂಗಸ್ವಾಮಿ, ಎಂ. ಶಾಂತಮ್ಮ, ರೋಹಿಣಿ, ಸುನಿತಾ, ಗಿರಿಜಮ್ಮ, ಕೆ.ಎಂ. ಕೊಟ್ರಯ್ಯಸ್ವಾಮಿ, ಬಿ.ಎಂ. ಮಹಾಂತೇಶ್, ಎಂ. ನಾಗರಾಜ, ಬಿ.ಎಂ. ಕುಮಾರಸ್ವಾಮಿ, ವಿ.ಎಂ. ನಾಗರಾಜ, ಕೆ.ಎಂ. ವಿನಾಯಕ, ಎಚ್.ಎಂ. ಗುರುಬಸವರಾಜ, ಶರಣಯ್ಯ, ಕೆ.ಎಂ. ಕೊಟ್ರೇಶ್, ಎಂ.ಪಿ.ಎಂ. ಸುರೇಂದ್ರನಾಥ್, ಕೆ.ಎಂ. ನಾಗಭೂಷಣ, ತೋಟಪ್ಪಯ್ಯ, ಎಸ್.ಎಚ್.ಎಂ. ಬಸವರಾಜ, ನವೀನ್ ಮುಂತಾದವರು ಉಪಸ್ಥಿತರಿದ್ದರು.