ಸಂಸ್ಥೆಯು 25ನೇ ವರ್ಷದ ಬೆಳ್ಳಿಹಬ್ಬ ಕಾರ್ಯಕ್ರಮ
ಯುವಜನರಲ್ಲಿ ನಾಯಕತ್ವ ಗುಣಗಳನ್ನು ಬೆಳೆಸುವ ಜತೆಯಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಜೆಸಿಐ ಸಂಸ್ಥೆ ಮಹತ್ತರ ಕಾರ್ಯ ನಿರ್ವಹಿಸುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಶಿವಮೊಗ್ಗ ನಗರದಲ್ಲಿ ಜೆಸಿಐ ಶಿವಮೊಗ್ಗ ಭಾವನಾ ಸಂಸ್ಥೆ ವತಿಯಿಂದ ಆಯೋಜಿಸಿದ್ದ 25ನೇ ವರ್ಷದ ಬೆಳ್ಳಿಹಬ್ಬ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೆಸಿಐ ಸಂಸ್ಥೆಯು ನಿರಂತರವಾಗಿ ಯುವಜನರಿಗೆ ತರಬೇತಿ ನೀಡುವ ಕೆಲಸ ಮಾಡುತ್ತಿದ್ದು, ಯುವನಾಯಕರನ್ನು ಸೃಷ್ಟಿಸುತ್ತಿದೆ ಎಂದು ತಿಳಿಸಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿ, ಜೆಸಿಐ ಸಂಸ್ಥೆಯಲ್ಲಿ ನಾನು ಕೂಡ ಅಧ್ಯಕ್ಷನಾಗಿ ಜವಾಬ್ದಾರಿ ನಿರ್ವಹಿಸಿದ್ದು, ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಕಲಿತ ಶಿಸ್ತು, ಉತ್ತಮ ಸಂವಹನ ಕೌಶಲ್ಯ, ನಾಯಕತ್ವ ಗುಣಗಳನ್ನು ಕಲಿತಿದ್ದೇನೆ. ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದೇನೆ ಎಂದು ಹೇಳಿದರು.
ಜೆಸಿಐ ಭಾವನಾದ 2024ರ ಅಧ್ಯಕ್ಷೆ ಅನಿಶಾ ಕಾತರಕಿ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಅನಿಶಾ ಕಾತರಕಿ ಅವರು ನ್ಯಾಷನಲ್ ಕೋಆರ್ಡಿನೇಟರ್ ಸಿಎಸ್‌ಆರ್ ಆಗಿ ನ್ಯಾಷನಲ್ ಗವರ್ನಿಂಗ್ ಬೋರ್ಡ್‌ಗೆ ಆಯ್ಕೆಯಾಗಿರುವುದಕ್ಕೆ ಅಭಿನಂದಿಸಲಾಯಿತು. ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಉತ್ತಮ ಸೇವಾ ಕಾರ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಯಿತು. ಎಲ್ಲರ ಪ್ರೋತ್ಸಾಹದಿಂದ ಉತ್ತಮ ಕೆಲಸ ಮಾಡಲು ಸಾಧ್ಯವಾಯಿತು ಎಂದು ಅನಿಶಾ ಕಾತರಕಿ ತಿಳಿಸಿದರು.