ಕೂಡ್ಲಿಗಿ: ಸ್ವಾತಂತ್ರ್ಯ ಹೋರಾಟಗಾರ ಶಿಕ್ಷಣ ಪ್ರೇಮಿ ಮೌಲಾನ ಅಬುಲ್ ಕಲಾಂ ಅಜಾದ್ ರಾಷ್ಟ್ರಪ್ರೇಮದ ಸಂಕೇತವಾಗಿ ಹಿಂದೂ-ಮುಸ್ಲಿಂ ಎನ್ನುವ ಧರ್ಮಬೇಧವಿಲ್ಲದೇ ಸೌಹಾರ್ದದಿಂದ ಬಾಳಬೇಕೆಂಬ ಪಾಠ ಹೇಳಿಕೊಟ್ಟವರಾಗಿದ್ದಾರೆ ಎಂದು ಶಿಕ್ಷಕ ಚಾಂದ್ ಪೀರ್ ತಿಳಿಸಿದರು.
ಅವರು ಪಟ್ಟಣದ ಸರ್ಕಾರಿ ಉರ್ದು ಪ್ರೌಡಶಾಲೆಯಲ್ಲಿ ಕೂಡ್ಲಿಗಿ ಸ್ನೇಹಿತರ ಬಳಗ ಆಯೋಜಿಸಿದ್ದ ಮೌಲಾನ ಅಬುಲ್ ಕಲಾಂ ಅಜಾದ್ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ರಾಷ್ಟ್ರೀಯ ಶಿಕ್ಷಣ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.ಮೌಲಾನ ಅಬುಲ್ ಕಲಾಂ ಆಜಾದ್ ಜೀವನ ಚರಿತ್ರೆ, ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ. ವಿದ್ಯಾರ್ಥಿಗಳು ಇವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಇವರು ಶಿಕ್ಷಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುವುದರ ಮೂಲಕ ಗಮನ ಸೆಳೆದಿದೆ. ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು, ಉತ್ತಮ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂಬ ಉದಾತ್ತ ಕಲ್ಪನೆಯನ್ನು ಹೊಂದಿದ್ದರು ಎಂದು ತಿಳಿಸಿದರು.
ಕೂಡ್ಲಿಗಿಯ ಗ್ರೇಡ್ 2 ತಹಶೀಲ್ದಾರ್ ನೇತ್ರಾವತಿ ಮಾತನಾಡಿ, ವಿದ್ಯಾರ್ಥಿನಿಯರು ಯಾವುದಕ್ಕೂ ಎದೆಗುಂದದೇ ಸ್ವಾಭಿಮಾನದಿಂದ ಜೀವನ ನಡೆಸಬೇಕು. ವಿದ್ಯಾರ್ಥಿನಿಯರು ಈಗಿನಿಂದಲೇ ನಿರಂತರ ಅಭ್ಯಾಸ ಮಾಡುವುದರ ಮೂಲಕ ಸಾಧನೆ ಮಾಡಿದರೆ ಮಾತ್ರ ಮುಂದಿನ ಭವಿಷ್ಯ ಉಜ್ವಲವಾಗಿರುತ್ತದೆ. ನೀವು ಈ ಸಮಯದಲ್ಲಿ ಮೊಬೈಲ್ ಮೋಹ, ಇತರೆ ಕೆಟ್ಟ ವಿಚಾರಗಳಿಗೆ ಕಿವಿಗೊಡದೇ ಓದಿ ಗುರಿ ಸಾಧಿಸುವುದಷ್ಟೇ ನಿಮ್ಮ ಆಧ್ಯತೆಯಾಗಬೇಕೆಂದು ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.ಇದೇ ಸಂದರ್ಭದಲ್ಲಿ ಒನಕೆ ಓಬವ್ವಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ನಂತರ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡಲಾಯಿತು. ಕೂಡ್ಲಿಗಿ ಪಪಂ ಅಧ್ಯಕ್ಷ ಕಾವಲಿ ಶಿವಪ್ಪ, ಸ್ನೇಹಿತರ ಬಳಗ ಅಧ್ಯಕ್ಷ ಅಬ್ದುಲ್ ರೆಹಮಾನ್, ಶಿಕ್ಷಕರಾದ ರಾಮಕೃಷ್ಣ, ಪ್ರಕಾಶ್, ಸಿದ್ದರಾಮಯ್ಯ ಸ್ಥಾಯಿ ಸಮಿತಿಯ ಅಧ್ಯಕ್ಷ ಶುಕೂರ್, ಅಮೀರ್, ವಿಶ್ವಚೇತನ ಶಾಲೆಯ ಮುಖ್ಯಸ್ಥರಾದ ಕರಿಬಸಮ್ಮ ನಿವೃತ್ತ ಶಿಕ್ಷಕರಾದ ಅಲ್ಲಾಭಕ್ಷಿ, ನಂದಿ ಬಸವರಾಜ್, ಸಿದ್ಧಲಿಂಗಸ್ವಾಮಿ, ಸ್ನೇಹಿತರ ಬಳಗದ ಅಬ್ದುಲ್ ವಾಹಿದ್, ಫಯಾಜ್, ಅಬ್ದುಲ್, ಜಬ್ಬಾರ್, ಮಹೇಶ್, ಮತ್ತು ಡಿಪ್ಲೋಮಾ ಉಪನ್ಯಾಸಕರಾದ ಜಗದೀಶ್ ಮುಂತಾದವರು ಉಪಸ್ಥಿತರಿದ್ದರು.
ರಾಷ್ಟ್ರೀಯ ಶಿಕ್ಷಣ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.