ಆರೋಗ್ಯವಂತರಿಂದ ಸ್ವಸ್ಥ ಸಮಾಜ ನಿರ್ಮಾಣ: ಎಸು ಬೆಂಗಳೂರು

KannadaprabhaNewsNetwork |  
Published : Oct 02, 2024, 01:07 AM IST
ಪಪಂ ಮುಖ್ಯಾಧಿಕಾರಿ ಎಸು ಬೆಂಗಳೂರು ಕಾರ್ಯಕ್ರಮವನ್ನು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ವೃದ್ಧಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮವು ಬಹುಮುಖ್ಯವಾಗಿದೆ.

ಹೊನ್ನಾವರ: ಸುತ್ತಮುತ್ತಲಿನ ಪರಿಸರದಲ್ಲಿ ಸಿಗುವ ಪೌಷ್ಟಿಕಾಂಶದ ಆಹಾರ ಸೇವಿಸಿ ಆರೋಗ್ಯವಾಗಿದ್ದರೆ ಸ್ವಸ್ಥ ಸಮಾಜ ನಿರ್ಮಾಣವಾಗಲಿದೆ ಎಂದು ಪಪಂ ಮುಖ್ಯಾಧಿಕಾರಿ ಎಸು ಬೆಂಗಳೂರು ತಿಳಿಸಿದರು.ಪಟ್ಟಣದ ಸಿಡಿಪಿಒ ಕಚೇರಿಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಸು ಅಭಿವೃದ್ಧಿ ಯೋಜನೆ, ತಾಪಂ ಸಾರ್ವಜನಿಕ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದಲ್ಲಿ ನಡೆದ ಪೋಷಣಾ ಅಭಿಯಾನ ಮಾಸಾಚರಣೆ ಸಮಾರೋಪ ಮತ್ತು ಬೇಟಿ ಬಚಾವೋ, ಬೇಟಿ ಪಡಾವೋ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯಾಗಿ ಎರಡು ಯೋಜನೆ ಜಾರಿಗೆ ಬಂದಿದ್ದು, ಆರೋಗ್ಯ ವೃದ್ಧಿಯ ಜತೆ ರಕ್ಷಣೆಯ ಮೂಲಕ ಸಾಧನೆ ಮಾಡಲು ಪ್ರೇರೇಪಿಸಲಿದೆ. ಮಕ್ಕಳು ಹಾಗೂ ಮಹಿಳೆಯರ ಆರೋಗ್ಯ ವೃದ್ಧಿಸಲು ಅಂಗನವಾಡಿ ಕಾರ್ಯಕರ್ತೆಯರ ಶ್ರಮವು ಬಹುಮುಖ್ಯವಾಗಿದೆ ಎಂದರು.

ಇಲಾಖೆಯ ಯೋಜನಾಧಿಕಾರಿ ವನಿತಾ ಮಾತನಾಡಿ, ಸೆಪ್ಟೆಂಬರ್ ತಿಂಗಳು ಅಂಗನವಾಡಿ ಮತ್ತು ಗ್ರಾಪಂ ಮಟ್ಟದಲ್ಲಿ ಪೋಷಣಾ ಅಭಿಯಾನ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಮಹಿಳೆಯರು ಅಪೌಷ್ಟಿಕತೆಯಿಂದ ಬಳಲಬಾರದು ಎಂದು ಈ ಅಭಿಯಾನ ಆರಂಭಿಸಿದ್ದಾರೆ. ಈ ಅಭಿಯಾನವು ವರ್ಷವಿಡೀ ಮನೆಯಲ್ಲಿ ಅನುಷ್ಠಾನ ಮಾಡುವಂತೆ ಮಹಿಳೆಯರಿಗೆ ಪ್ರೇರೇಪಿಸುವ ಕಾರ್ಯಕ್ಕೆ ಮುಂದಾಗಬೇಕಿದೆ ಎಂದರು.ಪಪಂ ಉಪಾಧ್ಯಕ್ಷ ಸುರೇಶ ಹೊನ್ನಾವರ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ್ಯದಲ್ಲಿರುವಾಗ ಉತ್ತಮ ಆಹಾರ ಸೇವಿಸುವ ನಾವೆಲ್ಲರೂ ದೊಡ್ಡವರಾದಂತೆ ಕಳಪೆ ಗುಣಮಟ್ಟದ ಆಹಾರ ಸೇವಿಸಿ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದೇವೆ. ಈ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕಾರ್ಯಕ್ರಮ ಆಯೋಜಿಸುತ್ತಿದ್ದು, ಇಂತಹ ಆಹಾರ ಸೇವಿಸುವ ಮೂಲಕ ಅನಾರೋಗ್ಯ ಉಂಟಾಗದಂತೆ ನೋಡಿಕೊಳ್ಳಬೇಕು ಎಂದರು.ಮೇಲ್ವಿಚಾರಕಿಯರಾದ ಮಾಲತಿ, ಗಂಗಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಿಬ್ಬಂದಿ ಇದ್ದರು. ಮೇಲ್ವಿಚಾರಕಿ ಸುಧಾ ಸ್ವಾಗತಿಸಿ, ಜ್ಯೋತಿ ಪಟಗಾರ ಕಾರ್ಯಕ್ರಮ ನಿರ್ವಹಿಸಿದರು.

PREV

Recommended Stories

ಪತ್ರಿಕೆ, ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಿ
ಕೇಂದ್ರದ ಎನ್‌ಸಿಡಿಸಿ ಬಳಕೆಗೆ ಸಿಎಂ ಮೊಂಡುತನ