ಹಿರಿಯರ ಅನುಭವ ನಮ್ಮ ಜೀವನಕ್ಕೆ ದಾರಿದೀಪ: ಬಲ್ಕೀಶ್ ಬಾನು

KannadaprabhaNewsNetwork |  
Published : Oct 02, 2024, 01:07 AM IST
ಪೊಟೊ: 1ಎಸ್‌ಎಂಜಿಕೆಪಿ02ಶಿವಮೊಗ್ಗದ ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರಿ ನಿವೃತ್ತ ನೌಕರರ ಸಂಘ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ- 2024 ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉದ್ಘಾಟಿಸಿದರು. | Kannada Prabha

ಸಾರಾಂಶ

ಶಿವಮೊಗ್ಗದ ನಗರದ ಕುವೆಂಪು ರಂಗ ಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ- 2024 ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಹಿರಿಯರ ಅನುಭವ, ಅವರು ನಮಗೆ ಕಲಿಸಿದ ವಿದ್ಯೆ ಹಾಗೂ ಬೆಳೆಸಿದ ರೀತಿ ನಮ್ಮ ಜೀವನಕ್ಕೆ ದಾರಿ ದೀಪವಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಬಲ್ಕೀಶ್ ಬಾನು ತಿಳಿಸಿದರು.

ನಗರದ ಕುವೆಂಪು ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಹಿರಿಯ ನಾಗರಿಕರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರಿ ನಿವೃತ್ತ ನೌಕರರ ಸಂಘ, ವಿವಿಧ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ-2024 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಿರಿಯರು ಅತ್ಯಂತ ಸಂತಸದಿಂದ ಇರಬೇಕಾದ ದಿನವಾಗಿದೆ. ಮಕ್ಕಳಿಗೆ ಪೋಷಣೆ ಮಾಡಿ ವಿದ್ಯೆ ನೀಡಿ ಅವರನ್ನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿಸಿ ಪರಿಪೂರ್ಣ ಜೀವನವನ್ನು ನಡೆಸಿದ್ದಾರೆ. ನಮ್ಮ ಹಿರಿಯರು ನಮಗೆ ತೋರಿಸಿದ ದಾರಿಯಲ್ಲಿ ಇಂದು ನಾವು ಬದುಕನ್ನು ಸಾಗಿಸುತ್ತಿದ್ದು, ಅವರನ್ನು ಎಂದಿಗೂ ಮರೆಯಬಾರದು ಎಂದು ಹೇಳಿದರು.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಆಚರಿಸಲಾಗುತ್ತಿದ್ದು, ಇಂದು ಪ್ರತಿ ಕುಟುಂಬವು ಕೂಡ ತಮ್ಮ ಹಿರಿಯರೊಂದಿಗೆ ಈ ದಿನವನ್ನು ಆಚರಿಸಬೇಕು. ಆದರೆ ಮಕ್ಕಳಿಗೆ ತಂದೆ-ತಾಯಿ ಅವರಿಗೆ ಸಮಯ ಕೊಡುವಷ್ಟು ಬಿಡುವಿಲ್ಲ ಎಂದ ಅವರು, ಸರ್ಕಾರ ಅನೇಕ ಯೋಜನೆಗಳನ್ನು ಹಿರಿಯ ನಾಗರಿಕರ ರಕ್ಷಣೆಗೆ ಜಾರಿಗೆ ತಂದಿದೆ. ಸಂಕಷ್ಟದಲ್ಲಿ ಇರುವ ಹಿರಿಯರು ದೂರವಾಣಿ ಕರೆ ಮೂಲಕ ಅಥವಾ ಹಿರಿಯ ನಾಗರಿಕರ ಸಬಲೀಕರ ಇಲಾಖೆಯ ಮೂಲಕ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದರು.

ವಿಧಾನ ಪರಿಷತ್ ಸದಸ್ಯ ಡಾ.ಧನಂಜಯ ಸರ್ಜಿ ಮಾತನಾಡಿ, 60 ವರ್ಷಕ್ಕೆ ಅರಳು ಮರಳು ಎನ್ನುತ್ತಾರೆ. ಆದರೆ ಅದು ‘ಮರಳಿ ಅರಳು’ ಎಂದು ಬದಲಾಯಿಸಿ ಕೊಳ್ಳಬೇಕು. ಯಾವುದೇ ಕೆಲಸ, ಸಾಧನೆ ಮಾಡಲು ವಯಸ್ಸು ಮುಖ್ಯವಲ್ಲ. ಡಾ.ರಾಜ್‌ಕುಮಾರ್ ಅವರು 45 ವರ್ಷ ವಯಸ್ಸಾದ ಮೇಲೆ ಹಾಡಲು ಪ್ರಾರಂಭಿಸಿ ದರು. ಅಮಿತಾಬ್ ಬಚ್ಚನ್, ರಜಿನಿಕಾಂತ್ ಸೇರಿ ಅನೇಕ ನಟರು ವಿವಿಧ ಕ್ಷೇತ್ರದಲ್ಲಿನ ಹಿರಿಯರು ಇಂದಿಗೂ ಸಾಧನೆ ಮಾಡುತ್ತಿದ್ದಾರೆ. ಯಾರು ಕೂಡ ವಯಸ್ಸಾಗಿದೆ ಎಂದು ಭಾವಿಸಬೇಡಿ ಎಂದರು.

ಕೇಂದ್ರ ಸರ್ಕಾರ ರಾಷ್ಟ್ರೀಯ ವಯೋಶ್ರಿ ಯೋಜನೆಯಡಿ ಇಂದು ವಿಕಲಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ ಸುಮಾರು 50 ಲಕ್ಷ ರು. ಮೌಲ್ಯದ ಸಾಧನ ಸಲಕರಣೆಗಳನ್ನು ಅಲಿಂಕೋ ಸಂಸ್ಥೆ ಸಹಯೋಗದೊಂದಿಗೆ ವಿತರಿಸಲಾಗುತ್ತಿದೆ. ನಿಜವಾಗಿ ಅವಶ್ಯಕತೆ ಇರುವವರು ಮಾತ್ರ ಸಾಧನಾ ಸಲಕರಣೆಗಳನ್ನು ಬಳಸಿರಿ. ಒಂದು ಬಾರಿ ವೀಲ್ ಚೇರ್ ಸ್ಟಿಕ್‌ಗಳಿಗೆ ಹೊಂದಿಕೊಂಡರೆ ಸಾಯುವವರೆಗೂ ಅದರ ಸಹಾಯ ಬೇಕಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷರಾದ ಚಂದ್ರಭೂಪಾಲ್, ಜಿಲ್ಲಾ ವಿಕಲಚೇತನ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಶಶಿರೇಖಾ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೃಷ್ಣಪ್ಪ, ಅಲಿಂಕೊ ಸಂಸ್ಥೆ ವ್ಯವಸ್ಥಾಪಕ ಶಿವಕುಮಾರ ಮತ್ತು ಹಿರಿಯ ನಾಗರಿಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ