ಕನ್ನಡಪ್ರಭ ವಾರ್ತೆ ಹಾಸನ
ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸುಮಾರು ೬,೦೦೦ಕ್ಕೂ ಹೆಚ್ಚು ಆನೆಗಳು ವಾಸಿಸುತ್ತಿದ್ದು, ಅವುಗಳಲ್ಲಿ ೨೦೦ರಿಂದ ೨೫೦ ಆನೆಗಳಷ್ಟೇ ಪುಂಡಾಟ ಆಡುವ ಸ್ವಭಾವದವು. ಇವು ಮಾನವ ವಸತಿ ಪ್ರದೇಶಗಳಿಗೆ ನುಗ್ಗಿ ಬೆಳೆ ಹಾನಿ ಹಾಗೂ ಜೀವಹಾನಿ ಉಂಟುಮಾಡುತ್ತಿವೆ. ಕೇವಲ ಹಾಸನ ಜಿಲ್ಲೆಯಲ್ಲಿಯೇ ಕಳೆದ ೨೦ ವರ್ಷಗಳಲ್ಲಿ ೭೮ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ರೈತರು ಭಾರೀ ಬೆಳೆ ಹಾನಿಗೆ ಒಳಗಾಗಿದ್ದಾರೆ. ಕಾಡಿನ ಮೂಲ ಆಹಾರವಾಗಿದ್ದ ಬಿದಿರು, ಬೆಲ್ಲದ ಹಣ್ಣುಗಳು ಈಗ ಕಡಿಮೆಯಾಗಿವೆ. ಈ ಕಾರಣದಿಂದ ಆನೆಗಳು ಪೌಷ್ಟಿಕ ಆಹಾರಕ್ಕಾಗಿ ಕಬ್ಬು, ತೆಂಗು, ಬಾಳೆ, ಹಲಸು ಮುಂತಾದ ಬೆಳೆಗಳನ್ನು ಹಾಳುಮಾಡುತ್ತಿವೆ. ರೈತರ ಬದುಕು ಅಸ್ತವ್ಯಸ್ತವಾಗಿದೆ. ಈ ಪರಿಸ್ಥಿತಿಗೆ ರಾಜಕೀಯ ಬಣ್ಣ ನೀಡದೆ, ಸರ್ಕಾರ ಮಾನವೀಯ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಪರಿಹಾರ ಕಂಡುಕೊಳ್ಳಬೇಕು. ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ "ಶ್ರೀಲಂಕಾದ ಪಿನ್ನಾವಲಾ ಎಲಿಫೆಂಟ್ ಅರ್ಥನೇಜ್ ಮತ್ತು ಉಡವಳವೆ ಎಲಿಫೆಂಟ್ ಟ್ರಾನ್ಸಿಟ್ ಹೋಮ್ " ಮಾದರಿಯನ್ನು ಅನುಸರಿಸುವುದು ಅತ್ಯಂತ ಸೂಕ್ತ. ಅಲ್ಲಿ ಪುಂಡಾಟ ಆಡುವ, ಗಾಯಗೊಂಡ ಅಥವಾ ಜನವಸತಿ ಪ್ರದೇಶಗಳಲ್ಲಿ ಹಾನಿ ಮಾಡುವ ಆನೆಗಳನ್ನು ಹಿಡಿದು ‘ಆನೆಧಾಮ’ಗಳಲ್ಲಿ ಇರಿಸಲಾಗುತ್ತದೆ. ಇವು ಅರಣ್ಯ ಸಂರಕ್ಷಣೆಗೆ ಸಹಕಾರಿಯಾದಂತೆಯೇ ಪ್ರವಾಸೋದ್ಯಮದ ಪ್ರಮುಖ ಕೇಂದ್ರಗಳಾಗಿವೆ ಎಂದು ವಿವರಿಸಿದರು.ಶ್ರೀಲಂಕಾದ ಈ ಯೋಜನೆಗಳಿಂದ ಕೇವಲ ಪರಿಸರ ರಕ್ಷಣೆಯಷ್ಟೇ ಅಲ್ಲ, ಆರ್ಥಿಕ ಲಾಭವೂ ದೊರಕಿದೆ. ಪ್ರತಿದಿನ ಸಾವಿರಾರು ಪ್ರವಾಸಿಗರು ಈ ಆನೆಧಾಮಗಳನ್ನು ಭೇಟಿ ಮಾಡುತ್ತಿದ್ದು, ಸ್ಥಳೀಯರಿಗೆ ಉದ್ಯೋಗಾವಕಾಶ, ಸರ್ಕಾರಕ್ಕೆ ಆದಾಯ ಮತ್ತು ಅರಣ್ಯ ಸಂರಕ್ಷಣೆಗೆ ಶಕ್ತಿ ಒದಗಿಸಿದೆ. ಕರ್ನಾಟಕದಲ್ಲೂ ಇದೇ ಮಾದರಿಯನ್ನು ಅನುಸರಿಸಿ ಹಾಸನ, ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆಧಾಮಗಳನ್ನು ಸ್ಥಾಪಿಸಿದರೆ, ರೈತರ ಕಷ್ಟಕ್ಕೆ ಶಾಶ್ವತ ಪರಿಹಾರ ದೊರೆಯುತ್ತದೆ ಮತ್ತು ರಾಜ್ಯದ ಪ್ರವಾಸೋದ್ಯಮಕ್ಕೂ ಹೊಸ ಬಾಗಿಲು ತೆರೆಯುತ್ತದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಬೆಳೆಗಾರರ ಒಕ್ಕೂಟದ ಮಾಜಿ ಅಧ್ಯಕ್ಷ ಎಚ್.ಟಿ. ಮೋಹನ್ ಕುಮಾರ್, ಮಾಜಿ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ ಇತರರು ಉಪಸ್ಥಿತರಿದ್ದರು.
* ಬಾಕ್ಸ್: ಪರಿಹಾರವೂ ಮಾನವೀಯ ಮನೋಭಾವದಿಂದ ಇರಲಿ, ರಾಜಕೀಯದಿಂದಲ್ಲಮುಖ್ಯಮಂತ್ರಿ ಮತ್ತು ಅರಣ್ಯ ಸಚಿವರು ಅಧಿಕಾರಿಗಳು ಹಾಗೂ ರೈತರ ಪ್ರತಿನಿಧಿಗಳನ್ನೊಳಗೊಂಡ ನಿಯೋಗವನ್ನು ಶ್ರೀಲಂಕಾಕ್ಕೆ ಕಳುಹಿಸಬೇಕು. ಅಲ್ಲಿ ಆನೆಧಾಮಗಳ ನಿರ್ವಹಣೆ, ಕಾನೂನು ಮತ್ತು ಶಿಸ್ತಿನ ಮಾದರಿಯನ್ನು ಅಧ್ಯಯನ ಮಾಡಿದ ಬಳಿಕ ಕರ್ನಾಟಕದ ಆನೆ ಹಾವಳಿ ಪ್ರದೇಶಗಳಲ್ಲಿ ಪೈಲಟ್ ಪ್ರಾಜೆಕ್ಟ್ ರೂಪಿಸಬೇಕು ಎಂದು ಸಲಹೆ ನೀಡಿದರು. ಆನೆಗಳು ತಪ್ಪು ಮಾಡುತ್ತಿಲ್ಲ; ನಾವು ಅವುಗಳ ವಾಸಸ್ಥಳ ಕಿತ್ತುಕೊಂಡಿದ್ದೇವೆ. ಈ ಹೋರಾಟ ಜೀವಹಕ್ಕಿನ ಹೋರಾಟ. ಪರಿಹಾರವೂ ಮಾನವೀಯ ಮನೋಭಾವದಿಂದ ಇರಬೇಕು. ರಾಜಕೀಯದಿಂದಲ್ಲ ಎಂದು ಮಾಜಿ ಶಾಸಕ ವಿಶ್ವನಾಥ್ ದೃಢವಾಗಿ ಹೇಳಿದರು.