ಶರಣರ ತತ್ವಾದರ್ಶಗಳಿಂದ ಉತ್ತಮ ಸಮಾಜ ನಿರ್ಮಾಣ

KannadaprabhaNewsNetwork | Published : Feb 11, 2025 12:49 AM

ಸಾರಾಂಶ

ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ಆದರ್ಶಗಳು ಅಗತ್ಯವಾಗಿವೆ. ಇಂದಿನ ಯುವ ಜನತೆ ಶರಣರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಉತ್ತಮ ಸಮಾಜ ನಿರ್ಮಾಣಕ್ಕೆ ಶರಣರ ಆದರ್ಶಗಳು ಅಗತ್ಯವಾಗಿವೆ. ಇಂದಿನ ಯುವ ಜನತೆ ಶರಣರ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗುವಂತೆ ಮಹಾನಗರ ಪಾಲಿಕೆ ಉಪ ಆಯುಕ್ತ ಉದಯಕುಮಾರ ತಳವಾರ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ನಗರದ ಕುಮಾರ ಗಂಧರ್ವ ಕಲಾರಂಗ ಮಂದಿರದಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ ಹಾಗೂ ಉರಿ ಲಿಂಗಪೆದ್ದಿಯವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದಾರ್ಶನಿಕರು, ಶರಣರು ಮತ್ತು ಸಂತರ ಜಯಂತಿಗಳನ್ನು ಆಚರಿಸುವುದರ ಮೂಲಕ ಶರಣರ ತತ್ವಾದರ್ಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.ಮ.ನಾ.ರಾ.ಸಂಘದ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ನಿರ್ಮಲಾ ಬಟ್ಟಲ ಮಾತನಾಡಿ ೧೨ನೇ ಶತಮಾನದಲ್ಲಿ ಚಾತುರ್ವರ್ಣ ವ್ಯವಸ್ಥೆ ಇತ್ತು ಅಂತಹ ವ್ಯವಸ್ಥೆಯನ್ನು ಹೋಗಲಾಡಿಸಿ ಎಲ್ಲರು ಸಮಾನರು ಎಂದು ಬಸವಣ್ಣ ನವರು ಕ್ರಾಂತಿ ಪ್ರಾರಂಭಿಸಿದ್ದರು. ಅಂತಹ ಸಂದರ್ಭದಲ್ಲಿ ಕಾಯಕ ಶರಣರಾದ ಮಾದಾರ ಚನ್ನಯ್ಯ, ಮಾದಾರ ಧೂಳಯ್ಯ, ಸಮಗಾರ ಹರಳಯ್ಯ ಹಾಗೂ ಉರಿಲಿಂಗಪೆದ್ದಿ ಅಂತಹ ಕ್ರಾಂತಿಯಲ್ಲಿ ಗುರುತಿಸಿಕೊಂಡ ಶರಣರು ಇವರಾಗಿದ್ದರು ಎಂದರು.ಶರಣ ಮಾದಾರ ಧೂಳಯ್ಯನವರು ಶಿವನು ಒಲಿದು ಬಂದಾಗ ಶಿವನಿಗೆ ನಿನ್ನನ್ನು ಯಾರು ಬೇಡಿಕೊಳ್ಳುತ್ತಾರೋ ಅವರ ಹತ್ತಿರ ಹೋಗು ನಾನು ಕಾಯಕದಲ್ಲಿ ಕಾರ್ಯನಿರತನಾಗಿದ್ದೇನೆ. ನನಗೆ ಸಮಯವಿಲ್ಲ ಎಂದು ಗಟ್ಟಿ ಧೈರ್ಯದಿಂದ ಹೇಳಿ ತಮ್ಮ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಶರಣರಾಗಿದ್ದಾರೆ. ಶರಣ ಡೋಹರ ಕಕ್ಕಯ್ಯನವರು ವರ್ಗ ರಹಿತ, ಜಾತಿ ರಹಿತ ಸಮಾಜದ ಸಲುವಾಗಿ ಹೋರಾಡಿದವರು. ವಚನ ಕಟ್ಟೆಗಳನ್ನು ಉಳಿಸಿಕೊಡುವದರಲ್ಲಿ ಈ ಶರಣರ ಪಾತ್ರ ತುಂಬಾ ಮುಖ್ಯವಾಗಿದೆ. ಅದರಂತೆ ಶರಣ ಉರಿಲಿಂಗಪೆದ್ದಿಯವರು ಉರಿಲಿಂಗದೇವನ ಮಠದಿಂದ ಲಿಂಗ ದೀಕ್ಷೆ ಪಡೆದು ಸಂಸ್ಕೃತ, ಕನ್ನಡ ಭಾಷೆ ಕಲಿತುಕೊಂಡು ವಚನಗಳನ್ನು ಬರೆಯುತ್ತ ಕಾಯಕ ನಿಷ್ಠೆಯಿಂದ ಇದ್ದ ಶರಣರು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಮಲ್ಲೇಶ ಚೌಗಲೆ, ಭೀಮರಾವ ಪವಾರ, ವಿವೇಕ ಶೇರಖಾನೆ, ಯೋಗೇಶ ಮಾವರಕರ ಉಪಸ್ಥಿತರಿದ್ದರು.ತಳ ಸಮುದಾಯದ ಅಭ್ಯುಧ್ಯೇಯಕ್ಕಾಗಿ ಇಂದು ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸವೆ. ಈ ಯೋಜನೆಗಳ ಸದುಪಯೋಗ ಪಡೆದುಕೊಂಡು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಸದೃಢರಾಗಬೇಕು.

-ಉದಯಕುಮಾರ ತಳವಾರ, ಮಹಾನಗರ ಪಾಲಿಕೆ ಉಪ ಆಯುಕ್ತರು.

Share this article