ನಶಾಮುಕ್ತ ಸುಸ್ಥಿರ ಸಮಾಜ ನಿರ್ಮಾಣ ಪ್ರತಿಯೊಬ್ಬರ ಆದ್ಯತೆಯಾಗಲಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.

KannadaprabhaNewsNetwork |  
Published : Aug 15, 2025, 01:01 AM IST
13ನಶಾ | Kannada Prabha

ಸಾರಾಂಶ

ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಾದಕ ವಸ್ತು ಸೇವನೆ ವಿರುದ್ಧ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಪ್ರತಿಜ್ಞಾ ವಿಧಿ ಬೋಧಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಯುವಜನರಲ್ಲಿ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸಲು ನಶಾ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಮಾದಕ ವ್ಯಸನ ಮುಕ್ತ ಸುಸ್ಥಿರ ಸಮಾಜ ನಿರ್ಮಾಣ ಪ್ರತಿಯೊಬ್ಬರ ಆದ್ಯತೆಯಾಗಲಿ ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಅವರು ಬುಧವಾರ ನಗರದ ವಳಕಾಡು ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾಡಳಿತ ವತಿಯಿಂದ ನಶಾ ಮುಕ್ತ ಭಾರತ ಅಭಿಯಾನ ಯೋಜನೆಯ 5ನೇ ವಾರ್ಷಿಕೋತ್ಸವದ ಅಂಗವಾಗಿ ಮಾದಕ ವಸ್ತು ಸೇವನೆ ವಿರುದ್ಧ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.

ಮಾದಕ ವ್ಯಸನವು ಬಹುದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಕೆಲವರು ಅತೀ ಚಿಕ್ಕ ವಯಸ್ಸಿಗೆ ಮಾದಕ ವಸ್ತುಗಳ ದಾಸರಾಗಿ ತಮ್ಮ ಅಮೂಲ್ಯ ಜೀವವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ವ್ಯಕ್ತಿಯು ಯಾವುದೇ ವ್ಯಸನಕ್ಕೆ ಒಳಗಾದಲ್ಲಿ ತನ್ನ ಕುಟುಂಬ, ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳಲು ಪ್ರೇರೇಪಿಸುತ್ತದೆ. ಭವಿಷ್ಯದ ಹಿತದೃಷ್ಠಿಯಿಂದ ವಿದ್ಯಾರ್ಥಿ ಜೀವನದಿಂದಲೇ ವ್ಯಸನಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಇನ್ನೂ ಹೆಚ್ಚು ಹೆಚ್ಚು ಹಮ್ಮಿಕೊಳ್ಳಬೇಕು ಎಂದರು.ಯುವಶಕ್ತಿ ದೇಶದ ಆಸ್ತಿ. ಯುವಪೀಳಿಗೆ ಸಾಮಾಜಿಕ ಮತ್ತು ವೈಯಕ್ತಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸಿಕೊಂಡು ವ್ಯಸನಮುಕ್ತ ಸಮಾಜಕ್ಕೆ ಕೊಡುಗೆ ನೀಡಬೇಕು. ಮಾದಕ ದ್ರವ್ಯ ಸೇವನೆಯ ಚಟಕ್ಕೆ ಒಳಗಾಗುವುದಿಲ್ಲ ಎಂಬ ಧೃಢವಾದ ನಿಲುವು ಹೊಂದಬೇಕು. ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾದಕ ವಸ್ತುಗಳ ಬಳಕೆ, ಮಾರಾಟವಾಗುತ್ತಿರುವ ಬಗ್ಗೆ ಮಾಹಿತಿ ದೊರೆತಲ್ಲಿ ಶಾಲಾ ಮುಖ್ಯಸ್ಥರ ಗಮನಕ್ಕೆ ತರಬೇಕು ಎಂದು ಹೇಳಿದರು.ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ., ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ, ಸರ್ಕಲ್ ಪೊಲೀಸ್ ಇನ್‌ಸ್ಪೆಕ್ಟರ್‌ ರಾಮಚಂದ್ರ ನಾಯಕ್, ಡಯಟ್ ಪ್ರಾಂಶುಪಾಲ ಡಾ.ಅಶೋಕ್ ಕಾಮತ್, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು, ಬೋಧಕ ಹಾಗೂ ಬೋಧಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಮ್ಮ ಸ್ವಾಗತಿಸಿದರು. ಕನ್ನಡ ಭಾಷಾ ಶಿಕ್ಷಕಿ ತಾರಾಮತಿ ನಿರೂಪಿಸಿದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವಂದಿಸಿದರು.

PREV

Recommended Stories

ಕೊಲೆ ಆರೋಪಿ ದರ್ಶನ್‌ಗೆ ತಪ್ಪದ ದಯಾನಂದ್ ಕಂಟಕ
ಇಲೆಕ್ಟ್ರಾನಿಕ್ ಸಿಟಿ ಮೆಟ್ರೋದಿಂದ ಫೀಡರ್ ಬಸ್