ರಾಮಕೃಷ್ಣ ದಾಸರಿಕನ್ನಡಪ್ರಭ ವಾರ್ತೆ ರಾಯಚೂರುಇತ್ತೀಚಗಷ್ಟೇ ಕಾರ್ಯಾರಂಭಗೊಂಡಿರುವ ಹೊಸ ಜಿಲ್ಲಾಡಳಿತ ಭವನಕ್ಕೆ ತೆರಳಲು ಇಲಾಖೆಗಳು ಹಿಂದೇಟು ಹಾಕುತ್ತಿರುವ ಸಂಗತಿ ಬಹಿರಂಗೊಂಡಿದ್ದು, ಮಿನಿ ವಿಧಾನಸೌಧವೆಂದರೆ ಎಲ್ಲ ಇಲಾಖೆಗಳು ಒಂದೇ ಸೂರಿನಡಿರಬೇಕು ಎನ್ನುವ ಉದ್ದೇಶ ಬುಡಮೇಲಾಗಿದೆ.ಆಸಕ್ತಿಯಿಲ್ಲ, ಬಿಕೋ ಎನ್ನುತ್ತಿರುವ ಭವನ:
ಮಹಾನಗರ ಪಾಲಿಕೆ ವ್ಯಾಪ್ತಿಯ ಯಕ್ಲಾಸಪುರ ಸಮೀಪದಲ್ಲಿ ಅರೆ-ಬರೆಯಾಗಿ ಕಟ್ಟಿರುವ ಜಿಲ್ಲಾಡಳಿತ ಭವನಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಜೊತೆಗೆ ಸಹಾಯಕ ಆಯುಕ್ತರ, ಖಜಾನೆ, ಡಿಡಿಎಲ್‌ಆರ್, ಆಹಾರ ಇಲಾಖೆ, ಮುಜರಾಯಿ, ನಗರಾಭಿವೃದ್ಧಿ ಕೋಶ ಸೇರಿ ಬೆರಳೆಣಿಕೆಯಷ್ಟು ಇಲಾಖೆಗಳು ಮಾತ್ರ ಸ್ಥಳಾಂತರಗೊಂಡು ಅಸೌಕರ್ಯಗಳ ನಡುವೆಯೇ ಕೆಲಸ ಮಾಡುತ್ತಿವೆ. ಉಳಿದಂತೆ ಅದರಲ್ಲಿಯೂ ಮುಖ್ಯವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ, ಪದವಿ ಪೂರ್ವ ಶಿಕ್ಷಣ ಇಲಾಖೆ, ಸಾಂಕಿಕ ಇಲಾಖೆ, ಮೀನುಗಾರಿಕೆ ಇಲಾಖೆ, ಉಪನೋಂದಣಿ, ಗಣಿ ಮತ್ತು ಭೂ ವಿಜ್ಞಾನ ಸೇರಿ ಇತರೆ ಇಲಾಖೆಗಳು ಜಿಲ್ಲಾಡಳಿತ ಭವನಕ್ಕೆ ಬರಲು ಆಸಕ್ತಿ ತೋರದ ಕಾರಣಕ್ಕೆ ಹೊಸ ಜಿಲ್ಲಾಡಳಿತ ಭವನವು ಬಿಕೋ ಎನ್ನುತ್ತಿದೆ.ಹಿಂದೇಟಿಗೆ ಹಲವಾರು ಕಾರಣ :ರಾಯಚೂರು ನಗರದ ಐತಿಹಾಸಿಕ ಮಾವಿನಕೆರೆ ಜಾಗದ ವ್ಯಾಪ್ತಿಯಲ್ಲಿ ಸುಮಾರು ಎಂಬತ್ತು ಲಕ್ಷ ರು. ವೆಚ್ಚದಲ್ಲಿ ಮೀನುಗಾರಿಕೆ, ಸಾಂಕಿಕ ಇಲಾಖೆಗಳ ಕಟ್ಟಡಗಳನ್ನು ನಿರ್ಮಿಸಿದ್ದು, ಇದೀಗ ಅವುಗಳನ್ನು ಕೆಡವಲು ನಿರ್ಧರಿಸಲಾಗಿದೆ. ಇಲಾಖೆಗಳ ಅಧಿಕಾರಿಗಳು ಸಹ ನೂತನ ಕಟ್ಟಡ ಬರುವುದರ ಕುರಿತು ಸ್ಪಷ್ಟವಾದ ಮಾಹಿತಿ ನೀಡುತ್ತಿಲ್ಲ. ಇನ್ನು ಪ್ರತಿ ತಿಂಗಳು 80 ರಿಂದ 1 ಲಕ್ಷ ರು. ಬಾಡಿಗೆ ನೀಡಿ ಡಿಡಿಪಿಐ ಕಚೇರಿ ನಡೆಸುತ್ತಿದ್ದು, ಈಗಾಗಲೇ ಇರುವ ಜಾಗದಲ್ಲಿಯೇ ಕಚೇರಿ ಕಟ್ಟಬೇಕು ಎನ್ನುವ ಉದ್ದೇಶ ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ನಾವು ಜಿಲ್ಲಾಡಳಿತ ಭವನಕ್ಕೆ ಹೋಗುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. ಉಪನೋಂದಣಿ ಕೆಲಸ ಕಾರ್ಯಗಳು ಅಂತರ್ಜಾಲದ ಮೇಲೆಯೇ ಅವಲಂಭನೆಗೊಂಡಿದ್ದರಿಂದ ವಿದ್ಯುತ್, ಹೈಸ್ಪೀಡ್ ನೆಟ್, ಬ್ಯಾಂಕ್ ಹಾಗೂ ಜಿರಾಕ್ಸ್ ಸೇರಿದಂತೆ ಇತರೆ ಸವಲತ್ತುಗಳು ಹೊಸ ಜಿಲ್ಲಾಡಳಿತ ಭವನದಲ್ಲಿ ಇಲ್ಲದ ಕಾರಣಕ್ಕೆ ಇವರು ಅಲ್ಲಿಗೆ ತೆರಳಲು ಒಲ್ಲೆ ಎನ್ನುತ್ತಿದ್ದಾರೆ.
ಬಾಡಿಗೆಗೆ ಲಕ್ಷಾಂತರ ಪೋಲು :ಇಷ್ಟು ದಿನ ಜಾಗವಿಲ್ಲ, ಸ್ವಂತ ಕಟ್ಟಡವಿಲ್ಲವೆಂದು ಹೇಳಿ ಪ್ರತಿ ತಿಂಗಳು ಲಕ್ಷಾಂತರ ರು. ಬಾಡಿಗೆ ತೆತ್ತು ಖಾಸಗಿ ಕಟ್ಟಡಗಳಲ್ಲಿಯೇ ಇಲಾಖೆಗಳನ್ನು ನಡೆಸಲಾಗಿತ್ತು. ಇದೀಗ ಭವ್ಯವಾದ ಆಡಳಿತ ಭವನ ನಿರ್ಮಿಸಿದ್ದರೂ, ಅಲ್ಲಿಗೆ ತೆರಳಲು ನಿರಾಸಕ್ತಿಯನ್ನು ತೋರುತ್ತಿರುವುದು ಜಿಲ್ಲಾಡಳಿತಕ್ಕೆ ನುಂಗಲಾಕದ ತುತ್ತಾಗಿ ಪರಿಣಮಿಸಿದೆ. ಖಾಸಗಿ ಬಾಡಿಗೆಯಿಂದ ಕಾಣದ ಲಾಭವನ್ನು ಅನುಭವಿಸಿದವರಿಗೆ ಅವೆಲ್ಲವೂ ಕಟ್ಟಾಗುವ ಸಾಧ್ಯತೆಗಳಿರುವುದರಿಂದ ಕುಂಟು ನೆಪಗಳನ್ನೇಳಿ ನುಣಿಚಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಸಹ ದಟ್ಟವಾಗಿ ಹಬ್ಬಿವೆ. ಹತ್ತಾರು ಇಲಾಖೆಗಳು ಬಾಡಿಗೆ ಕಟ್ಟಡದಲ್ಲಿಯೇ ಉಳಿದುಬಿಟ್ಟಿರುವುದರಿಂದ ಪ್ರತಿ ತಿಂಗಳು ಲಕ್ಷಾಂತರ ರುಪಾಯಿ ಪೋಲಾಗುತ್ತಿದ್ದು, ಇದನ್ನು ತಡೆಯಬೇಕಾದರೆ ಜಿಲ್ಲಾಡಳಿತ ಭವನಕ್ಕೆ ಎಲ್ಲರೂ ಶಿಫ್ಟಾಗಬೇಕಾಗಿದೆ.ಯಾವ ರೀತಿ ಡಿಸಿ ಕಚೇರಿ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಇತರೆ ಹಾಗೂ ಹಳೆ ಡಿಸಿ ಕಚೇರಿಯಲ್ಲಿದ್ದ ಇಲಾಖೆಗಳು ನೂತನ ಜಿಲ್ಲಾಡಳಿತ ಭವನಕ್ಕೆ ಸ್ಥಳಾಂತರಗೊಂಡಿವೆಯೋ ಉಳಿದ ಇಲಾಖೆಗಳ ಸಹ ಶಿಫ್ಟಾದಲ್ಲಿ ಜಿಲ್ಲೆ ಜನರಿಗೆ ಒಂದೇ ಕಡೆ ಸರ್ಕಾರಿ ಸೇವೆ ಲಭಿಸಲು ಸಾಧ್ಯವಾಗಲಿದೆ. ಅದಕ್ಕೆ ಅಗತ್ಯವಾದ ಸವಲತ್ತುಗಳನ್ನು ಕಲ್ಪಿಸಿಕೊಡುವುದರ ಜೊತೆಗೆ ಜನಸ್ನೇಹಿ ಆಡಳಿತಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ.