ತುಂಗಭದ್ರಾ, ವರದಾ ನದಿಗೆ ಬ್ಯಾರೇಜ್ ಕಟ್ಟಿಕೊಡಿ: ಸಚಿವ ಶಿವಾನಂದ ಪಾಟೀಲ

KannadaprabhaNewsNetwork | Published : Feb 19, 2024 1:33 AM

ಸಾರಾಂಶ

ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ತುಂಗಭದ್ರಾ ಮತ್ತು ವರದಾ ನದಿಗಳಿಗೆ ಬ್ಯಾರೇಜ್ ಕಟ್ಟಿಕೊಡಬೇಕು.

ಕನ್ನಡಪ್ರಭ ವಾರ್ತೆ ಹಾವೇರಿ

ಜಿಲ್ಲಾ ಕೇಂದ್ರ ಹಾವೇರಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ತುಂಗಭದ್ರಾ ಮತ್ತು ವರದಾ ನದಿಗಳಿಗೆ ಬ್ಯಾರೇಜ್ ಕಟ್ಟಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಇಲ್ಲಿನ ಕೆಎಲ್‌ಇ ಸ್ಕೂಲ್ ಪಕ್ಕದ ಮೈದಾನದಲ್ಲಿ ವಿವಿಧ ಇಲಾಖೆಗಳ ಅನುದಾನದಡಿ ಜಿಲ್ಲೆಯಲ್ಲಿ ಅನುಷ್ಠಾನಗೊಂಡಿರುವ ₹411.60 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೂನ್-ಜುಲೈ ತಿಂಗಳಲ್ಲಿ 400 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುತ್ತೇವೆ. ತುಂಗಭಧ್ರಾ ಮತ್ತು ವರದಾ ನದಿಯಿಂದ ಹಾವೇರಿ ನಗರಕ್ಕೆ ನೀರು ತರಲು ವಿಫಲವಾಗಿದೆ. ಹೀಗಾಗಿ ನಗರಕ್ಕೆ ಶಾಶ್ವತ ಕುಡಿಯುವ ನೀರು ಪೂರೈಸಲು ತುಂಗಭದ್ರಾ ಮತ್ತು ವರದಾ ನದಿಗಳಿಗೆ ಬ್ಯಾರೇಜ್ ನಿರ್ಮಿಸಬೇಕಿದೆ ಎಂದರು.

ಜಿಲ್ಲೆಗೆ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಕೊಡುವುದಾಗಿ ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಭರವಸೆ ನೀಡಿದ್ದಾರೆ. ಹಾವೇರಿ ನಗರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮತ್ತು ಹೈವೇವರೆಗೆ ಉತ್ತಮ ರಸ್ತೆ ನಿರ್ಮಿಸಿಕೊಡಬೇಕು ಎಂದು ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡುತ್ತೇನೆ.

ವರ್ಷಕ್ಕೆ ಒಂದಾದರೂ ರಾಜ್ಯದಲ್ಲಿ ಕೆರೆ ಕಟ್ಟಬೇಕು ಎಂಬ ಬೇಡಿಕೆ ಹಿನ್ನೆಲೆ ಕಲುಷಿತ ನೀರನ್ನು ತಡೆಗಟ್ಟಿ ಹೆಗ್ಗೇರಿ ಕೆರೆ ಅಭಿವೃದ್ಧಿ ಪಡಿಸುವ ಯೋಜನೆ ಇದೆ. ಇದಕ್ಕೆ ಸಿಎಂ ಅವರು ಸಹಕಾರ ನೀಡುವ ಭರವಸೆ ಇದೆ ಎಂದು ಹೇಳಿದರು.

ಗೃಹ ಸಚಿವ ಡಾ. ಜಿ. ಪರಮೇಶ್ವರ ಮಾತನಾಡಿ, ಗ್ಯಾರಂಟಿ ಯೋಜನೆಗಳ ಬಗ್ಗೆ ಹಲವು ಟೀಕೆ ಟಿಪ್ಪಣಿಗಳು ಕೇಳಿ ಬಂದವು. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿ ಯೋಜನೆ ನಿಂತು ಹೋಗುತ್ತವೆ ಎಂದು ವಿಪಕ್ಷದವರು ಟೀಕೆ ಮಾಡುತ್ತಿದ್ದಾರೆ. ಆದರೆ, ಆಯವ್ಯಯದಲ್ಲಿ ₹52 ಸಾವಿರ ಕೋಟಿ ಅನುದಾನ ಮೀಸಲಿಡುವ ಮೂಲಕ 5 ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ರಾಜ್ಯದ ಜನರಿಗೆ ಸಂದೇಶ ಕೊಟ್ಟಿದ್ದಾರೆ. ಬಡವರಿಗೆ, ಆರ್ಥಿಕ ಶಕ್ತಿ ಇಲ್ಲದವರಿಗೆ ಸಮಾಜದ ಮುಖ್ಯವಾಹಿನಿಗೆ ತರಲು ಈ ಕಾರ್ಯಕ್ರಮ ಮಾಡಲಾಗಿದೆ ಎಂದರು.

ಹಾವೇರಿ ಜಿಲ್ಲೆಯಲ್ಲಿ ₹19 ಕೋಟಿ ವೆಚ್ಚದಲ್ಲಿ ಭವ್ಯವಾದ ಎಸ್ಪಿ ಕಚೇರಿ ಉದ್ಘಾಟನೆ ಮಾಡಿದ್ದೇವೆ. ಇಷ್ಟು ಸುಸಜ್ಜಿತವಾದ, ಆಧುನಿಕ ಕಟ್ಟಡ ಬೇರೆ ಜಿಲ್ಲೆಯಲ್ಲಿ ಇಲ್ಲ. ಹಾವೇರಿ ಜಿಲ್ಲೆಯೊಂದಕ್ಕೆ ₹400 ಕೋಟಿ ಮೊತ್ತದ ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.

ರಾಜ್ಯವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ರಾಜ್ಯದಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ಕೊಡುವುದಿಲ್ಲ. ಶಾಂತಿ ಕಾಪಾಡುತ್ತೇವೆ ಎಂದು ಭರವಸೆ ನೀಡುತ್ತೇನೆ. ರಾಜ್ಯದಲ್ಲಿ ಅಹಿತಕರ ಘಟನೆಗಳು ನಡೆಯಲು ಬಿಟ್ಟಿಲ್ಲ ಎಂದು ಹೇಳಿದರು.

ವಿಧಾನಸಭೆ ಉಪಾಸಭಾಧ್ಯಕ್ಷ ರುದ್ರಪ್ಪ ಲಮಾಣಿ ಮಾತನಾಡಿ, ಹೆಗ್ಗೇರಿ ಕೆರೆಗೆ ತುಂಗಾ ಮೇಲ್ದಂಡೆ ಯೋಜನೆಯಿಂದ ನೀರು ತರುತ್ತಿದ್ದೇವೆ. ಯುಜಿಡಿ ಮತ್ತು ಎಸ್ಟಿಪಿ ಪ್ಲಾಂಟ್‌ಗೆ ₹18 ಕೋಟಿ ಅನುದಾನ ಸಿಕ್ಕಿದೆ. ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿದ ಬಳಿಕ ಹಲವಾರು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ. ಕುಡಿಯುವ ನೀರು ಯೋಜನೆಗೆ ಜಿಲ್ಲೆಗೆ ಅನುದಾನ ಒದಗಿಸಿದ ಸಚಿವ ಬೈರತಿ ಸುರೇಶ್ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.

Share this article